ಕುಂದಾಪುರ ಮಿರರ್ ಸುದ್ದಿ…
ಕೋಟ: ಪುರುಷ ಪ್ರಧಾನವಾದ ಸಮಾಜದಲ್ಲಿ ಮಹಿಳೆ ತನ್ನ ಪ್ರತಿಭೆ ಮತ್ತು ಸಾಮರ್ಥ್ಯದಿಂದ ಎಲ್ಲಾ ಅವಕಾಶವನ್ನು ತನ್ನದಾಗಿಸಿಕೊಂಡು ಸಮಾಜದಲ್ಲಿ ಗೌರವಯುತವಾದ ಜೀವನವನ್ನು ಸಾಗಿಸುತ್ತಾ ಇಂದು ರಾಜಕೀಯ, ಶೈಕ್ಷಣಿಕ, ಸಾಮಾಜಿಕ, ಧಾರ್ಮಿಕ, ಕ್ರೀಡಾ,ರಕ್ಷಣಾ ,ಸಾಂಸ್ಕೃತಿಕ ಸೇರಿದಂತೆ ಹತ್ತು ಹಲವಾರು ಕ್ಷೇತ್ರದಲ್ಲಿ ಪುರುಷರಿಗೆ ಸಮಾನವಾಗಿ ತನ್ನ ಪಾರಮ್ಯವನ್ನು ಮೆರೆಯುತ್ತಿದ್ದಾಳೆ ಎಂದು ಜೆಸಿಐ ಸಾಲಿಗ್ರಾಮ ವಡ್ಡರ್ಸೆ ಸಿಟಿ ಅಧ್ಯಕ್ಷ ಪದ್ಮನಾಭ ಆಚಾರ್ಯ ಹೇಳಿದರು.
ಅವರು ಮಾ 8.ರಂದು ವಡ್ಡರ್ಸೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಸಭಾಂಗಣದಲ್ಲಿ ನಡೆದ ವಿಶ್ವ ಮಹಿಳಾ ದಿನಾಚರಣೆಯ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು.
ಮನೆಮದ್ದುಗಳನ್ನು ನೀಡುವುದರ ಮೂಲಕ ಗ್ರಾಮೀಣ ಭಾಗದಲ್ಲಿ ನಿಸ್ವಾರ್ಥ ಸೇವೆಯನ್ನು ಸಲ್ಲಿಸುತ್ತಿರುವ ನಾಟಿ ವೈದ್ಯರಾದ ಕೊಲ್ಲು ಪೂಜಾರ್ತಿ ಬನ್ನಾಡಿ, ಆಶಾ ಕಾರ್ಯಕರ್ತೆ ಭವಾನಿ ಶೆಟ್ಟಿ ಸೂರಿಬೆಟ್ಟು ಅಚ್ಲಾಡಿ,ಹಾಗೂ ವಡ್ಡರ್ಸೆ ಗ್ರಾಮ ಪಂಚಾಯತ್‍ನ ಘನ ಸಂಪನ್ಮೂಲ ನಿರ್ವಹಣಾ ಘಟಕದ ಮೇಲ್ವಿಚಾರಕಿ ಹಾಗೂ ಮಹಿಳಾ ವಾಹನ ಚಾಲಕಿ ದೀಪಾರವರನ್ನು ಈ ಸಂಧರ್ಭದಲ್ಲಿ ಗೌರವಿಸಲಾಯಿತು.
ಸಭೆಯಲ್ಲಿ ಜೆಸಿರೇಟ್ ಕಲಾವತಿ ಪದ್ಮನಾಭ ಆಚಾರ್ಯ, ಕಾರ್ಯದರ್ಶಿ ಉಮೇಶ್, ಜೆಜೆಸಿ ಶ್ರೀವತ್ಸ ಭಟ್ ,ವಲಯ ತರಬೇತುದಾರ ಯಶವಂತ್ ಸ್ಥಾಪಕಾಧ್ಯಕ್ಷ ಸಚ್ಚಿದಾನಂದ ಅಡಿಗ ಸೇರಿದಂತೆ ಜೆಸಿಯ ಸದಸ್ಯರು ಹಾಜರಿದ್ದರು.ಸದಸ್ಯೆ ಸರೋಜ ಜಗದೀಶ್ ಪೂಜಾರಿ ಸನ್ಮಾನಿತರನ್ನು ಪರಿಚಯಿಸಿದರು. ಶಿಕ್ಷಕ ಸುವೀರ್ ಹೊಳ್ಳ ಕಾರ್ಯಕ್ರಮದ ಪ್ರಾಮುಖ್ಯತೆ ಬಗ್ಗೆ ಮಾತನಾಡಿದರು. ಶಾರದ ಸತೀಶ್ ಕಾರ್ಯಕ್ರಮ ನಿರೂಪಿಸಿದರು.ಶ್ರೀರಕ್ಷಾ ಅಡಿಗ ವಂದಿಸಿದರು.