ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ: ಧಾರ್ಮಿಕ ಆಚರಣೆಯನ್ನು ನಡೆಸುವ ಬಗ್ಗೆ ಸರಕಾರಕ್ಕೆ ಭಿನ್ನಾಭಿಪ್ರಾಯವಿಲ್ಲ. ಆದರೆ ಆಚರಣೆಯ ಜೊತೆಗೆ ನಮ್ಮೆಲ್ಲರ ಆರೋಗ್ಯ ಕಾಪಾಡಿಕೊಳ್ಳುವ ಅನಿವಾರ್ಯತೆಯಿದೆ. ಈ ನಿಟ್ಟಿನಲ್ಲಿ ಆಚರಣೆಗಳು ಎಷ್ಟು ವೈಭವವಾಗಿ ನಡೆಯಬೇಕು ಎನ್ನುವುದನ್ನು ಅರಿತು ಪ್ರಧಾನಿಯವರು ತಿಳಿಸಿದಂತೆ ಸ್ವಯಂ ನಿಯಂತ್ರಣ ಮಾಡಿಕೊಳ್ಳಬೇಕು. ಸರಕಾರದ ಸುತ್ತೋಲೆಯಂತೆ ಧಾರ್ಮಿಕ ಆಚರಣೆಗೆ ಚ್ಯುತಿಯಾಗದಂತೆ ಆಚರಣೆ ನಡೆಸಬೇಕು ಎಂದು ಇಂಧನ ಹಾಗೂ ಕನ್ನಡ ಮತ್ತು ಸಂಸ್ಕ್ರತಿ ಇಲಾಖೆ ಸಚಿವ ಸುನಿಲ್ ಕುಮಾರ್ ಹೇಳಿದರು.
ಸೋಮವಾರ ಕುಂದಾಪುರ ತಾಲೂಕಿನ ಹಟ್ಟಿಯಂಗಡಿ ಶ್ರೀ ಸಿದ್ಧಿವಿನಾಯಕ ದೇವಸ್ಥಾನಕ್ಕೆ ಕುಟುಂಬ ಸಮೇತ ಭೇಟಿ ನೀಡಿ ಪೂಜೆ ಸಲ್ಲಿಸಿದ ಬಳಿಕ ಅವರು ಮಾಧ್ಯಮದವರೊಂದಿಗೆ ಮಾತನಾಡಿದರು.
ಕಳೆದ ಬಾರಿ ಕೋವಿಡ್ ಸಂದರ್ಭ 20 ಸಾವಿರ ಯಕ್ಷಗಾನ ಕಲಾವಿದರಿಗೆ ಗೌರವಧನ ನೀಡಲಾಗಿತ್ತು. ಈ ಬಾರಿಯೂ ಸರಕಾರದ ಮುಂದೆ ಚಿಂತನೆಯಿದ್ದು ಬೆಂಗಳೂರಿಗೆ ತೆರಳಿದ ಬಳಿಕ ಸಂಬಂಧಪಟ್ಟ ಅಧಿಕಾರಿಗಳ ಜೊತೆ ಚರ್ಚಿಸಲಾಗುತ್ತದೆ. ಯಕ್ಷಗಾನ ಮಾತ್ರವಲ್ಲ ಎಲ್ಲಾ ಅಕಾಡೆಮಿಗಳಿಗೆ ಹೊಸತನ ತರುವ ಪ್ರಾಮಾಣಿಕ ಪ್ರಯತ್ನ ಮಾಡಲಾಗುತ್ತದೆ ಎಂದರು.
ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರ ರಾಜ್ಯ ಪ್ರವಾಸದ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಅವರು, ಬಿ.ಎಸ್. ಯಡಿಯೂರಪ್ಪ ರಾಜ್ಯದ ಸರ್ವ ಶ್ರೇಷ್ಠ ನಾಯಕರು. ಅವರು ಪಕ್ಷ ಸಂಘಟನೆಗಾಗಿ ರಾಜ್ಯ ಪ್ರವಾಸ ಮಾಡುವುದು ಸ್ವಾಗತಾರ್ಹ. ಪಕ್ಷ ಸಂಘಟನೆಯನ್ನು ಯಾರು ಬೇಕಾದರೂ ಮಾಡಬಹುದು. ಸರಕಾರಕ್ಕೆ ಮತ್ತು ಪಕ್ಷಕ್ಕೆ ಅವರ ಸಲಹೆ ಅತ್ಯಗತ್ಯ ಎಂದರು.
ಹಟ್ಟಿಯಂಗಡಿ ಶ್ರೀ ಸಿದ್ಧಿವಿನಾಯಕ ದೇವಸ್ಥಾನದ ಧರ್ಮದರ್ಶಿ ಬಾಲಚಂದ್ರ ಭಟ್ ಸಚಿವರನ್ನು ಬರಮಾಡಿಕೊಂಡರು. ಈ ಸಂದರ್ಭ ತಾ.ಪಂ ಮಾಜಿ ಸದಸ್ಯ ಕರಣ ಪೂಜಾರಿ, ಹಟ್ಟಿಯಂಗಡಿ ಗ್ರಾ.ಪಂ ಅಧ್ಯಕ್ಷೆ ಅಮೃತಾ ಶೆಟ್ಟಿ, ಸದಸ್ಯ ಚಂದ್ರ ಮೊಗವೀರ, ಬಿಜೆಪಿ ಮುಖಂಡರಾದ ಪ್ರಭಾಕರ ಶೆಟ್ಟಿ, ಗುರುರಾಜ್ ಉಪಸ್ಥಿತರಿದ್ದರು.