ಮಡಾಮಕ್ಕಿ ಪಂಚಾಯತ್ ವ್ಯಾಪ್ತಿಯ ಮೂಲಭೂತ ಸೌಕರ್ಯ ವಂಚಿತ ಕುಂಟಮಕ್ಕಿ, ಕಾರಿಮನೆ, ಹಂಜ, ಎಡಮಲೆ ಪ್ರದೇಶದ ಗ್ರಾಮಸ್ಥರಿಂದ ಚುನಾವಣಾ ಬಹಿಷ್ಕಾರಕ್ಕೆ ನಿರ್ಧಾರ
Video:
ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ: ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿದ ಸಂಭ್ರಮದಲ್ಲಿ ನಾವಿದ್ದೇವೆ. ಆದರೆ, ಈ ಊರಿಗೆ ಸ್ವಾತಂತ್ರ್ಯ ಬಿಡಿ, ಮೂಲಭೂತ ಸೌಕರ್ಯಗಳೇ ಮರೀಚಿಕೆಯಾಗಿದೆ. ಸಿಕ್ಕ ಸಿಕ್ಕವರ ಕೈಕಾಲು ಹಿಡಿದು ಬೇಡಿಕೊಂಡರೂ ಯಾವುದೇ ಪ್ರಯೋಜನವಾಗಿಲ್ಲ.
ಉಡುಪಿ ಜಿಲ್ಲೆಯ ಕುಂದಾಪುರ ಮತ್ತು ಆಗುಂಬೆಯನ್ನು ಸಂಪರ್ಕಿಸುವ ಕುಂದಾಪುರ ಸೋಮೇಶ್ವರ ರಸ್ತೆಯಲ್ಲಿ ಕುಂದಾಪುರದಿಂದ ಸುಮಾರು 55 ಕಿ.ಮೀ ದೂರದಲ್ಲಿರುವ ಮಡಾಮಕ್ಕಿ ಗ್ರಾಮದ ಜನರ ಗೋಳಿನ ಕಥೆಯಿದು.
ಮಡಾಮಕ್ಕಿ ಪಂಚಾಯತ್ ವ್ಯಾಪ್ತಿಯ ಕುಂಟಮಕ್ಕಿ, ಕಾರಿಮನೆ, ಹಂಜ, ಎಡಮಲೆ ಪ್ರದೇಶ ದಟ್ಟ ಅರಣ್ಯ ಪ್ರದೇಶದ ತಪ್ಪಲು. ಹೇಳಿ ಕೇಳಿ ನಕ್ಸಲ್ ಪೀಡಿತ ಪ್ರದೇಶ. ಲಕ್ಷಾಂತರ ರೂಪಾಯಿಗಳ ನಕ್ಸಲ್ ಪ್ಯಾಕೇಜ್ ಘೋಷಣೆಯಾಗಿದ್ದರೂ ಅಧಿಕಾರಿಗಳು, ಜನಪ್ರತಿನಿಧಿಗಳು ಇಲ್ಲಿನ ಜನರ ಕಣ್ಣೀರು ಒರೆಸಲು ಯತ್ನಿಸಲೇ ಇಲ್ಲ.
ಇಲ್ಲಿ ಸುಮಾರು ಮುನ್ನೂರಕ್ಕಿಂತಲೂ ಹೆಚ್ಚಿನ ಜನಸಂಖ್ಯೆಯಿದೆ. 100ಕ್ಕೂ ಅಧಿಕ ಮಕ್ಕಳು ಶಾಲೆಗೆ ಹೋಗುವವರಿದ್ದಾರೆ. ಅನಾರೋಗ್ಯ ಕಾಡಿದರೆ 16 ಕಿ.ಮೀ ದೂರದ ಬೆಳ್ವೆ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೇ ಹೋಗಬೇಕು. 15 ಮನೆಗಳಿಗೆ ಇನ್ನೂ ಹಕ್ಕು ಪತ್ರ ದೊರಕಿಲ್ಲ. ರಸ್ತೆ ಸಂಚಾರದ ಸ್ಥಿತಿ ಹೇಳತೀರದಾಗಿದೆ. ಅಲ್ಲದೇ ಕಾಡು ಪ್ರಾಣಿಗಳ ಹಾವಳಿಯೂ ಹೆಚ್ಚಾಗಿದೆ.
ಹಿರಿಯರು, ಗರ್ಭಿಣಿಯರಿಗೆ ಆರೋಗ್ಯ ಸಮಸ್ಯೆ ಉಂಟಾದರೆ ಕಂಬಳಿ ಬಳಸಿ ಹೊತ್ತುಕೊಂಡೇ ಸಾಗಬೇಕಾದ ಸ್ಥಿತಿ. ಸ್ಥಳೀಯ ಗ್ರಾಮ ಪಂಚಾಯತ್ ಹಾಗೂ ತಾಲೂಕು ಪಂಚಾಯತ್ ಪ್ರತಿನಿಧಿಗಳು ನವರಂಧ್ರಗಳನ್ನು ಮುಚ್ಚಿಕೊಂಡು ಬಿಟ್ಟಿದ್ದಾರೆ. ಚುನಾವಣೆ ಸಂದರ್ಭದಲ್ಲಿ ನೀಡಿದ ಭರವಸೆಗಳೆಲ್ಲಾ ಸುಳ್ಳಾಗಿದೆ. ಇದೇ ಕಾರಣಕ್ಕೆ ಈ ಬಾರಿಯ ಮತದಾನವನ್ನು ಬಹಿಷ್ಕರಿಸುವುದಾಗಿ ಗ್ರಾಮಸ್ಥರು ಎಚ್ಚರಿಸಿದ್ದಾರೆ. ಭರವಸೆಗಳು ಬೇಡ, ಅನುಷ್ಟಾನವಷ್ಟೇ ಬೇಕು ಎನ್ನುವುದು ಗ್ರಾಮಸ್ಥರ ಒಕ್ಕೊರಲ ಆಗ್ರಹ. ಇನ್ನಾದರೂ ಸಂಬಂಧಪಟ್ಟವರು ಎಚ್ಚೆತ್ತುಕೊಳ್ಳುತ್ತಾರೋ ಕಾದು ನೋಡಬೇಕಿದೆ.