ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ: ಬಸ್ ಫೂಟ್ ಬೋರ್ಡ್ ಮೇಲೆ ನಿಂತು ಕಾಲೇಜಿಗೆ ತೆರಳುತ್ತಿದ್ದ ವಿದ್ಯಾರ್ಥಿಯೋರ್ವ ಕೆಳಗೆ ಇಳಿಯುವ ಸಂದರ್ಭದಲ್ಲಿ ಆಯತಪ್ಪಿ ಖಾಸಗಿ ಬಸ್ ನ ಚಕ್ರದಡಿ ಸಿಲುಕಿ ಸ್ಥಳದಲ್ಲೇ ಧಾರುಣವಾಗಿ ಸಾವನ್ನಪ್ಪಿದ ಘಟನೆ ಹೆಮ್ಮಾಡಿಯಲ್ಲಿ ಶನಿವಾರ ಬೆಳಗ್ಗೆ ನಡೆದಿದೆ.
ಹೆಮ್ಮಾಡಿ ಸಮೀಪದ ಕಟ್ ಬೇಲ್ತೂರು ನಿವಾಸಿ, ಕೋಟೇಶ್ವರ ಕಾಗೇರಿ ಕಾಲೇಜಿನ ಅಂತಿಮ ವರ್ಷದ ಬಿಕಾಂ ವಿದ್ಯಾರ್ಥಿ ಸುದೀಪ್ (20) ಸಾವನ್ನಪ್ಪಿದ ದುರ್ದೈವಿ.
ಶನಿವಾರ ಬೆಳಿಗ್ಗೆ ಸಾಗರದಿಂದ ಕುಂದಾಪುರಕ್ಕೆ ತೆರಳುವ ಖಾಸಗಿ ಬಸ್ ನಲ್ಲಿ ಸುದೀಪ್ ಸಂಚರಿಸುತ್ತಿದ್ದಾಗ ಈ ಅವಘಡ ನಡೆದಿದೆ. ಹೆಮ್ಮಾಡಿ ಜಂಕ್ಷನ್ ಹಿಂದಿನ ನಿಲ್ದಾಣವಾದ ಕಟ್ ಬೇಲ್ತೂರಿನಲ್ಲಿ ಬಸ್ ಹತ್ತಿದ್ದ ಸುದೀಪ್ ಬಸ್ ನೊಳಗೆ ಜನ ಹಾಗೂ ವಿದ್ಯಾರ್ಥಿಗಳು ತುಂಬಿದ್ದರಿಂದ ಫೂಟ್ ಬೋರ್ಡ್ ಮೇಲೆ ನಿಂತು ಸಾಗುತ್ತಿದ್ದರು. ಹೆಮ್ಮಾಡಿಯಲ್ಲಿ ಬಸ್ ನಿಲ್ಲಿಸಿ ಪ್ರಯಾಣಿಕರನ್ನು ಇಳಿಸಿ ಮತ್ತೆ ಹತ್ತಿಸಿಕೊಳ್ಳಲಾಯಿತು. ಬಸ್ ಮತ್ತೆ ಚಲಿಸಲು ಪ್ರಾರಂಭಿಸುತ್ತಿದ್ದ ವೇಳೆ ಮಹಿಳೆಯೊಬ್ಬರು ಇಳಿಯದ ಹಿನ್ನೆಲೆ ಮತ್ತೆ ಅವರನ್ನು ಇಳಿಸಲು ಬಸ್ ನಿಲ್ಲಿಸುತ್ತಿದ್ದಾಗ ಸುದೀಪ್ ಹಠಾತ್ತನೆ ಆಯತಪ್ಪಿ ಕೆಳಗೆ ಬಿದ್ದಿದ್ದಾನೆ. ಬಸ್ ಗೆ ಮುಂಭಾಗದಲ್ಲಿ ಮಾತ್ರವೇ ಬಾಗಿಲಿದ್ದ ಕಾರಣ ಮುಂಬದಿಯ ಬಾಗಿಲಲ್ಲಿ ನಿಂತಿದ್ದ ಸುದೀಪ್ ಬಸ್ ನ ಮುಂಬದಿಯ ಚಕ್ರದಡಿಯಲ್ಲಿ ಸಿಲುಕಿದ್ದಾನೆ. ಚಾಲಕ ವಿದ್ಯಾರ್ಥಿಯನ್ನು ಉಳಿಸುವ ಪ್ರಯತ್ನ ನಡೆಸಿದರಾದರೂ ಸೊಂಟದ ಮೇಲೆ ಚಕ್ರ ಹರಿದ ಪರಿಣಾಮ ಗಂಭೀರ ಗಾಯಗೊಂಡ ಸುದೀಪ್ ಕೊನೆಯುಸಿರೆಳೆದಿದ್ದಾನೆ.