ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ: ನಾವು ಯಶಸ್ಸನ್ನು ಬಯಸುತ್ತೇವೆ ಅಂದರೆ ಮೊದಲು ಭಗವಂತನನ್ನು ಕೇಂದ್ರೀಕರಿಸಿಕೊಳ್ಳಬೇಕು ಎಂದು ಉಡುಪಿಯ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದಂಗಳವರು ಹೇಳಿದರು.
ಅವರು ಶ್ರೀ ಮೈಲಾರೇಶ್ವರ ದೇವಸ್ಥಾನದ ಅಷ್ಟಬಂಧ ಬ್ರಹ್ಮಕಲಶೋತ್ಸವದ ಧಾರ್ಮಿಕ ಸಭೆಯಲ್ಲಿ ಆಶೀರ್ವಚನ ನೀಡಿದರು.
ಬಾಹ್ಯಶತ್ರುಗಳು ನಮ್ಮ ಕಣ್ಣಿಗೆ ಕಾಣುತ್ತಾರೆ. ಆದರೆ ನಮ್ಮೊಳಗಿನ ಶತ್ರುಗಳಾದ ಅರಿಷಡ್ವರ್ಗಗಳನ್ನು ನಿಗ್ರಹಿಸಿದರೆ ದೇವರಿಗೆ ಸಮೀಪವಾಗುತ್ತೇವೆ ಎಂದರು.
ಬಸ್ರೂರು ಮಹತೋಬಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರ, ಮಾಜೀ ಶಾಸಕ ಬಿ. ಅಪ್ಪಣ್ಣ ಹೆಗ್ಡೆ ಅಧ್ಯಕ್ಷತೆ ವಹಿಸಿ ಮಾತನಾಡಿ, ದೇವಸ್ಥಾನಗಳು ನಮ್ಮ ಸಂಸ್ಕಾರ ಮತ್ತು ಸಂಸ್ಕೃತಿಯನ್ನು ಉಳಿಸುವಲ್ಲಿ ಮಹತ್ತರ ಪಾತ್ರವಹಿಸುತ್ತವೆ. ಆದುದರಿಂದ ನಾವು ದೇವಸ್ಥಾನಕ್ಕೆ ಹೋಗುವ ಅಭ್ಯಾಸ ಮಾಡಿಕೊಳ್ಳಬೇಕು. ಆ ಮೂಲಕ ಮನಃಶಾಂತಿ ಪಡೆದುಕೊಳ್ಳಿ ಎಂದು ಕರೆ ನೀಡಿದರು.
ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೆ. ರಮೇಶ್ ಬಿಲ್ಲವ, ಚಂಡಿಕಾ ದುರ್ಗಾ ಪರಮೇಶ್ವರಿ ದೇವಸ್ಥಾನದ ಧರ್ಮದರ್ಶಿ ದೇವರಾಯ ಎಂ ಶೇರುಗಾರ್, ರಕ್ಷಾ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಸುರೇಶ್ ಬೆಟ್ಟಿನ್, ಉದ್ಯಮು ಎನ್.ವಿ.ದಿನೇಶ್ ನೇರಂಬಳ್ಳಿ, ಉದ್ಯಮಿ ದಿನೇಶ್ ಅಮೀನ್ ಉಪಸ್ಥಿತರಿದ್ದರು. ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷ ಅಶೋಕ್ ಬೆಟ್ಟಿನ್ ಸ್ವಾಗತಿಸಿದರು. ರಾಜೇಶ್ ಕೆ.ಸಿ. ನಿರೂಪಿಸಿದರು.