ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ :ಸ.ಹಿ.ಪ್ರಾ.ಶಾಲೆ ಕಾಳಾವರ ಇದರ ಶತಮಾನೋತ್ಸವ ಕಾರ್ಯಕ್ರಮ ಫೆ.4 ಶನಿವಾರ ನಡೆಯಲಿದೆ. ನೂತನವಾಗಿ ನಿರ್ಮಿಸಲಾಗಿರುವ ಡಾ|ಅಸೋಡು ಅನಂತರಾಮ ಶೆಟ್ಟಿ ಬಯಲು ರಂಗಮಂದಿರ ಮತ್ತು ಕಾಪು ಮುದ್ದಣ್ಣ ಶೆಟ್ಟಿ ಕಂಪ್ಯೂಟರ್ ಕಲಿಕಾ ಕೇಂದ್ರದ ಉದ್ಘಾಟನೆ ನೆರವೇರಲಿದೆ.
ಬೆಳಿಗ್ಗೆ 9 ಗಂಟೆಗೆ ಗ್ರಾ.ಪಂ. ಅಧ್ಯಕ್ಷರಾದ ರಾಮಚಂದ್ರ ನಾವಡ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ. ನಿವೃತ್ತ ಶಿಕ್ಷಣಾಧಿಕಾರಿ ಕೆ.ರಾಜೀವ ಶೆಟ್ಟಿ ಧ್ವಜಾರೋಹಣ ನೆರವೇರಿಸಲಿದ್ದಾರೆ. ರಾತ್ರಿ 7.30 ಕ್ಕೆ ನಡೆಯುವ ಶತಮಾನೋತ್ಸವ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ವಹಿಸಲಿದ್ದಾರೆ.
ಬಯಲು ರಂಗಮಂದಿರವನ್ನು ರಾಜೀವ ಗಾಂಧಿ ಆರೋಗ್ಯ ವಿ.ವಿಯ ವಿಶ್ರಾಂತ ಕುಲಪತಿಗಳಾದ ಡಾ|ಸುಣ್ಣಾರಿ ಚಂದ್ರಶೇಖರ ಶೆಟ್ಟಿ ಉದ್ಘಾಟಿಸಲಿದ್ದಾರೆ. ಕಂಪ್ಯೂಟರ್ ಕಲಿಕಾ ಕೇಂದ್ರವನ್ನು ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ ಉದ್ಘಾಟಿಸಲಿದ್ದಾರೆ. ಸಾಂಸ್ಕøತಿಕ ಕಾರ್ಯಕ್ರಮದ ಅಂಗವಾಗಿ ಸಂಜೆ 6.30ಕ್ಕೆ ಅಂಗನವಾಡಿ ಮತ್ತು ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ, ರಾತ್ರಿ 9ಕ್ಕೆ ಶಾಲಾ ವಿದ್ಯಾರ್ಥಿಗಳಿಂದ ವಿವಿಧ ವಿನೋದಾವಳಿಗಳು ಬಳಿಕ ಶಾಲಾ ವಿದ್ಯಾರ್ಥಿಗಳಿಂದ ನಾಟಕ ‘ಶ್ರೀ ಕೃಷ್ಣ ವಿಜಯ’ ಪ್ರದರ್ಶನಗೊಳ್ಳಲಿದೆ. ನಂತರ ರಘು ಪಾಂಡೇಶ್ವರ ಸಾರಥ್ಯದ ಸಾಧನ ಕಲಾ ತಂಡ ಸಾಸ್ತಾನ ಇವರಿಂದ ಸಾಮಾಜಿಕ ನಗೆ ನಾಟಕ ‘ಕಿತಾಪತಿ ಕಿಟ್ಟ’ ರಾತ್ರಿ 2 ಗಂಟೆಯಿಂದ ಹಳೇ ವಿದ್ಯಾರ್ಥಿಗಳಿಂದ ವಿವಿಧ ವಿನೋದಾವಳಿಗಳು ನಡೆಯಲಿದೆ.
ಶತಮಾನದ ಇತಿಹಾಸ:
ಸುಮಾರು 100 ವರುಷಗಳ ಹಿಂದೆ ವಿದ್ಯೆ ಎನ್ನುವುದು ಮರೀಚಿಕೆಯಾಗಿರುವ ಕಾಲದಲ್ಲಿ ಕಾಳಾವರ ಗ್ರಾಮಸ್ಥರು ಸೇರಿ ಆನಗಳ್ಳಿ ಮನೆಯವರ ಜಾಗದಲ್ಲಿ ಒಂದು ಗುರುಕುಲ ನಿರ್ಮಿಸಿ ಕಾಳಾವರ ಶ್ಯಾಮ ಪುರಾಣಿಕರು ಅಧ್ಯಾಪಕರಾಗಿ ಶಾಲೆ ಪ್ರಾರಂಭವಾಗಿತ್ತಂತೆ. ನಂತರ ಕೋಟೇಶ್ವರದಿಂದ ಹಾಲಾಡಿಯವರೆಗೆ ಎಲ್ಲೂ ಸರ್ಕಾರಿ ಶಾಲೆ ಇಲ್ಲದಿದ್ದಾಗ ಗ್ರಾಮಸ್ಥರಿಂದ ಈಗಿರುವ ಸ್ಥಳದಲ್ಲಿ 1925-26ನೇ ಸಾಲಿನಲ್ಲಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಪ್ರಾರಂಭಗೊಂಡಿತು. 1955 ರಲ್ಲಿ ಆಗಿನ ಮದ್ರಾಸ ಸರ್ಕಾರದ ಶಿಕ್ಷಣ ಮಂತ್ರಿ ಹೊಸ ಕಟ್ಟಡಕ್ಕೆ ಅಡಿಕಲ್ಲು ಹಾಕಿ ಆಗಿನ ಗುತ್ತಿಗೆದಾರರಾದ ಕಾಪು ಸಂಜೀವ ಶೆಟ್ಟರು ಸುಸಜ್ಜಿತವಾದ ಶಾಲಾ ಕಟ್ಟಡವನ್ನು ಊರಿನ ಮುಖಂಡರು ಹಾಗೂ ಸರ್ಕಾರದ ಸಹಾಯದಿಂದ ಮಾಡಿದರು. 1956ರಲ್ಲಿ ಆಗಿನ ಮದ್ರಾಸ್ ಸರ್ಕಾರದ ಮುಖ್ಯಮಂತ್ರಿಗಳಾದ ಕಾಮರಾಜ ನಾಡರ್‍ರವರಿಂದ ಶಾಲಾ ಕಟ್ಟಡ ಉದ್ಘಾಟನೆಗೊಂಡಿತು. 1986ರಲ್ಲಿ ವಜ್ರಮಹೋತ್ಸವನ್ನು ಆಚರಿಸಿಕೊಂಡಿತು. ಆದರೆ ಇತ್ತೀಚಿನ ದಿನಗಳಲ್ಲಿ ಆಂಗ್ಲ ಮಾಧ್ಯಮ ಶಾಲೆಗಳು ಹೆಚ್ಚು ತೆರೆದಿರುವುದರಿಂದ ಮಕ್ಕಳ ಸಂಖ್ಯೆ ಕಡಿಮೆ ಆಗುತ್ತಾ ಬಂತು, ಸುಮಾರು 300 ವಿದ್ಯಾರ್ಥಿಗಳು ವ್ಯಾಸಂಗ ಮಾಡಿತ್ತಿದ್ದ ಶಾಲೆಯಲ್ಲಿ ಇದೀಗ 160ಕ್ಕೆ ಇಳಿದಿದೆ.
ಶತಮಾನದ ಹೊಸ್ತಿಲಲ್ಲಿರುವ ಈ ಶಾಲೆಯಲ್ಲಿ ಶತಮಾನೋತ್ಸವ ಆಚರಿಸಿ ಎಲ್‍ಕೆಜಿ, ಯುಕೆಜಿ ಮತ್ತು ಒಂದನೇ ತರಗತಿಯಿಂದಲೇ ಆಂಗ್ಲ ವಿಭಾಗವನ್ನು ಪ್ರಾರಂಭಿಸಿ, ಗ್ರಾಮೀಣ ಭಾಗದ ಮಕ್ಕಳಿಗೂ ಆಂಗ್ಲ ಮಾಧ್ಯಮದ ಗುಣಾತ್ಮಕ ಶಿಕ್ಷಣ ನೀಡುವುದು ಮತ್ತು ಶಾಲೆಗೆ ಅತೀ ಅಗತ್ಯವಾದ ಬೇಡಿಕೆಗಳನ್ನು ಈಡೇರಿಸಬೇಕೆಂದು ತೀರ್ಮಾನಿಸಿ ಆ ಪ್ರಯುಕ್ತ ಈಗಾಗಲೆ ಶತಮಾನೋತ್ಸವ ಸಮಿತಿ ಮತ್ತು ಹಳೇ ವಿದ್ಯಾರ್ಥಿ ಸಂಘವನ್ನು ರಚಿಸಿ ಕಾರ್ಯಪ್ರವೃತ್ತವಾಗಲಾಗಿದೆ.
ಈ ಶಾಲೆ ಗುಣಮಟ್ಟದ ಶಿಕ್ಷಣಕ್ಕೆ ಪ್ರಸಿದ್ಧಿ ಪಡೆದಿದೆ. ಶಾಲೆಯ ಶಿಸ್ತು, ಸ್ವಚ್ಛತೆ, ಕಲಿಕಾಕ್ರಮ ಉನ್ನತ ಅಧಿಕಾರಿಗಳು ಜನಪ್ರತಿನಿಧಿಗಳ ಮೆಚ್ಚುಗೆಗೆ ಪಾತ್ರವಾಗಿದೆ. 2021-22ನೇ ಸಾಲಿನ ಸ್ವಚ್ಛ ವಿದ್ಯಾಲಯ ಜಿಲ್ಲಾ ಮಟ್ಟದ ಪ್ರಶಸ್ತಿ ಪಡೆದಿದೆ. ಕ್ರೀಡೆ, ಸಾಂಸ್ಕøತಿಕವಾಗಿ ಶಾಲೆ ಗುರುತಿಸಿಕೊಂಡಿದೆ. ಭಗವದ್ಗೀತೆ ಕಂಠಪಾಠ ಸ್ಪರ್ಧೆ, ಚಿತ್ರಕಲೆ, ಪ್ರತಿಭಾ ಕಾರಂಜಿಗಳಲ್ಲಿ ಬಹುಮಾನ ಪಡೆದುಕೊಂಡಿದೆ. ಶಾಲೆಯ ಸ್ಕೌಟ್ ಮಕ್ಕಳು ಮೂಡುಬಿದಿರೆಯ ಆಳ್ವಾಸ್ ನಲ್ಲಿ ನಡೆದ ಅಂತರಾಷ್ಟ್ರೀಯ ಮಟ್ಟದ ಜಂಬೂರಿಯಲ್ಲಿ ಭಾಗವಹಿಸಿದ್ದಾರೆ. ಚೆಸ್ ಸ್ಪರ್ಧೆಯಲ್ಲಿ ರಾಜ್ಯಮಟ್ಟವನ್ನು ಇಲ್ಲಿನ ವಿದ್ಯಾರ್ಥಿ ಪ್ರತಿನಿಧಿಸಿದ್ದಾರೆ.
ಶಾಲೆಯು 2.16 ಎಕ್ರೆ ಸ್ಥಳವನ್ನು ಹೊಂದಿದ್ದು, ಸಾಕಷ್ಟು ತರಗತಿ ಕೋಣೆ, ಸಭಾಭವನ, ಪೀಠೋಪಕರಣ, ಪಾಠೋಪಕರಣ, ವಿದ್ಯಾರ್ಥಿಗಳಿಗೆ ಬೇಕಾಗುವ ಬಹುತೇಕ ಮೂಲಭೂತ ಸೌಕರ್ಯಗಳನ್ನು ಶಾಲೆ ಹೊಂದಿದೆ. ಪ್ರಸ್ತುತ ಶಾಲೆಯಲ್ಲಿ ಯು.ಕೆ.ಜಿ ಮತ್ತು 1ನೇ ತರಗತಿ ಹಾಗೂ 6,7 ತರಗತಿ ಆಂಗ್ಲ ಮಾಧ್ಯಮವಾಗಿದೆ. ಮುಂದಿನ ವರ್ಷ ಇಂಗ್ಲಿಷ್ ಮಾಧ್ಯಮವು ಸಂಪೂರ್ಣ ಎಲ್ಲ ತರಗತಿಗೂ ವಿಸ್ತರಿಸಲಾಗುವುದು.
400 ಮೀಟರ್ ಉದ್ದದ ಬಾಕಿ ಇರುವ ಶಾಲಾ ಆವರಣ ಗೋಡೆ, ಚಿಕ್ಕ ಮಕ್ಕಳಿಗೆ ಬಾಲವನ ನಿರ್ಮಾಣವಾಗಬೇಕಾಗಿದೆ. ಶಾಲಾ ವಾಹನ, ಎಲ್ಲ ತರಗತಿಗೂ ಸ್ಮಾರ್ಟ್ ಕ್ಲಾಸ್ ಮೊದಲಾದ ಅಗತ್ಯತೆಗಳು ಈಡೇರಬೇಕಾಗಿದೆ.
ಶಾಲೆಯ ಎಸ್.ಡಿ.ಎಂ.ಸಿ ಅಧ್ಯಕ್ಷರಾಗಿ ಸತೀಶ್ ಜೋಗಿ, ಉಪಾಧ್ಯಕ್ಷರಾಗಿ ಪ್ರೇಮಾಲಾಕ್ಷಿ ಕಾರ್ಯನಿರ್ವಹಿಸುತ್ತಿದ್ದಾರೆ. ಶಾಲಾ ಪ್ರಭಾರ ಮುಖ್ಯೋಪಾಧ್ಯಾಯರಾಗಿ ಪ್ರೇಮ ಕೆ., ಸಹಶಿಕ್ಷಕರಾಗಿ ಉದಯ ಕುಮಾರ, ಆರತಿ, ರತ್ನಾವತಿ ಶೆಟ್ಟಿ, ಬಾಲಕೃಷ್ಣ ಶೆಟ್ಟಿ (ದೈ.ಶಿ.ಶಿಕ್ಷಕರು), ನಾಗರತ್ನ ಎಚ್., ಶೈಲಜ, ಗೌರವ ಶಿಕ್ಷಕರಾಗಿ ರಶ್ಮಿ, ಗುರುಪ್ರಿಯಾ, ಕಂಪ್ಯೂಟರ್ ಶಿಕ್ಷಕರಾಗಿ ಪೂರ್ಣಿಮಾ ಸೇವೆ ಸಲ್ಲಿಸುತ್ತಿದ್ದಾರೆ.
ಶತಮಾನೋತ್ಸವ ಸಮಿತಿ ಗೌರವ ಅಧ್ಯಕ್ಷರಾಗಿ ಶಾನಾಡಿ ಚಂದ್ರಶೇಖರ ಹೆಗ್ಡೆ ಕಾಳಾವರ, ಅಧ್ಯಕ್ಷರಾಗಿ ಡಾ|ಭಾಸ್ಕರ ಶೆಟ್ಟಿ ಸಳ್ವಾಡಿ, ಕಾರ್ಯದರ್ಶಿಯಾಗಿ ಉದಯ ಕುಮಾರ ಶೆಟ್ಟಿ ಕಾಳಾವರ ಸೇವೆ ಸಲ್ಲಿಸುತ್ತಿದ್ದಾರೆ.
ಹಳೇ ವಿದ್ಯಾರ್ಥಿ ಸಂಘದ ಗೌರವ ಅಧ್ಯಕ್ಷರಾಗಿ ಎ.ರೋಶನ್ ಕುಮಾರ್ ಶೆಟ್ಟಿ ಕಾಳಾವರ, ಅಧ್ಯಕ್ಷರಾಗಿ ಭರತ್ ಕುಮಾರ್ ಶೆಟ್ಟಿ ಕಾಳಾವರ, ಕಾರ್ಯದರ್ಶಿಯಾಗಿ ಜಯಪ್ರಕಾಶ್ ಶೆಟ್ಟಿ, ಹಾಗೂ ಎಲ್ಲಾ ಹಳೇ ವಿದ್ಯಾರ್ಥಿಗಳು, ಶತಮಾನೋತ್ಸವ ಸಲಹಾ ಸಮಿತಿ ಕಾರ್ಯಕ್ರಮದ ಯಶಸ್ಸಿಗೆ ಶ್ರಮಿಸುತ್ತಿದೆ.