ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದಲ್ಲಿ ಎ.30 ರಿಂದ ಮೇ.11 ತನಕ ಅಷ್ಟಬಂಧ ಬ್ರಹ್ಮಕಲಶೋತ್ಸವ

0
276

ಕುಂದಾಪುರ ಮಿರರ್ ಸುದ್ದಿ…

ಕುಂದಾಪುರ :ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದಲ್ಲಿ ಅಷ್ಟಬಂಧ ಬ್ರಹ್ಮಕಲಶೋತ್ಸವವು ಎಪ್ರಿಲ್ 30-2023 ರಿಂದ ಮೇ 11-2023 ರ ತನಕ ನಡೆಸುವುದೆಂದು ತೀರ್ಮಾನಿಸಲಾಗಿದೆ ಎಂದು ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದ ವ್ಯವಸ್ಥಾನಾ ಸಮಿತಿ ಅಧ್ಯಕ್ಷರಾದ ಕೆರಾಡಿ ಚಂದ್ರಶೇಖರ ಶೆಟ್ಟಿ ಹೇಳಿದರು.

ಅವರು ಕೊಲ್ಲೂರಿನಲ್ಲಿ ಸುದ್ಧಿಗೋಷ್ಠಿಯಲ್ಲಿ ಮಾತನಾಡಿದರು.

ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದಲ್ಲಿ ಈ ಹಿಂದೆ 1972 ನೇ ಇಸವಿಯಲ್ಲಿ ನಡೆದಿದ್ದು, ಅದು ನಡೆದು 30 ವರ್ಷಗಳ ನಂತರ ಅಂದರೆ 2002 ನೇ ಇಸವಿಯಲ್ಲಿ ಅಷ್ಟಬಂಧ ಬ್ರಹ್ಮಕಲಶೋತ್ಸವ ನಡೆದಿದೆ. ಈಗ 21 ವರ್ಷಗಳ ನಂತರ ಕ್ಷೇತ್ರದಲ್ಲಿ ಅಷ್ಟಬಂಧ ಬ್ರಹ್ಮಕಲಶೋತ್ಸವ ನಡೆಸಲು ಸಮಯ ಒದಗಿ ಬಂದಿದೆ. ಪ್ರತಿ 12 ವರ್ಷಗಳಿಗೊಮ್ಮೆ ಅಷ್ಟಬಂಧ ನಡೆಸಬೇಕೆಂದು ಶಾಸ್ತ್ರ ಹೇಳುತ್ತದೆ. ಅನಿವಾರ್ಯ ಕಾರಣಗಳಿಂದ ಈ ದೇವಸ್ಥಾನದಲ್ಲಿ ಪ್ರತಿ 12 ವರ್ಷಗಳಿಗೊಮ್ಮೆ ಅಷ್ಟಬಂಧ ನಡೆಸಲು ಸಾಧ್ಯವಾಗಿರುವುದಿಲ್ಲ. ಈ ಒಂದು ದೇವತಾ ಕಾರ್ಯ ನಡೆಸಲು ಈಗ ಕಾಲ ಕೂಡಿ ಬಂದಿದೆ.
ಇನ್ನೊಂದು ವಿಶೇಷ ಎಂದರೆ 1972 ನೇ ಇಸವಿಯಲ್ಲಿ ಅಷ್ಟಬಂಧ ಬ್ರಹ್ಮಕಲಶೋತ್ಸವ ನಡೆಸುವಾಗ ದೇವಸ್ಥಾನದ ಪರಿವಾರ ದೇವರುಗಳಲ್ಲಿ ಪ್ರಮುಖವಾದ ಶ್ರೀ ವೀರಭದ್ರ ದೇವರ ಗುಡಿಯನ್ನು ಜೀರ್ಣೋದ್ಧಾರಗೊಳಿಸಿ ನೂತನ ದೇವಸ್ಥಾನದ ಕಲಶ ಪ್ರತಿಷ್ಠೆ ಮತ್ತು ಕಲಾವೃದ್ಧಿ ಸೇವೆಗಳನ್ನು ನಡೆಸಿ ಲೋಕಾರ್ಪಣೆಗೊಳಿಸಲಾಗಿರುತ್ತದೆ. 2002ನೇ ಇಸವಿಯಲ್ಲಿ ನಡೆದ ಅಷ್ಟಬಂಧ ಬ್ರಹ್ಮಕಲಶೋತ್ಸವ ಸಂದರ್ಭದಲ್ಲಿ ಕ್ಷೇತ್ರಕ್ಕೆ ನೂತನ ಶಿಲಾ ಮಹಾದ್ವಾರ ಸಮರ್ಪಣೆ, ನೂತನ ಸ್ವಾಗತ ಗೋಪುರ ಸಮರ್ಪಣೆ, ಸ್ವರ್ಣಲೇಪಿತ ಧ್ವಜಸ್ಥಂಭ ಸಮರ್ಪಣೆ ಕಾರ್ಯ ನಡೆದಿದೆ.

Click Here

50 ವರ್ಷಗಳ ನಂತರ ದಾನಿಗಳಾದ ಮಾರಣಕಟ್ಟೆ ಕೃಷ್ಣಮೂರ್ತಿ ಮಂಜರು ಹಾಗೂ ಅವರ ಕುಟುಂಬಸ್ಥರು ನಿರ್ಮಿಸಿ ದೇವಸ್ಥಾನಕ್ಕೆ ನೀಡಿರುವ ವೀರಭದ್ರ ದೇವರ ನೂತನ ಶಿಲಾಮಯ ದೇವಸ್ಥಾನವು ಕಳೆದ ಮೇ ತಿಂಗಳಲ್ಲಿ ಲೋಕಾರ್ಪಣೆ ಗೊಂಡಿದೆ. ಅಲ್ಲದೇ ಉದ್ಯಮಿ ಮುರ್ಡೇಶ್ವರದ ಆರ್. ಎನ್. ಶೆಟ್ಟಿ ಇವರ ಪುತ್ರ ಉದ್ಯಮಿ ಸುನಿಲ್ ಆರ್.ಶೆಟ್ಟಿ ಇವರು ನೀಡಿರುವ ನೂತನ ಬ್ರಹ್ಮರಥವು ಫೆ.16.ರಂದು ಶ್ರೀ ದೇವಿಗೆ ಸಮರ್ಪಿಸುವ ಮೂಲಕ ಲೋಕಾರ್ಪಣೆಗೊಂಡಿರುವುದು ಈ ಅಷ್ಟಬಂಧ ನಡೆಯುವ ಸಂದರ್ಭದಲ್ಲಿ ವಿಶೇಷವಾಗಿದೆ ಎಂದರು.

ಜಿಲ್ಲೆಯ ಅಪರ ಜಿಲ್ಲಾಧಿಕಾರಿಗಳು, ದೇವಸ್ಥಾನದ ಪ್ರಭಾರ ಕಾರ್ಯನಿರ್ವಹಣಾಧಿಕಾರಿ ವೀಣಾ ಬಿ.ಎನ್ ಮಾತನಾಡಿ, ಈ ಅಷ್ಟಬಂಧ ಬ್ರಹ್ಮಕಲಶೋತ್ಸವ ಕಾರ್ಯಕ್ಕೆ ಅಂದಾಜು 5 ಕೋಟಿ ವೆಚ್ಚವಾಗಬಹುದು ಎಂದು ಅಂದಾಜಿಸಲಾಗಿದ್ದು, ದೇವಸ್ಥಾನದಿಂದ ರೂ. 2 ಕೋಟಿಯನ್ನು ಬಳಸಿಕೊಳ್ಳಲು ಮತ್ತು ಉಳಿದ 3 ಕೋಟಿ ರೂಪಾಯಿಗಳನ್ನು ಭಕ್ತರಿಂದ ದೇಣಿಗೆ ರೂಪದಲ್ಲಿ ಸಂಗ್ರಹಿಸಲು ಸರ್ಕಾರ ಅನುಮತಿ ನೀಡಿದೆ. ಹಾಗಾಗಿ ಭಕ್ತಾದಿಗಳು ಕಡ್ಡಾಯವಾಗಿ ದೇವಸ್ಥಾನದ ಅಷ್ಟಬಂಧ ಬ್ರಹ್ಮಕಲಶೋತ್ಸವ-2023 ಇದರ ಖಾತೆಗೇ ಡಿಟಿಜಲ್ ಪೇಮೆಂಟ್, ಇ-ಹುಂಡಿ ಮೂಲಕ ನೇರವಾಗಿ ಜಮಾ ಮಾಡಬಹುದಾಗಿದೆ. ದೇವಸ್ಥಾನದಲ್ಲಿ ಪ್ರತ್ಯೇಕ ಕೌಂಟರ್ ವ್ಯವಸ್ಥೆ ಇದ್ದು ಅಲ್ಲಿ ಸಲ್ಲಿಸಿ ರಶೀದಿ ಪಡೆಯಬಹುದಾಗಿದೆ ಎಂದರು.

ಈ ಸಮಯದಲ್ಲಿ ಚುನಾವಣೆ ಬಂದರೂ ಸಹ ಧಾರ್ಮಿಕ ಕಾರ್ಯಕ್ರಮಗಳಿಗೆ ಸಮಸ್ಯೆ ಇಲ್ಲ ಎಂದು ಅವರು ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದರು.

ಸುದ್ಧಿಗೋಷ್ಠಿಯಲ್ಲಿ ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಡಾ.ಕೆ ರಾಮಚಂದ್ರ ಅಡಿಗ, ಡಾ.ಅತುಲ್ ಕುಮಾರ್ ಶೆಟ್ಟಿ, ಗೋಪಾಲಕೃಷ್ಣ, ಜಯಾನಂದ ಹೋಬಳಿದಾರ, ರತ್ನ ರಮೇಶ್ ಕುಂದರ್, ಗಣೇಶ್ ಕಿಣಿ, ಶೇಖರ ಪೂಜಾರಿ, ಸಂಧ್ಯಾ ರಮೇಶ್, ಉಪಸ್ಥಿತರಿದ್ದರು.

ಕೆನರಾ ಬ್ಯಾಂಕ್ ಶಾಖೆ ಕೊಲ್ಲೂರು, ಖಾತೆ ಸಂಖ್ಯೆ-01752200000014 IFSC : CNRB0010175
ದೂರವಾಣಿ ಸಂಖ್ಯೆ 08254-200200,

Click Here

LEAVE A REPLY

Please enter your comment!
Please enter your name here