ಕುಂದಾಪುರ ಮಿರರ್ ಸುದ್ದಿ…
ಕೋಟ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ ಕುಂದಾಪುರ ತಾಲೂಕು ಕುಂಭಾಶಿ ಒಕ್ಕೂಟ ನೇತ್ರತ್ವದಲ್ಲಿ ನಿಸರ್ಗ ಜ್ಞಾನ ವಿಕಾಸ ಕೇಂದ್ರ ಬೀಜಾಡಿ ಇಲ್ಲಿ ಮಹಿಳಾ ವಿಚಾರಗೋಷ್ಠಿ ಹಾಗೂ ವರಮಹಾಲಕ್ಷ್ಮಿ ಪೂಜಾ ಕಾರ್ಯಕ್ರಮ ಮತ್ತು ಧಾರ್ಮಿಕ ಸಭಾ ಕಾರ್ಯಕ್ರಮ ಶುಕ್ರವಾರ ನಡೆಯಿತು. ಕಾರ್ಯಕ್ರಮವನ್ನು ಬೀಜಾಡಿ ಗ್ರಾಮ ಪಂಚಾಯತ್ ಸದಸ್ಯ ಪ್ರಸನ್ನ ದೀಪಬೆಳಗಿಸಿ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಮಾತನಾಡಿ ಯಾವುದೇ ಕಾರ್ಯಕ್ರಮವನ್ನು ಸಾಂಗಿಕವಾಗಿ ಮಾಡಿದಾಗ ಪೂರ್ಣ ಪ್ರತಿಫಲ ದೊರೆಯುತ್ತದೆ ಅಲ್ಲದೆ ಕುಟುಂಬದ ಅಭಿವೃದ್ಧಿಯ ಜೊತೆಗೆ ಗ್ರಾಮದ ಅಭಿವೃದ್ಧಿಗೆ ಸಹಕಾರಿಯಾಗುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಧ.ಗ್ರಾ.ಯೋಜನೆ ಕುಂಭಾಶಿ ಒಕ್ಕೂಟದ ಸದಸ್ಯೆ ಗಂಗೆ ಶಾನಭಾಗ್ ಕುಟುಂಬದಲ್ಲಿ ಸಂಸ್ಕೃತಿ ಸಂಸ್ಕಾರ, ಸಂಪ್ರದಾಯಗಳನ್ನು ಉಳಿಸಿ-ಬೆಳೆಸುವಲ್ಲಿ ಮಹಿಳೆಯರ ಪಾತ್ರ ಏನು ಎನ್ನುವುದರ ಬಗ್ಗೆ ಮಾಹಿತಿ ನೀಡಿ ಮಕ್ಕಳನ್ನು ನಮ್ಮ ಆಚಾರ-ವಿಚಾರಗಳನ್ನು ತಿಳಿಸಿ ಅವರಲ್ಲಿ ಉತ್ತಮ ಸಂಸ್ಕಾರಗಳು ಬೆಳೆಯುವಂತೆ ಮಾಡಬೇಕು. ಮಕ್ಕಳಿಗೆ ಕಷ್ಟ-ಸುಖಗಳ ಅರಿವು ಮೂಡಿಸಬೇಕು. ಆಗ ಮಾತ್ರ ಮಕ್ಕಳು ಸುಸಂಸ್ಕೃತರಾಗಿ ಬೆಳೆಯಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬೀಜಾಡಿ ಒಕ್ಕೂಟದ ಅಧ್ಯಕ್ಷೆ ಶಾರದಾ ವಹಿಸಿದ್ದರು. ಕಾರ್ಯಕ್ರಮದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಉಡುಪಿ ಜಿಲ್ಲಾ ಹಿರಿಯ ನಿರ್ದೇಶಕ ಗಣೇಶ ಬಿ , ವಲಯದ ಮೇಲ್ವಿಚಾರಕರಾದ ನಾಗರಾಜ್ ,ವಲಯದ ಎಲ್ಲಾ ಸೇವಾ ಪ್ರತಿನಿಧಿಗಳು ಉಪಸ್ಥಿತರಿದ್ದರು. ಸೇವಾ ಪ್ರತಿನಿಧಿ ಸುಶೀಲಾ ಕೆ.ಎಸ್ ಸ್ವಾಗತಿಸಿದರು. ಜಯಂತಿ ವಂದಿಸಿದರು. ತಾಲೂಕಿನ ಜ್ಞಾನ ವಿಕಾಸ ಸಮನ್ವಯಾಧಿಕಾರಿ ಸುಗುಣ ಎನ್. ಹವಲ್ದಾರ್ ನಿರೂಪಿಸಿದರು.