ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ: ನಮ್ಮ ದೇಶ ೧೯೪೭ರ ಆ. ೧೪ ರ ಮಧ್ಯರಾತ್ರಿ ೧೨ ಗಂಟೆಗೆ ವಿಭಜನೆಯಾಯಿತು. ಅವರು ಕಿರಿ ಕಿರಿ ಮಾಡುತ್ತಾರೆ ಅಂತ ದೇಶವನ್ನು ಇಬ್ಭಾಗ ಮಾಡುವುದು ಅನಿವಾರ್‍ಯವಾಯಿತು ಎಂದು ಆಗ ನೆಹರೂ ಅವರು ಹೇಳುತ್ತಾರೆ. ಆದರೆ ವಿಭಜನೆಯಿಂದ ಉಂಟಾದ ಈ ಕಿರಿಕಿರಿ ಇಂದಿಗೂ ನಿಂತಿಲ್ಲ. ಕಳೆದ ೭೬ ವರ್ಷಗಳಿಂದ ಇಡೀ ಜಗತ್ತಿಗೆ ಪಾಕಿಸ್ಥಾನ ಕಿರಿಕಿರಿ ಮಾಡುತ್ತಿದೆ. ಜಗತ್ತಿಗೆ ಭಯೋತ್ಪಾದಕರನ್ನು ರಫ್ತು ಮಾಡುತ್ತಿರುವ ಭೂ ಪ್ರದೇಶ ಪಾಕ್. ಅವರಿಗೆ ಶಾಂತಿ ಬೇಡ. ಅಶಾಂತಿಯೇ ಬೇಕಿರುವುದು ಎಂದು ಆರೆಸ್ಸೆಸ್ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್ ಹೇಳಿದರು.
ಅವರು ವಿಶ್ವ ಹಿಂದೂ ಪರಿಷತ್ – ಭಜರಂಗ ದಳ ಕುಂದಾಪುರ ನಗರ, ವಡೇರಹೋಬಳಿ ವತಿಯಿಂದ ಕುಂದಾಪುರದಲ್ಲಿ ಶನಿವಾರ ರಾತ್ರಿ ಅಖಂಡ ಭಾರತ ಸಂಕಲ್ಪ ದಿನದ ಅಂಗವಾಗಿ ಪಂಜಿನ ಮೆರವಣಿಗೆಯ ಬಳಿಕ ಕುಂದಾಪುರದ ಶಾಸ್ತ್ರಿ ಸರ್ಕಲ್ ಬಳಿ ನಡೆದ ಸಭಾ ಕಾರ್‍ಯಕ್ರಮವನ್ನುದ್ದೇಶಿಸಿ ಮಾತನಾಡಿದರು.
ಆಗಿನ ಕೆಲ ನಾಯಕರಲ್ಲಿ ದೇಶದ ಬಗೆಗಿನ ಭಾವನೆಯೇ ಸತ್ತು ಹೋಗಿದ್ದರಿಂದ, ಅಖಂಡವಾಗಿದ್ದ ದೇಶ ಇಬ್ಭಾಗ ಆಗುವಂತಾಯಿತು. ಭಾರತ್ ಜೋಡೋ ಅಂತ ಈಗ ಪ್ರಚಾರಕ್ಕಾಗಿ ಮಾಡುತ್ತಾರೆ. ಎಲ್ಲಿದೆ ಭಾರತ್ ಜೋಡೋ? ತುಂಡಾಗಿ ಹೋದ ಪಾಕಿಸ್ಥಾನದ ಬಗ್ಗೆ ಕಾಂಗ್ರೆಸ್‌ನವರು ಮಾತನಾಡುತ್ತಾರೆ. ಅಮೆರಿಕಾದಲ್ಲಿ ಹೋಗಿ ಭಾರತದ ಪ್ರಜಾಪ್ರಭುತ್ವದ ಬಗ್ಗೆ ಅವಹೇಳನ ಮಾಡುತ್ತಾರೆ. ಇಂತಹ ಅಪಾಯದ, ಗೊಂದಲದ ಸಂದರ್ಭದಲ್ಲಿ ನಾವಿದ್ದೇವೆ. ಆದರೆ ಜಗತ್ತಿನಲ್ಲಿಯೇ ದೇಶಕ್ಕೋಸ್ಕರ ಹೋರಾಡಿದ ತಾಯಂದಿರಿದ್ದರೆ ಅದು ಭಾರತ ಮಾತ್ರ. ಝಾನ್ಸಿ ರಾಣಿ ಲಕ್ಷ್ಮಿಬಾಯಿ, ಉಳ್ಳಾಲದ ಅಬ್ಬಕ್ಕ ಸಹಿತ ನೂರಾರು ಮಂದಿ ಇಂತಹ ವೀರ ವನಿತೆಯರು ಸಿಗುತ್ತಾರೆ. ಇಂತಹ ಹೋರಾಟದ ಇತಿಹಾಸ ಸಾವಿರಾರು ಇದೆ ಎಂದವರು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಮಾಜಿ ಸೈನಿಕ ರವಿಚಂದ್ರ ಶೆಟ್ಟಿ ಮಾತನಾಡಿದರು.
ಸಂಘ ಚಾಲಕ ಸತೀಶ್ಚಂದ್ರ ಕಾಳಾವರ್ಕರ್, ವಿಶ್ವ ಹಿಂದೂ ಪರಿಷತ್ – ಭಜರಂಗ ದಳ ಜಿಲ್ಲಾ ಪ್ರಮುಖ್ ಸುರೇಂದ್ರ ಮಾರ್ಕೋಡು, ತಾಲೂಕು ಪ್ರಮುಖ್ ಸುಧೀರ್ ಮೇರ್ಡಿ, ಮತ್ತಿತರರು ಉಪಸ್ಥಿತರಿದ್ದರು.
ಪಂಜಿನ ಮೆರವಣಿಗೆ
ಸಭಾ ಕಾರ್‍ಯಕ್ರಮಕ್ಕೂ ಮುನ್ನ ಹುಣ್ಸೆಕಟ್ಟೆಯ ನಾಗಯಕ್ಷೀ ಬೊಬ್ಬರ್ಯ ದೈವಸ್ಥಾನದಿಂದ ಕುಂದಾಪುರದವರೆಗೆ ಪಂಜಿನ ಮೆರವಣಿಗೆ ನಡೆಯಿತು. ಮೆರವಣಿಗೆಯಲ್ಲಿ ಸಾವಿರಾರು ಮಂದಿ ಪಾಲ್ಗೊಂಡಿದ್ದರು.