ಕುಂದಾಪುರ ಮಿರರ್ ಸುದ್ದಿ…
ಬೈಂದೂರು: ಸರ್ಕಾರಿ ಶಾಲೆಯನ್ನು ಉಳಿಸಿ, ಬೆಳೆಸುವ ನಿಟ್ಟಿನಲ್ಲಿ ದಾನಿಗಳು ಹಾಗೂ ಸಮಾಜದ ಸಹಕಾರ ಅತಿ ಮುಖ್ಯ ಎಂದು ಬೈಂದೂರು ಕ್ಷೇತ್ರದ ಶಾಸಕರಾದ ಗುರುರಾಜ್ ಗಂಟಿಹೊಳೆ ಹೇಳಿದರು.
ಚಿತ್ತೂರಿನ ಸರಕಾರಿ ಹಿರಿಯ ಪ್ರಾಥಮಿಕ ಹಾಗೂ ಪ್ರೌಢ ಶಾಲೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಎಂ. ಕೃಷ್ಣಮೂರ್ತಿ ಮಂಜರ ಸಾರಥ್ಯದ ಎಂ.ಎಸ್. ಮಂಜ ಚಾರಿಟೆಬಲ್ ಟ್ರಸ್ಟ್ ವತಿಯಿಂದ ನಿರ್ಮಾಣಗೊಂಡ ಹಾಗೂ ವಿವೇಕ ಕೊಠಡಿ ಉದ್ಘಾಟಿಸಿ, ವಿದ್ಯಾರ್ಥಿಗಳಿಗೆ ಸಮವಸ್ತ್ರ ಪಠ್ಯ ಪರಿಕರ ವಿತರಿಸಿ ಶಾಸಕರು ಮಾತನಾಡಿದರು.
ಸರ್ಕಾರಿ ಶಾಲೆಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಸಮೃದ್ಧ ಬೈಂದೂರು ಪರಿಕಲ್ಪನೆಯಡಿ 300ಟ್ರೀಸ್ ಕಾರ್ಯಕ್ರಮ ರೂಪಿಸಿಕೊಂಡಿದ್ದೇವೆ. ದಾನಿಗಳ ಮೂಲಕ ಸರ್ಕಾರಿ ಶಾಲೆಯ ವ್ಯವಸ್ಥೆ, ಮೂಲಸೌಕರ್ಯ ಸುಧಾರಿಸುವ ಕಾರ್ಯವೂ ನಡೆಯುತ್ತಿದೆ. ಅನೇಕ ಸಂಘ ಸಂಸ್ಥೆ ನಮ್ಮ ಈ ಅಭಿಯಾನಕ್ಕೆ ಕೈ ಜೋಡಿಸಿವೆ ಎಂದರು.
ಎಂ.ಕೃಷ್ಣಮೂರ್ತಿ ಮಂಜರ ಸಾರಥ್ಯದ ಎಂ.ಎಸ್.ಮಂಜ ಚಾರಿಟೆಬಲ್ ಟ್ರಸ್ಟ್ ಮಾಡಿರುವ ಕಾರ್ಯವೂ ಶ್ಲಾಘನೀಯವಾಗಿದೆ. ಸರ್ಕಾರಿ ಶಾಲೆ ಉಳಿಸುವ ನಿಟ್ಟಿನಲ್ಲಿ ಎಲ್ಲರ ಸಹಕಾರ ಅತ್ಯಗತ್ಯ ಎಂದರು.
ನಿವೃತ್ತ ಶಿಕ್ಷಕ ಗಣಪತಿ ಕಿಣಿ ಅವರಿಗೆ ಸನ್ಮಾನ ನಡೆಯಿತು.
ಶಾಲಾ ಮುಖ್ಯಶಿಕ್ಷಕರು, ಶಿಕ್ಷಕರು, ಎಸ್.ಡಿ.ಎಂ.ಸಿ. ಸದಸ್ಯರು, ಹಳೇ ವಿದ್ಯಾರ್ಥಿಗಳು, ಊರಿನ ಪ್ರಮುಖರು ಉಪಸ್ಥಿತರಿದ್ದರು.