ಕುಂದಾಪುರ ಮಿರರ್ ಸುದ್ದಿ…
ಕುಂದಾಪುರದಲ್ಲಿ ಬಿಜೆಪಿ ಮಹಿಳಾ ಸಮಾವೇಶ, ಹಾಲಾಡಿ ಬಲ ಪ್ರದರ್ಶನ
ಕುಂದಾಪುರ :ಮುಂಬರುವ ಚುನಾವಣೆಯ ಪೂರ್ವಭಾವಿ ತಯಾರಿ ಹಿನ್ನಲೆಯಲ್ಲಿ ಕೋಟೇಶ್ವರ ಕುರುಕ್ಷೇತ್ರ ಮೈದಾನದಲ್ಲಿ ಉಡುಪಿ ಜಿಲ್ಲಾ ಬಿಜೆಪಿ ಮಹಿಳಾ ಸಮಾವೇಶ ನಡೆಯಿತು. ಸಮಾವೇಶದಲ್ಲಿ ಜಿಲ್ಲೆಯ ನಾನಾ ಭಾಗದ ಸುಮಾರು 5 ಸಾವಿರಕ್ಕೂ ಅಧಿಕ ಮಹಿಳಾ ಕಾರ್ಯಕರ್ತೆಯರು ಭಾಗವಹಿಸಿದ್ದು ವಿಶೇಷವಾಗಿತ್ತು.
ಗೋವಾದ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಅವರು ದೀಪ ಬೆಳಗುವ ಮೂಲಕ ಉದ್ಘಾಟಿಸಿ ಮೂಲಭೂತ ಸೌಕರ್ಯಗಳನ್ನು ನೀಡುವುದರೊಂದಿಗೆ ರಾಷ್ಟ್ರದ ಹಾಗೂ ಮಾನವ ಸಂಪನ್ಮೂಲದ ಅಭಿವೃದ್ಧಿಯಲ್ಲಿ ಮುಂದಡಿಯನ್ನು ಇಡುತ್ತಿರುವ ಪ್ರಧಾನಿ ನರೇಂದ್ರ ಮೋದಿ ನೇತ್ರತ್ವದ ಸರ್ಕಾರವನ್ನು ಬಲಪಡಿಸಲು ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಪಕ್ಷವನ್ನೇ ಮತ್ತೆ ಆಯ್ಕೆ ಮಾಡುವುದರೊಂದಿಗೆ ಡಬ್ಬಲ್ ಇಂಜಿನ್ ಸರ್ಕಾರದ ಪರಿಕಲ್ಪನೆಯನ್ನು ಸಾಕಾರಗೊಳಿಸಬೇಕು ಎಂದು ಗೋವಾ ರಾಜ್ಯದ ಮುಖ್ಯಮಂತ್ರಿ ಡಾ.ಪ್ರಮೋದ್ ಸಾವಂತ್ ವಿನಂತಿ ಮಾಡಿದರು.
ಭೇಟಿ ಬಚಾವ್ ಭೇಟಿ ಪಡಾವ್ ಹಾಗೂ ಶೌಚಾಲಯ ಕಾರ್ಯಕ್ರಮವನ್ನು ಅನುಷ್ಠಾನಗೊಳಿಸುವ ಮೂಲಕ ಮಹಿಳೆಯ ಪರವಾಗಿರುವ ಬದ್ಧತೆಯನ್ನು ಪ್ರಕಟಿಸಿರುವ ಕೇಂದ್ರದ ಪ್ರಧಾನಿ ಮೋದಿ ನೇತ್ರತ್ವದ ಸರ್ಕಾರ ಸುಕನ್ಯಾ ಸಮೃದ್ಧಿ, ಸ್ಟಾಂಡಪ್ ಇಂಡಿಯಾ, ಪ್ರಧಾನ ಮಂತ್ರಿ ಕೌಶಲ್ಯ ಯೋಜನೆ, ತಲಾಕ್ ರದ್ಧತಿ ಸಹಿತ ಮಹಿಳೆಯರಿಗಾಗಿ ಹಲವು ಕಾರ್ಯಕ್ರಮಗಳನ್ನು ಜಾರಿಗೊಳಿಸಿದೆ. ಮಹಿಳೆಯರಿಗಾಗಿ ಹೆರಿಗೆ ಸಂದರ್ಭದಲ್ಲಿ 26 ವಾರಗಳ ಸಂಬಳ ಸಹಿತ ರಜೆಗೆ ಅವಕಾಶ ಕಲ್ಪಿಸಿದೆ. ಮಹಿಳೆಯರ ಹೆಸರಿನಲ್ಲಿಯೇ ಮನೆ ನೀಡುವ ಐತಿಹಾಸಿಕ ತೀರ್ಮಾನವಾಗಿದೆ. ಮಹಿಳೆಯರ ಮೇಲಿನ ದೌರ್ಜನ್ಯಗಳ ತಡೆಗೆ ಕ್ರಮಗಳನ್ನು ಕೈಗೊಂಡಿದೆ ಒಟ್ಟಿನಲ್ಲಿ ಸಮೃದ್ಧಶೀಲ ನವ ಭಾರತದ ನಿರ್ಮಾಣಕ್ಕಾಗಿ ಆತ್ಮ ನಿರ್ಭರ ಭಾರತದಡಿಯಲ್ಲಿ ಮಹಿಳೆಯರ ಹಿತವನ್ನು ಕಾಯುವಲ್ಲಿ ತನ್ನ ಬದ್ಧತೆ ಹಾಗೂ ಕಾಳಜಿಯನ್ನು ಪ್ರಕಟಪಡಿಸಿರುವ ಬಿಜೆಪಿ, ಆಡಳಿತಕ್ಕೆ ಬಂದ ಪರ್ವಕಾಲಗಳಲ್ಲಿ ನುಡಿದಂತೆ ನಡೆದಿದೆ ಎಂದರು.
ದಿಕ್ಸೂಷಿ ಭಾಷಣ ಮಾಡಿದ ರಾಜ್ಯ ಬಿಜೆಪಿ ಪಕ್ಷದ ಪ್ರಮುಖರಾದ ಮಾಳವಿಕ ಅವಿನಾಶ್, ಈ ದೇಶದ ಪ್ರಧಾನಮಂತ್ರಿಯಾಗಿದ್ದ ಮಹಿಳಾ ನಾಯಕಿಗೂ ಅರಿವಾಗದೆ ಇದ್ದ ಮಹಿಳೆಯರ ಶೌಚಾಲಯ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ಮೂಲಕ ಮಹಿಳೆಯರಿಗೆ ಗೌರವ ಕೊಡುವ ವ್ಯಕ್ತಿ ದೇಶದ ಪ್ರಧಾನಿಯಾಗಿರುವುದು ನಮಗೆಲ್ಲ ಹೆಮ್ಮೆ. ಜಲ್‌ಜಿವನ್ ಮಿಷನ್ ಮೂಲಕ ಮನೆ ಮನೆಗೆ ಕುಡಿಯುವ ನೀರು, ಉಜ್ವಲ್ ಯೋಜನೆಯ ಮೂಲಕ ಉಚಿತ ಅಡುಗೆ ಅನಿಲ, 18,000 ಹಳ್ಳಿಗಳಿಗೆ ವಿದ್ಯುತ್ ಸಂಪರ್ಕ, ಫಲನಾಭವಿಗಳಿಗೆ ಸರ್ಕಾರ ಸೌಲಭ್ಯಗಳ ನೇರ ವರ್ಗಾವಣೆಗಾಗಿ ಜನಧನ್ ಮೂಲಕ ಠೇವಣೆ ರಹಿತ ಬ್ಯಾಂಕ್ ಖಾತೆಯಂತಹ ಯೋಜನೆಗಳನ್ನು ಸಾಕಾರಗೊಳಿಸುವ ಮೂಲಕ ಸುಧೃಢ ಹಾಗೂ ಗೌರವದ ಬದುಕಿಗೆ ಅವಕಾಶ ಮಾಡಿಕೊಟ್ಟಿದೆ ಎಂದರು.
ರಾಜ್ಯ ಸಮಾಜಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರು, ಎಸ್‌ಸಿ/ಎಸ್‌ಟಿ ಹಾಗೂ ದುರ್ಬಲ ವರ್ಗದ ಜನರ ಆಶೋತ್ತರಗಳಿಗೆ ಸ್ಪಂದಿಸಿದ ಶ್ರೇಯಸ್ಸು ಬಿಜೆಪಿ ಪಕ್ಷಕ್ಕೆ ಇದೆ. ಕನ್ನಡ ಶಾಲೆಯ ಮಕ್ಕಳನ್ನು ಗುರಿಯಾಗಿರಿಸಿಕೊಂಡು ಕುಕ್ಕರನಲ್ಲಿ ಬಾಂಬ್ ಇಡುವ ಮೂಲಕ ವಿಕೃತ ಮನಸ್ಥಿತಿಯನ್ನು ತೋರುತ್ತಿರುವ ಭಯೋತ್ಪಾನೆಯ ವಿರುದ್ಧ ಈ ಬಾರಿಯ ಚುನಾವಣೆ ನಡೆಯಲಿದೆ. ಭಯೋತ್ಪಾನೆ ಬೆಂಬಲಿಸುವವರು ಯಾವುದೇ ಕಾರಣಕ್ಕೂ ಅಧಿಕಾರಕ್ಕೆ ಬರಬಾರದು ಎಂದ ಅವರು ಬಾಂಬ್ ಬ್ಲಾಸ್ಟ್ ಅಂತಹ ಘಟನೆಗಳನ್ನು ಕಾಂಗ್ರೆಸ್ ಪಕ್ಷದ ಮುಖಂಡರು ಯಾಕೆ ಖಂಡಿಸುವುದಿಲ್ಲ ಎಂದು ಪ್ರಶ್ನಿಸಿದರು.
ಶಾಸಕರಾದ ಹಾಲಾಡಿ ಶ್ರೀನಿವಾಸ ಶೆಟ್ಟಿ, ಲಾಲಾಜಿ ಆರ್ ಮೆಂಡನ್, ಮೈಸೂರು ಎಲೆಕ್ಟ್ರಿಕಲ್ ಇಂಡಸ್ಟ್ರೀಸ್ ಅಧ್ಯಕ್ಷ ಕೆ.ಉದಯ್‌ಕುಮಾರ ಶೆಟ್ಟಿ, ಆಹಾರ ಹಾಗೂ ನಾಗರೀಕ ಪೂರೈಕೆ ಸರಬರಾಜು ನಿಗಮದ ಉಪಾಧ್ಯಕ್ಷ ಕಿರಣ್‌ಕುಮಾರ ಕೊಡ್ಗಿ, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ರಾಷ್ಟ್ರೀಯ ಮಹಿಳಾ ಆಯೋಗದ ಮಾಜಿ ಸದಸ್ಯೆ ಶ್ಯಾಮಲಾ ಕುಂದರ್, ರಾಜ್ಯ ಬಿಜೆಪಿ ಉಪಾಧ್ಯಕ್ಷೆ ನಯನಾ ಗಣೇಶ್, ರಾಜ್ಯ ಬಿಜೆಪಿ ಕಾರ್ಯಕಾರಿ ಸಮಿತಿ ಸದಸ್ಯ ಗುರ್ಮೆ ಸುರೇಶ್ ಶೆಟ್ಟಿ, ರಾಷ್ಟ್ರೀಯ ಹಿಂದುಳಿದ ವರ್ಗಗಳ ಮೋರ್ಚಾ ಕಾರ್ಯದರ್ಶಿ ಯಶ್‌ಪಾಲ್ ಸುವರ್ಣ, ಕುಂದಾಪುರ ಬಿಜೆಪಿ ಮಂಡಲ ಅಧ್ಯಕ್ಷ ಶಂಕರ ಅಂಕದಕಟ್ಟೆ, ಕುಂದಾಪುರ ಮಂಡಲದ ಪ್ರ.ಕಾರ್ಯದರ್ಶಿ ಸುರೇಶ್ ಶೆಟ್ಟಿ ಬೀಜಾಡಿ, ಸತೀಶ್ ಪೂಜಾರಿ ವಕ್ವಾಡಿ, ಜಿಲ್ಲಾ ಕಾರ್ಯದರ್ಶಿ ಸದಾನಂದ ಬಳ್ಕೂರು, ಸುಧೀರ್ ಕೆ.ಎಸ್. ಕಾರ್ಯದರ್ಶಿ ಸುರೇಂದ್ರ ಕಾಂಚನ್ ಸಂಗಮ್, ಕುಂದಾಪುರ ಪುರಸಭೆ ಅಧ್ಯಕ್ಷ ವೀಣಾ ಭಾಸ್ಕರ್ ಮೆಂಡನ್, ಪಕ್ಷದ ಪ್ರಮುಖರಾದ ಭಾಗೀರಥಿ ಮುರುಳ್ಯಾ,ಸುಪ್ರಸಾದ್ ಶೆಟ್ಟಿ ಬೈಕಾಡಿ, ಗೀತಾಂಜಲಿ ಎಂ ಸುವರ್ಣ, ಕುತ್ಯಾರು ನವೀನ್ ಶೆಟ್ಟಿ, ರೂಪಾ ಪೈ, ವೀಣಾ ವಿ ನಾಯ್ಕ್, ಮಾಲಿನಿ ಜೆ ಶೆಟ್ಟಿ, ವಸಂತಿ ಸತೀಶ್, ಸರೋಜಾ ಶೆಟ್ಟಿಗಾರ್, ರಾಗಿಣಿ ದೇವಾಡಿಗ ಕೋಟೇಶ್ವರ, ಸುಮಾ ಶೆಟ್ಟಿ, ಅಭಿಷೇಕ್ ಅಂಕದಕಟ್ಟೆ, ಸುಲತಾ ಹೆಗ್ಡೆ, ಅನಿತಾ ಶ್ರೀಧರ ಇದ್ದರು.
ರಾಷ್ಟ್ರ ಪ್ರಶಸ್ತಿ ಪುರಸ್ಕೃತ ನಿವೃತ್ತ ಶಿಕ್ಷಕಿ ಇಂದ್ರಾಕ್ಷೀ ಉಡುಪ ಅವರನ್ನು ಗೌರವಿಸಲಾಯಿತು. ಉಡುಪಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ಪ್ರಾಸ್ತಾವಿಕ ಭಾಷಣ ಮಾಡಿದರು, ಜಿಲ್ಲಾ ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷೆ ವೀಣಾ ಶೆಟ್ಟಿ ಸ್ವಾಗತಿಸಿದರು, ರಶ್ಮೀತಾ ಶೆಟ್ಟಿ ನಿರೂಪಿಸಿದರು, ಸೌರಭಿ ಪೈ ವಂದಿಸಿದರು.
ಕುಂದಾಪುರದ ಕೋಟೇಶ್ವರದಲ್ಲಿ ಆಯೋಜಿಸಲಾದ ಈ ಮಹಿಳಾ ಸಮಾವೇಶ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿಯವರ ಬಲ ಪ್ರದರ್ಶನಕ್ಕೆ ಸಾಕ್ಷಿಯಾಗಿತ್ತು. ಸರಿಸುಮಾರು 5000ಕ್ಕೂ ಮಿಕ್ಕಿ ಮಹಿಳೆಯರು ಕಾರ್ಯಕ್ರಮದಲ್ಲಿ ಭಾಗವಹಿಸುವ ಮೂಲಕ ಕುಂದಾಪುರದ ಹಾಲಾಡಿಯ ಎಂದೇ ಖ್ಯಾತರಾದ ಶ್ರೀನಿವಾಸ ಶೆಟ್ಟಿ ಅವರಿಗೆ ತಮ್ಮ ಬೆಂಬಲ ಎನ್ನುವುದು ಸಭೆಯಲ್ಲಿ ಮಹಿಳೆಯರ ಉಪಸ್ಥಿತಿಯೇ ತಿಳಿಸಿದೆ ಎಂದರೆ ತಪ್ಪಾಗಲಾರದು.