ಕುಂದಾಪುರ ಮಿರರ್ ಸುದ್ದಿ….
ಕುಂದಾಪುರ: ದೇಶದ ಮೂಲನಿವಾಸಿಗಳಲ್ಲಿ ಒಂದಾದ ಕೊರಗ ಸಮುದಾಯವನ್ನು ಸಮಾಜದ ಮುಖ್ಯ ವಾಹಿನಿಗೆ ತರುವಲ್ಲಿ ಸರ್ಕಾರ ಹಾಗೂ ಎಲ್ಲಾ ಸಮಾಜ ಬೆಂಬಲ ಬೇಕಿದೆ ಎಂದು ಕೊರಗ ಸಮುದಾಯದ ಹಿರಿಯ ಮಹಿಳೆ ಆಲೂರಿನ ದಾರು ಕೊರಗ ಹೇಳಿದ್ದಾರೆ.
ಅವರು ಕುಂದಾಪುರ ತಾಲೂಕಿನ ಆಲೂರು ಹಾಡಿಮನೆ ಎಂಬಲ್ಲಿ ಕರ್ನಾಟಕ ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿ, ಜಿಲ್ಲಾಸಂಘಟನಾ ಸಮಿತಿ ಹಾಗೂ ಸಮುದಾಯ ಕುಂದಾಪುರ ಇವರ ಸಂಯುಕ್ತ ಆಶ್ರಯದಲ್ಲಿ ಸೋಮವಾರ ಹಮ್ಮಿಕೊಳ್ಳಲಾದ ‘ಕಾಡಿನ ಮಕ್ಕಳ ಬಣ್ಣದ ಹೆಜ್ಜೆ – ಕಾಡ್ತ್ ಕಿಜ್ರ್ ಬಣ್ತ್ ಹೆಜ್ಜ್’ ಎಂಬ ‘ಕೊರಗ ಮಕ್ಕಳ ರಂಗ ತರಬೇತಿ ಶಿಬಿರ’ವನ್ನು ಉದ್ಘಾಟಿಸಿ ಮಾತನಾಡಿದರು.
ದಿಕ್ಸೂಚಿ ಭಾಷಣ ಮಾಡಿದ ಸಮುದಾಯ ಕುಂದಾಪುರದ ಅಧ್ಯಕ್ಷ ಉದಯ ಗಾಂವ್ಕರ್ ಮಾತನಾಡಿ, ಕೊರಗ ಸಮಾಜ ಅಮೂಲ್ಯವಾದ ಸಂಸ್ಕೃತಿ ಮತ್ತು ಸಂಪ್ರದಾಯಗಳ ಮೇಳೈಕೆಯಾಗಿದೆ. ಗುಡಿ ಕೈಗಾರಿಕೆಗಳ ಮೂಲಕ ಆನಾದಿ ಕಾಲದಿಂದಲೂ ತಮ್ಮ ವೃತ್ತಿ ಜೀವನದೊಂದಿಗೆ ಸಮಾಜ ಹಾಗೂ ಪರಿಸದ ಕೊಂಡಿಯಾಗಿ ಬದುಕು ಕಟ್ಟಿಕೊಂಡವರು. ಅವರ ಪ್ರತಿಭೆಗಳನ್ನು ಬೆಳಕಿಗೆ ತರುವ ಕೆಲಸವಾಗಬೇಕು ಎಂದರು. ಸಭೆಯ ಅಧ್ಯಕ್ಷತೆಯನ್ನು ಕ.ಆ.ಹ.ಸ.ಸ. ಉಡುಪಿಯ ಜಿಲ್ಲಾ ಪ್ರ.ಕಾರ್ಯದರ್ಶಿ ಗಣೇಶ್ ಆಲೂರು ವಹಿಸಿದ್ದರು. ಆಲೂರು ಗ್ರಾಮ ಪಂಚಾಯತ್ ಅಧ್ಯಕ್ಷೆ ಜಲಜ ಶೆಡ್ತಿ, ಉಪಾಧ್ಯಕ್ಷ ರವಿ ಶೆಟ್ಟಿ, ಪಿ.ಡಿ.ಒ. ರೂಪಾ, ಹರ್ಕೂರು ಮಂಜಯ್ಯ ಶೆಟ್ಟ, ರಾಜೀವ ಪಡುಕೋಣೆ ಉಪಸ್ಥಿತರಿದ್ದರು. ಶಿಬಿರದ ನಿರ್ದೇಶಕ ವಾಸುದೇವ ಗಂಗೇರ ಪ್ರಸ್ತಾವಿಸಿದರು. ಶ್ರೀಧರ ನಾಡ ನಿರೂಪಿಸಿದರು. ಬಳಿಕ ಮಕ್ಕಳ ಬೇಸಿಗೆ ಶಿಬಿರ ಕಾರ್ಯಕ್ರಮ ನಡೆಯಿತು.