ಕುಂದಾಪುರ ಮಿರರ್ ಸುದ್ದಿ…
ಬೈಂದೂರು: ಪೋಸ್ಟರ್ ಹಚ್ಚುವ, ಬ್ಯಾನರ್ ಕಟ್ಟಿ ಒಬ್ಬ ಸಾಮಾನ್ಯ ಕಾರ್ಯಕರ್ತನಾಗಿದ್ದ ನನಗೆ ಮೂರು ಬಾರಿ ಶಾಸಕನಾಗಿಯೂ ಹಾಗೂ ಇದೀಗ ಸಚಿವ ಸ್ಥಾನ ನೀಡಿರುವುದು ಬಿಜೆಪಿ ಪಕ್ಷದಲ್ಲಿ ಮಾತ್ರವೇ ಸಾಧ್ಯ. ಮುಖ್ಯಮಂತ್ರಿಗಳು ಎರಡು ದೊಡ್ಡ ಇಲಾಖೆ ನೀಡಿದ್ದು ಈ ಮೂಲಕ ರಾಜ್ಯ, ಜಿಲ್ಲೆಗೆ ಒಳಿತು ಮಾಡುವ ಜೊತೆಗೆ ಇಲಾಖೆಯಲ್ಲಿ ಜನಪರವಾದ ಹೊಸತನದ ಆಡಳಿತ ನೀಡುವ ಗುರಿ ಇದೆ ಒಂದು ಎಂದು ಇಂಧನ ಮತ್ತು ಕನ್ನಡ ಸಂಸ್ಕ್ರತಿ ಇಲಾಖೆ ಸಚಿವ ಸುನೀಲ್ ಕುಮಾರ್ ಹೇಳಿದರು.
ಅವರು ಸೋಮವಾರದಂದು ಬೈಂದೂರು ಬಿಜೆಪಿ ಮಂಡಲ ಕಛೇರಿ ಭೇಟಿ ಮಾಡಿದ ಬಳಿಕ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದರು.
ಬೈಂದೂರು ಹಾಗೂ ಕಾರ್ಕಳ ಭಾಗದ ಜನರ ಭಾವನೆ ಒಂದೇ ಆಗಿದೆ. ಜನಸಾಮನ್ಯರ ನಾಡಿಮಿಡಿತ ಅರಿತು ಕೆಲಸ ಮಾಡಲಾಗುತ್ತದೆ. ಕಾರ್ಕಳ ಕ್ಷೇತ್ರದ ಅಭಿವೃದ್ಧಿ ಮೂರು ಅವಧಿಯಿಂದಲೂ ನಡೆಯುತ್ತಿದ್ದು ಬೈಂದೂರು ಕ್ಷೇತ್ರದಲ್ಲಿ ಮೂರು ವರ್ಷದಲ್ಲಿ ಬಹುತೇಕ ಅಭಿವೃದ್ದಿ ಕಾರ್ಯ ನಡೆಯುತ್ತಿರುವುದು ಶಾಸಕರ ತುಡಿತ ತೋರಿಸುತ್ತದೆ. ಜಿಲ್ಲೆಯಲ್ಲಿ ಮೂವರು ಸಚಿವರಿದ್ದು ಕಾಲಮಿತಿಯೊಳಗೆ ಜಿಲ್ಲೆಯ ಶಾಶ್ವತ ಅಭಿವೃದ್ಧಿಯ ಕಾರ್ಯಕ್ಕೆ ಮುಂದಾಗುತ್ತೇವೆ ಎಂದರು.
ಈ ಹಿಂದೆ ಗ್ರಾಮೀಣ ಭಾಗದಲ್ಲಿ ಮನೆಗಳಿಗೆ ವಿದ್ಯುತ್ ಪಡೆಯುವಲ್ಲಿ ಸ್ಥಳೀಯ ಸಂಸ್ಥೆಗಳ ನಿರಪೇಕ್ಷಣಾ ಪತ್ರ ಬೇಕಿತ್ತು.ಆದರೆ ಇನ್ನು ಮುಂದೆ ವಿದ್ಯುತ್ ಪಡೆಯಲು ಯಾವುದೇ ಸ್ಥಳೀಯ ಸಂಸ್ಥೆಯ ನಿರಪೇಕ್ಷಣಾ ಪತ್ರ ಬೇಡ. ಈ ಬಗ್ಗೆ ವಾರದೊಳಗೆ ಹೊಸ ಸುತ್ತೋಲೆ ಸದ್ಯದಲ್ಲೆ ಜಾರಿಯಾಗಲಿದೆ.ಇದರಿಂದ ಸುಮಾರು 2.5 ಲಕ್ಷ ಕುಟುಂಬಗಳಿಗೆ ವಿದ್ಯುತ್ ಪಡೆಯಲು ನೆರವಾಗುತ್ತದೆ. ಲೋ ವೋಲ್ಟೇಜ್ ಸಮಸ್ಯೆ ಪರಿಹಾರಕ್ಕೆ ಕ್ರಮಕೈಗೊಳ್ಳಲಾಗುತ್ತದೆ. ಕೊಲ್ಲೂರು ಸಬ್‌ಸ್ಟೇಷನ್ ಅನುಷ್ಠಾನಕ್ಕೆ ಇಲಾಖೆ ಸಿದ್ಧವಿದ್ದು ಅರಣ್ಯ ಇಲಾಖೆ ಸಮಸ್ಯೆ ಹಿನ್ನೆಡೆ ನೀಡುತ್ತಿದ್ದು ಈ ಬಗ್ಗೆ ಶೀಘ್ರ ಬೆಂಗಳೂರಿನಲ್ಲಿ ಸಭೆ ಕರೆದು ಕ್ರಮಕೈಗೊಳ್ಳಲಾಗುತ್ತದೆ. ಡೀಮ್ಡ್ ಫಾರೆಸ್ಟ್ ಸಮಸ್ಯೆ ಕಾಂಗ್ರೆಸ್ ಸರಕಾರದ ಬಳುವಳಿಯಾಗಿದ್ದು ಲಕ್ಷಾಂತರ ಮನೆಗಳಿಗೆ ಸಮಸ್ಯೆಯಿದೆ. ರಾಜ್ಯದಲ್ಲಿ 1 ತಿಂಗಳಿನೊಳಗೆ ಈ ಸಮಸ್ಯೆ ಬಗೆಹರಿಸಿ ಹಕ್ಕುಪತ್ರ ನೀಡುವ ಬಗ್ಗೆ ಪ್ರಯತ್ನ ನಡೆಯುತ್ತಿದೆ ಎಂದರು.
ಸುನೀಲ್ ಕುಮಾರ ಪವರ್ ಮಂತ್ರಿ..
ಬೈಂದೂರು ಶಾಸಕ ಬಿ.ಎಮ್.ಸುಕುಮಾರ ಶೆಟ್ಟಿ ಮಾತನಾಡಿ ಬೈಂದೂರು ಕ್ಷೇತ್ರವು ಕಳೆದ 70 ವರ್ಷದಿಂದ ಕಾಣದ ಅಭಿವೃದ್ದಿ ಕಾರ್ಯ ಈ ಅವಧಿಯಲ್ಲಿ ನಡೆದಿದೆ. ಫವರ್ ಮಂತ್ರಿಯಾಗಿರುವ ಸುನೀಲ್ ಕುಮಾರ್ ಕ್ರಿಯಾಶೀಲವ್ಯಕ್ತಿ. ಅವರು ಎಲ್ಲರ ಮನೆ ಬೆಳಗುವ ಫವರ್ ಮಿನಿಸ್ಟರ್. ಸುನೀಲ ಕುಮಾರ್ ಸಚಿವರಾಗಿರುವುದು ಬೈಂದೂರು ಕ್ಷೇತ್ರದ ಅಭಿವೃದ್ದಿಗೆ ಇನ್ನಷ್ಟು ಸಹಕಾರಿಯಾಗಿದೆ ಎಂದರು.
ಬಿಜೆಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್, ಬೈಂದೂರು ಪಟ್ಟಣ ಪಂಚಾಯತ್ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ರಾಘವೇಂದ್ರ ಪೂಜಾರಿ ಯಡ್ತರೆ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಸಚಿವರನ್ನು ಬಿಜೆಪಿ ಪಕ್ಷದ ವತಿಯಿಂದ ಸಮ್ಮಾನಿಸಲಾಯಿತು. ಬಿಜೆಪಿ ಮಂಡಲದ ಅಧ್ಯಕ್ಷ ದೀಪಕ್ ಕುಮಾರ್ ಶೆಟ್ಟಿ ಸ್ವಾಗತಿಸಿ, ಪ್ರಸ್ತಾವನೆಗೈದರು. ಬಿಜೆಪಿ ಮಂಡಲದ ಪ್ರಧಾನ ಕಾರ್ಯದರ್ಶಿ ಪ್ರಿಯದರ್ಶಿನಿ ದೇವಾಡಿಗ ಕಾರ್ಯಕ್ರಮ ನಿರ್ವಹಿಸಿದರು.ಬಿಜೆಪಿ ಮಂಡಲದ ಪ್ರಧಾನ ಕಾರ್ಯದರ್ಶಿ ಪ್ರಕಾಶ ಪೂಜಾರಿ ಜಡ್ಡು ವಂದಿಸಿದರು.