ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ :ಹೆಮ್ಮಾಡಿ ಮೂರ್ತೆದಾರರ ಸೇವಾ ಸಹಕಾರಿ ಸಂಘದ ಮೂಲಕ 300ಕ್ಕೂ ಹೆಚ್ಚು ಸ್ವಸಹಾಯ ಸಂಘಗಳ ರಚಿಸಿ, ಮಹಿಳೆಯರಿಗೆ ಸ್ವಾವಲಂಬನೆಗೆ ಅವಕಾಶ ಮಾಡಿಕೊಟ್ಟಿದೆ. ಸ್ವಂತ ಕಟ್ಟಡ ನಿರ್ಮಾಣ ಮಾಡಿದೆ. ಆರ್ಥಿಕ ಸ್ವಾವಲಂಬನೆಗೆ ಒತ್ತು ನೀಡಿದೆ. ಮೂರ್ತೆದಾರಿಕೆ ಇವತ್ತಿನ ದಿನ ಸ್ವಲ್ಪ ನಶಿಸಿದರೂ ಮುಂದೆ ತನ್ನ ಆರೋಗ್ಯಕಾರಿ ಗುಣಗಳಿಂದ ಜನಪ್ರಿಯತೆ ಪಡೆದುಕೊಳ್ಳಲಿದೆ ಎಂದು ಬೈಂದೂರು ವಿಧಾನಸಭಾ ಕ್ಷೇತ್ರದ ಶಾಸಕ ಬಿ.ಎಂ.ಸುಕುಮಾರ ಶೆಟ್ಟಿ ಹೇಳಿದರು.
ಅವರು ಹೆಮ್ಮಾಡಿ ಮೂರ್ತೆದಾರರ ಸೇವಾ ಸಹಕಾರ ಸಂಘದ ನಾಡಾ ಶಾಖೆ ಸ್ವಂತ ಕಟ್ಟಡ ಉದ್ಘಾಟಿಸಿ, ಸ್ವ ಸಹಾಯ ಗುಂಪುಗಳು ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದರು.
32 ವರ್ಷಗಳ ಹಿಂದೆ ಆರಂಭವಾದ ಈ ಸಂಘ ಸ್ವಂತ ಕಟ್ಟಡ ನಿರ್ಮಾಣದ ಜೊತೆಯಲ್ಲಿ ಮೂರ್ತೆದಾರರ ಕುಟುಂಬಗಳ ಹಿತ ಕಾಪಾಡುವ ನಿಟ್ಟಿನಲ್ಲಿ ಆರಂಭವಾದ ಈ ಸಹಕಾರ ಸಂಘ ಇವತ್ತು ಸ್ವಸಹಾಯ ಸಂಘಗಳ ರಚನೆಯ ಮೂಲಕ ಸಮಾಜಕ್ಕೆ ಆರ್ಥಿಕ ಶಕ್ತಿ ನೀಡುವ ಕೆಲಸ ಮಾಡಿದೆ. ಮಾತೃಪ್ರಧಾನ ವ್ಯವಸ್ಥೆಯ ಅಳಿಯ ಸಂತಾನ ಕಟ್ಟುಕಟ್ಟಳೆ ಹೊಂದಿರುವ ಈ ಪ್ರದೇಶದಲ್ಲಿ ಸ್ತ್ರೀ ಸಮರ್ಥವಾಗಿ ಜವಬ್ದಾರಿ ನಿರ್ವಹಿಸಿ ಸ್ತ್ರೀ ಕುಟುಂಬವನ್ನು ಮುನ್ನೆಡೆಸುತ್ತಿದ್ದಾಳೆ. ಸ್ವಸಹಾಯ ಸಂಘಗಳ ಮೂಲಕ ಉಳಿತಾಯ, ಸ್ವಾವಲಂಬನೆಗೆ ಪಡೆದ ಸಾಲದ ಸದ್ವಿನಿಯೋಗ, ಮರುಪಾವತಿಯ ಮೂಲಕ ಜವಬ್ದಾರಿಯನ್ನು ನಿರ್ವಹಿಸುತ್ತಿದ್ದಾಳೆ ಎಂದರು.
ಭದ್ರತಾ ಕೊಠಡಿಯನ್ನು ಮಾಜಿ ಶಾಸಕ ಕೆ.ಗೋಪಾಲ ಪೂಜಾರಿ ಉದ್ಘಾಟಿಸಿ ಶೇಂದಿ ನಿಷೇಧ ಕಾಯ್ದೆ ಜ್ಯಾರಿಗೊಳಿಸಿದಾಗ ಅವಿಭಜಿತ ದ.ಕ ಜಿಲ್ಲೆಯ ಮೂರ್ತೆದಾರ ನಾಯಕರುಗಳ ಹೋರಾಟದ ಫಲವಾಗಿ ಎಸ್.ಬಂಗಾರಪ್ಪ ಮುಖ್ಯಮಂತ್ರಿಯಾದ ಸಂದರ್ಭ ಸಹಕಾರ ಸಂಘಗಳ ನಿಯಮದಡಿ ಮೂರ್ತೆದಾರರ ಸಹಕಾರ ಸಂಘಗಳ ಆರಂಭಕ್ಕೆ ಅವಕಾಶ ದೊರಕಿಸಿಕೊಟ್ಟರು. ಪರಿಣಾಮ ಇವತ್ತು ಹೆಮ್ಮಾಡಿ ಮೂರ್ತೆದಾರರ ಸಹಕಾರ ಸಂಘ ಹೆಮ್ಮರವಾಗಿ ಬೆಳೆದಿದೆ ಎಂದರು.
ಹೆಮ್ಮಾಡಿ ಮೂರ್ತೆದಾರರ ಸೇವಾ ಸಹಕಾರ ಸಂಘದ ಅಧ್ಯಕ್ಷ ಉದಯ ಪೂಜಾರಿ ಅಧ್ಯಕ್ಷತೆ ವಹಿಸಿದ್ದರು.
ಸ್ವಸಹಾಯ ಗುಂಪುಗಳ ಲಾಭಾಂಶ ವಿತರಣೆಯನ್ನು ದ.ಕ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ನಿರ್ದೇಶಕ ಎಸ್.ರಾಜು ಪೂಜಾರಿ ನೆರವೇರಿಸಿದರು. ಗ್ರಾಹಕರ ಭದ್ರತಾ ಪೆಟ್ಟಿಗೆಯನ್ನು ಉಡುಪಿ ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷರಾದ ಜಯಕರ ಶೆಟ್ಟಿ ಇಂದ್ರಾಳಿ ಉದ್ಘಾಟಿಸಿದರು.
ಮುಖ್ಯ ಅತಿಥಿಗಳಾಗಿ ನಾಡ ಗ್ರಾ.ಪಂ.ಅಧ್ಯಕ್ಷ ದಿನೇಶ ಶೆಟ್ಟಿ, ಪಡುಕೋಣೆ ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ರಾಜೀವ ಪಡುಕೋಣೆ, ನಾಡಾ ಹಾಲು ಉತ್ಪಾದಕರ ಸಂಘದ ಅಧ್ಯಕ್ಷರಾದ ಶಂಕರ ಶೆಟ್ಟಿ ಬೆಳ್ಳಾಡಿ, ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ ಉಡುಪಿ ಇದರ ಅಂಕಿತ ಅಧಿಕಾರಿ ಡಾ|ಪ್ರೇಮಾನಂದ ಕೆ., ಮೂರ್ತೆದಾರರ ಮಹಾಮಂಡಲ ಬ್ರಹ್ಮಾವರ ಇದರ ಅಧ್ಯಕ್ಷ ಕೊರಗ ಪೂಜಾರಿ, ಮರವಂತೆ ಮಹಾರಾಜಸ್ವಾಮಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಸತೀಶ್ ಎಂ.ನಾಯಕ್, ಕೋಣ್ಕಿ ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷ ರಾಜು ಶೆಟ್ಟಿ ಕೋಣ್ಕಿ ಭಾಗವಹಿಸಿದ್ದರು.
ಈ ಸಂದರ್ಭದಲ್ಲಿ ನಾಡಾ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ|ಚಿಕ್ಮರಿ, ನಾಡಾ ಉಷಾ ಕ್ಲಿನಿಕ್‍ನ ವೈದ್ಯ ಡಾ|ಸುರೇಶ ಕುಮಾರ್ ಶೆಟ್ಟಿ, ಹಿಂದಿನ ಶಾಖಾ ಕಟ್ಟದ ಮಾಲೀಕರಾದ ಶ್ರೀಧರ್ ಶೇಟ್ ಅವರನ್ನು ಗೌರವಿಸಲಾಯಿತು. ಹಿರಿಯ ಮೂರ್ತೆದಾರ ಸದಸ್ಯರಿಗೆ ರೂ.10 ಸಾವಿರ ನಗದು ಪುರಸ್ಕಾರದೊಂದಿಗೆ ಸನ್ಮಾನಿಸಲಾಯಿತು.
ಹೆಮ್ಮಾಡಿ ಮೂರ್ತೆದಾರರ ಸಹಕಾರಿ ಸಂಘದ ಕೊಡುಗೆಯಾಗಿ ನಾಡಾ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಶವ ಶೀತಲೀಕರಣ ಯಂತ್ರವನ್ನು ಹಸ್ತಾಂತರ ಮಾಡಲಾಯಿತು. ಕಲ್ಪತರು ಸ್ವಸಹಾಯ ಗುಂಪಿನ ಸದಸ್ಯರುಗಳಿಗೆ ಲಾಭಾಂಶದ ಚೆಕ್ ವಿತರಿಸಲಾಯಿತು.
ಸಂಘದ ಉಪಾಧ್ಯಕ್ಷರಾದ ನರಸಿಂಹ ಪೂಜಾರಿ, ನಿರ್ದೇಶಕರಾದ ಕೃಷ್ಣ ಎಂ.ಪೂಜಾರಿ, ಶಂಕರ ಪೂಜಾರಿ, ರಘು ಪೂಜಾರಿ, ನಾರಾಯಣ ಪೂಜಾರಿ, ಶ್ರೀನಿವಾಸ ಪೂಜಾರಿ, ಶ್ರೀಮತಿ ಜಯಪದ್ಮ, ಶೇಖರ ಪೂಜಾರಿ, ಶ್ರೀಮತಿ ಸರೋಜ, ಶಾಖಾ ವ್ಯವಸ್ಥಾಪಕಿ ನಾಗರತ್ನ ಉಪಸ್ಥಿತರಿದ್ದರು.
ಹೆಮ್ಮಾಡಿ ಮೂರ್ತೆದಾರರ ಸೇವಾ ಸಹಕಾರ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೃಷ್ಣ ಬಿ.ಪೂಜಾರಿ ಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಆರ್.ಜೆ.ರೇವತಿ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು.
ಸಭಾ ಕಾರ್ಯಕ್ರಮದ ಬಳಿಕ ಸಾಂಸ್ಕøತಿಕ ಕಾರ್ಯಕ್ರಮವಾಗಿ ನೃತ್ಯ ವೈಭವ, ಮಂಜುನಾಥ ಕುಂದೇಶ್ವರ ಅವರಿಂದ ಮಿಮಿಕ್ರಿ ಕಾರ್ಯಕ್ರಮ, ಗೆಜ್ಜೆಗಿರಿ ಮೇಳದವರಿಂದ ಯಕ್ಷಗಾನ ‘ವಿಶ್ವವ್ಯಾಪಕ ನಾಮ ಶ್ರೀರಾಮ’ ಪ್ರದರ್ಶನಗೊಂಡಿತು.