ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ :ಜಿನೇವಾ ಒಪ್ಪಂದದ ದಿನಾಚರಣೆಯನ್ನು ಆಚರಿಸುವ ಉದ್ದೇಶ ಮಾನವೀಯ ಮೌಲ್ಯದ ಮಹತ್ವವನ್ನು ತಿಳಿಸುವುದೇ ಆಗಿದೆ. ಯಾವುದಾದರೂ ದೇಶದ ಯೋಧರು, ಯುದ್ಧ ಅಥವಾ ಇನ್ನು ಯಾವುದೇ ಸಂದರ್ಭದಲ್ಲಿ ಇನ್ನೊಂದು ದೇಶದಲ್ಲಿ ಸಂಕಷ್ಟಕ್ಕೆ ಸಿಲುಕಿದ್ದರೆ, ಅವರನ್ನು ಸುರಕ್ಷಿತವಾಗಿ ಸ್ವದೇಶಕ್ಕೆ ಹಸ್ತಾಂತರಿಸಬೇಕು ಅನ್ನುವುದು ಈ ಒಪ್ಪಂದದ ಪ್ರಮುಖಾಂಶ. ಇದು ಮಾನವೀಯ ಮೌಲ್ಯವನ್ನು ಎತ್ತಿ ಹಿಡಿಯುವ ದಿನವಾಗಿದೆ ಎಂದು ಕುಂದಾಪುರ ಶಾಸಕ ಕಿರಣ್ ಕುಮಾರ್ ಕೊಡ್ಗಿ ಹೇಳಿದರು.
ಅವರು ಶನಿವಾರ ಇಲ್ಲಿನ ಬೋರ್ಡ್ ಹೈಸ್ಕೂಲಿನ ಕಲಾಮಂದಿರದಲ್ಲಿ ರೆಡ್‌ಕ್ರಾಸ್ ಸಂಸ್ಥೆಯ ಕುಂದಾಪುರ ಘಟಕದ ಆಶ್ರಯದಲ್ಲಿ ನಡೆದ ಜಿನೇವಾ ಒಪ್ಪಂದ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದರು.
ಕುಂದಾಪುರ ಉಪ ವಿಭಾಗದ ಸಹಾಯಕ ಆಯುಕ್ತೆ, ರೆಡ್‌ಕ್ರಾಸ್ ಘಟಕದ ಅಧ್ಯಕ್ಷೆ ರಶ್ಮಿ ಎಸ್.ಆರ್. ಮಾತನಾಡಿ, ಜಿನೇವಾ ಒಪ್ಪಂದವೆಂದರೆ ಅದು ಮಾನವೀಯತೆ ತಿಳಿಸುವ ದಿನ. ೧೬ ದೇಶಗಳಿಂದ ಆರಂಭಗೊಂಡ ಈ ಒಪ್ಪಂದಕ್ಕೆ ಈಗ ೧೯೬ ದೇಶಗಳು ಸಹಿ ಹಾಕಿವೆ. ಯುದ್ಧ ಮಾತ್ರವಲ್ಲ, ನಮ್ಮ ಬದುಕಿನಲ್ಲೂ ಮಾನವೀಯ ಮೌಲ್ಯ ಅತೀ ಅಗತ್ಯ. ಅದಕ್ಕಿಂತ ಮಿಗಿಲಾದುದು ಈ ಪ್ರಪಂಚದಲ್ಲಿ ಯಾವುದು ಇಲ್ಲ. ವಿದ್ಯಾರ್ಥಿಗಳು ಈ ದಿನದ ಮಹತ್ವವನ್ನು ಅರಿತುಕೊಂಡು, ತಮ್ಮ ದೈನಂದಿನ ಜೀವನದಲ್ಲೂ ತಮ್ಮಿಂದಾದ ಮಾನವೀಯತೆ, ಪರೋಪಕಾರ, ಸಹಾಯವನ್ನು ಮಾಡಿದರೆ ಅದು ನಿಮ್ಮನ್ನು ದೇಶದ ಪ್ರಜೆಯಾಗಿ ರೂಪುಗೊಳ್ಳುವಂತೆ ಮಾಡುತ್ತದೆ ಎಂದರು.
ರೆಡ್‌ಕ್ರಾಸ್ ಸಂಸ್ಥೆಯ ಕುಂದಾಪುರ ಘಟಕದ ಚೇರ್‌ಮನ್ ಎಸ್. ಜಯಕರ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು.
ಸಂಪನ್ಮೂಲ ವ್ಯಕ್ತಿ ಭಂಡಾರ್‌ಕಾರ್‍ಸ್ ಕಾಲೇಜಿನ ಪ್ರಾಂಶುಪಾಲ ಡಾ| ಶುಭಕರಾಚಾರಿ ಅವರು, ಈ ದಿನದ ಆಚರಣೆ ಆರಂಭಗೊಂಡ ಬಗ್ಗೆ, ಅದರ ಉದ್ದೇಶ, ಮಹತ್ವದ ಕುರಿತಂತೆ ಮಾತನಾಡಿದರು.
ಅಚ್ಲಾಡಿಯ ಕೆನರಾ ನರ್ಸಿಂಗ್ ಕಾಲೇಜಿನ ಪ್ರಾಂಶುಪಾಲ ನಟರಾಜನ್, ಯುವ ರೆಡ್‌ಕ್ರಾಸ್ ಸಂಯೋಜಕ ಸತ್ಯನಾರಾಯಣ ಪುರಾಣಿಕ್, ರೆಡ್‌ಕ್ರಾಸ್ ಕಾರ್‍ಯದರ್ಶಿ ವೈ. ಸೀತಾರಾಮ ಶೆಟ್ಟಿ, ಕೋಶಾಧಿಕಾರಿ ಶಿವರಾಮ ಶೆಟ್ಟಿ, ರೆಡ್‌ಕ್ರಾಸ್ ಘಟಕದ ಪದಾಧಿಕಾರಿಗಳು, ವಿವಿಧ ಕಾಲೇಜುಗಳ ಯುವ ರೆಡ್‌ಕ್ರಾಸ್ ಘಟಕಗಳ ಸಂಯೋಜಕರು, ವಿದ್ಯಾರ್ಥಿಗಳು, ಮತ್ತಿತರರು ಉಪಸ್ಥಿತರಿದ್ದರು.
ರೆಡ್‌ಕ್ರಾಸ್ ಉಪಸಭಾಪತಿ ಡಾ| ಉಮೇಶ್ ಪುತ್ರನ್ ಸ್ವಾಗತಿಸಿ, ಡಾ| ಸೋನಿ ಕಾರ್‍ಯಕ್ರಮ ನಿರೂಪಿಸಿದರು.