Video:
ಗುರುಕುಲ ಶಿಕ್ಷಣ ಸಂಸ್ಥೆಯಲ್ಲಿ 9ನೇ ವರ್ಷದ ಸಸ್ಯಾಮೃತ ಸಂಪನ್ನ
ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ: ನಮ್ಮ ಪೂರ್ವಜರು ತಾವೇ ತಮ್ಮ ಸುತ್ತಮುತ್ತಲಿನಲ್ಲಿ ಬೆಳೆಸಿದ ಆಹಾರ, ಪದಾರ್ಥಗಳನ್ನು ಸೇವಿಸುತ್ತಿದ್ದರು. ಆಗ ಆರೋಗ್ಯ ಸಮಸ್ಯೆಗಳು ಕಡಿಮೆ ಇತ್ತು. ಆದರೆ ಈಗ ಕಾಲ ಬದಲಾಗಿದೆ. ಎಲ್ಲಿಯೂ ಬೆಳೆದ, ಇಲ್ಲಿನ ಹವಾಗುಣಕ್ಕೆ ಸರಿ ಹೊಂದದ ಆಹಾರ ಸೇವಿಸುತ್ತಿದ್ದೇವೆ. ತಿನ್ನುವ ವಿಧಾನ, ಸಮಯ, ಆಹಾರ ಪದ್ಧತಿ ಎಲ್ಲವೂ ಬದಲಾಗಿದೆ. ಇದರಿಂದಲೇ ಈಗ ಒಂದಿಲ್ಲೊಂದು ಕಾಯಿಲೆಗಳು ಬರುತ್ತಿವೆ. ಎಲ್ಲ ರೋಗಕ್ಕೂ ನಾವು ಅಳವಡಿಸಿಕೊಂಡಿರುವ ಆಹಾರ ಪದ್ಧತಿಯೇ ಮೂಲ ಕಾರಣ ಎಂದು ಉಡುಪಿಯ ಧನ್ವಂತರಿ ಆಯುರ್ವೇದ ಆಸ್ಪತ್ರೆಯ ಸ್ಥಾಪಕ ಡಾ| ಸತ್ಯಜಿತ್ ಕಡ್ಕೊಲ್ ಹೇಳಿದರು.
ಅವರು ರವಿವಾರ ಬಾಂಡ್ಯ ಎಜುಕೇಶನಲ್ ಟ್ರಸ್ಟ್ ಅಽನದ ವಕ್ವಾಡಿಯ ಗುರುಕುಲ ವಿದ್ಯಾಸಂಸ್ಥೆ ಆಶ್ರಯದಲ್ಲಿ ಗುರುಕುಲ ಸಂಸ್ಥೆಯಲ್ಲಿ ಆಯೋಜಿಸಿದ ಸಾಂಪ್ರದಾಯಿಕ ಸಸ್ಯ ಪದಾರ್ಥಗಳ ಪರಿಚಯ ‘ಸಸ್ಯಾಮೃತ’ ಕಾರ್‍ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.
ಉತ್ತಮ ಆರೋಗ್ಯಕ್ಕಾಗಿ ದಿನಕ್ಕೆ ಎರಡೇ ಹೊತ್ತಿನ ಉತ್ತಮ ರೀತಿಯ ಊಟ ಸಾಕು. ಆದರೆ ಈಗ ನಾವು ಮಿತಿಗಿಂತ ಜಾಸ್ತಿ, ಅದು ಸಹ ಜೀರ್ಣವಾಗದಿರುವಂತಹ ಆಹಾರವನ್ನೇ ಹೆಚ್ಚಾಗಿ ಸೇವಿಸುತ್ತಿದ್ದೇವೆ. ಈ ರೀತಿ ಜೀರ್ಣವಾಗದೇ ಇರುವಂತಹ ಆಹಾರ ಸೇವಿಸಿ, ಅದು ಹೊಟ್ಟೆಯಲ್ಲಿಯೇ ಉಳಿದುಕೊಂಡು, ಒಂದೊಂದೇ ಕಾಯಿಲೆಗೂ ಉದ್ಭವಕ್ಕೆ ಕಾರಣವಾಗುತ್ತಿದೆ. ಕೃಷಿಯ ಬಗೆಗಿನ ನಮ್ಮ ಇಂದಿನ ಆಲಕ್ಷ್ಯತನ ೨೦೫೦ರ ವೇಳೆಗೆ ದೇಶದಲ್ಲಿ ಅತೀ ದೊಡ್ಡ ಆಹಾರ ಕೊರತೆಯಂತಹ ಸಮಸ್ಯೆಗೆ ಕಾರಣವಾಗಲಿದೆ ಎಂದವರು ಎಚ್ಚರಿಸಿದರು.
ಅರ್ಹ ಯೋಗ-ಸ್ಥಾಸ್ಥ್ಯ ಸಂಸ್ಥೆಯ ಸಂಸ್ಥಾಪಕಿ ಡಾ| ಸೂರ್ತಿ ಎ. ಶೆಟ್ಟಿ ಮಾತನಾಡಿ, ಒತ್ತಡ ಮುಕ್ತ ಬದುಕು ನಮ್ಮದಾಗಿರಬೇಕು. ಅದಕ್ಕಾಗಿ ಪ್ರತಿ ನಿತ್ಯ ಯೋಗ, ಪ್ರಾಣಾಯಾಮ, ಉತ್ತಮ ಉಸಿರಾಟದ ಬಗ್ಗೆ ಗಮನಹರಿಸಬೇಕು. ಆರೋಗ್ಯ ಪೂರ್ಣ ಬದುಕಿಗೆ ಪ್ರತಿ ದಿನ ೧ ಗಂಟೆ ವ್ಯಾಯಾಮ, ೨-೩ ಲೀ. ನೀರು ಕುಡಿಯಬೇಕು, ಇತಿಮಿತಿಯ ಉತ್ತಮ ಆಹಾರ, ೭ ಗಂಟೆ ನಿದ್ದೆ ಹಾಗೂ ಒತ್ತಡ ಮುಕ್ತವಾಗಿ ಯೋಚಿಸುತ್ತಿರಬೇಕು ಎಂದು ಸಲಹೆ ನೀಡಿದರು.
ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಸಂಸ್ಥಾಪಕ ಬಿ. ಅಪ್ಪಣ್ಣ ಹೆಗ್ಡೆ ಮಾತನಾಡಿದರು. ಬಾಂಡ್ಯ ಎಜುಕೇಶನಲ್ ಟ್ರಸ್ಟ್‌ನ ಜಂಟಿ ಆಡಳಿತ ನಿರ್ದೇಶಕ ಸುಭಾಶ್ಚಂದ್ರ ಶೆಟ್ಟಿ, ಕಾಲೇಜಿನ ಪ್ರಾಂಶುಪಾಲರು, ಉಪನ್ಯಾಸಕ ವೃಂದ, ಸಿಬಂದಿ ಉಪಸ್ಥಿತರಿದ್ದರು.
ಬಾಂಡ್ಯ ಎಜುಕೇಶನಲ್ ಟ್ರಸ್ಟ್‌ನ ಜಂಟಿ ಆಡಳಿತ ನಿರ್ದೇಶಕಿ ಅನುಪಮ ಎಸ್. ಶೆಟ್ಟಿ ಪ್ರಸ್ತಾವಿಸಿ, ಸ್ವಾಗತಿಸಿದರು. ಶಿಕ್ಷಕ ರಾಘವೇಂದ್ರ ಅಮ್ಮುಂಜೆ ಪರಿಚಯಿಸಿ, ಶಿಕ್ಷಕಿ ಸುಜಾತ ಶೆಟ್ಟಿ ಕಾರ್‍ಯಕ್ರಮ ನಿರೂಪಿಸಿದರು.
ಹಿಂದಿನ ಕಾಲದಂತೆ ಆಷಾಢ ಮಾಸದಲ್ಲಿ ಆರೋಗ್ಯ ದೃಷ್ಟಿಯಿಂದ ಪಾರಂಪರಿಕ ಆಹಾರ ಪದ್ಧತಿ ಬಗ್ಗೆ ಅರಿವು ಮೂಡಿಸುವ ಸಲುವಾಗಿ ಔಷಧಿಯ ಗುಣವುಳ್ಳ, ಸಾಂಪ್ರದಾಯಿಕ ಸಸ್ಯ ಪದಾರ್ಥಗಳಿಂದಲೇ ತಯಾರಿಸಿದ ೩೨ ಬಗೆಯ ಖಾದ್ಯಗಳನ್ನು ಬಸ್ರೂರಿನ ಬಾಣಸಿಗ ಮಹಾಬಲ ಹರಿಕಾರ್ ನೇತೃತ್ವದ ತಂಡ ತಯಾರಿಸಿ, ಬಂದವರಿಗೆ ಉಣಬಡಿಸಲಾಯಿತು. ಇದು ೯ ನೇ ವರ್ಷದ ಕಾರ್‍ಯಕ್ರಮ. ಮುರಿ ಹಣ್ಣಿನ ಪಾನಕ, ಈರುಳ್ಳಿ ಸೊಪ್ಪಿನ ಕೋಸುಂಬ್ರಿ, ವಾತಂಗಿ ಸೊಪ್ಪಿನ ಚಟ್ನಿ, ಬಾಳೆ ದಿಂಡಿನ ಪಚಡಿ, ಆರತಿ ಗುಂಡಿ ಪಲ್ಯ, ಪತ್ರೋಡೆ ಪಲ್ಯ, ಗಜಗಂಡೆ ಸೊಪ್ಪಿನ ಪಲ್ಯ, ಕಣಿಲೆ ಪಲ್ಯ, ದಾಸವಾಳ ಸೊಪ್ಪಿನ ಇಡ್ಲಿ, ಅತ್ತಿ ಕುಡಿ ತಂಬುಳಿ, ವಿಟಮಿನ್ ಸೊಪ್ಪಿನ ತಂಬುಳಿ, ನೆಲಬಸಲೆ ಸಾಂಬಾರು, ಎಲೆ ಉರಗ ಗುಳಿಯಪ್ಪ, ವೀಳ್ಯದೆಲೆ ಪಕೋಡ, ಲವಂಗದೆಲೆ ಗೆಣಸೆಲೆ, ಮಜ್ಜಿಗೆ ಹುಲ್ಲಿನ ಮಜ್ಜಿಗೆ, ಅರಿಶಿನ ಎಲೆ ಪಾಯಸ ಸೇರಿದಂತೆ ಸಹಿತ ತರಹೇವಾರಿ ಖಾದ್ಯಗಳನ್ನು ಸಿದ್ಧಪಡಿಸಲಾಗಿತ್ತು.