ಕುಂದಾಪುರ ಮಿರರ್ ಸುದ್ದಿ…
ಕೋಟ: ಕೋಡಿ ಕನ್ಯಾಣ ಗ್ರಾ.ಪಂ. ವ್ಯಾಪ್ತಿಯಲ್ಲಿ ಹಲವಾರು ದಶಕಗಳಿಂದ ವಾಸವಿರುವ ಸುಮಾರು 387 ಕುಟುಂಬಗಳಿಗೆ ಸಿ.ಆರ್.ಝಡ್. ಮೊದಲಾದ ಕಾರಣಕ್ಕೆ ಹಕ್ಕುಪತ್ರ ಸಿಕ್ಕಿಲ್ಲ ಹೀಗಾಗಿ ಸ್ಥಳೀಯ ನಿವಾಸಿಗಳು ಸಾಕಷ್ಟು ಸಮಸ್ಯೆ ಎದುರಿಸುತ್ತಿದ್ದು ಹೋರಾಟ ನಡೆಸುತ್ತಿದ್ದರು ಪ್ರಸ್ತುತ 161ಮಂದಿಯ 45.19 ಎಕ್ರೆ ಅನಾದಿನ ಭೂಮಿ, 38.54 ಎಕ್ರೆ ವಿಸ್ತೀರ್ಣದ 178 ಪೊರಂಬೋಕು ಭೂಮಿಯನ್ನು ಪೆÇರಂಬೋಕು ಶೀರ್ಷಿಕೆಯಿಂದ ವಿರಹಿತಗೊಳಿಸಿ ಸರಕಾರದ ಕಂದಾಯ ಇಲಾಖೆಯ ಮುಖ್ಯಸ್ಥರು ಉಡುಪಿ ಜಿಲ್ಲಾಧಿಕಾರಿಗಳಿಗೆ ಆದೇಶ ಮಾಡಿದ್ದಾರೆ ಎಂದು ಕೋಡಿ ಗ್ರಾ.ಪಂ. ಅಧ್ಯಕ್ಷ ಪ್ರಭಾಕರ್ ಮೆಂಡನ್ ಅವರು ಮಾ.11ರಂದು ಕೋಡಿಯಲ್ಲಿ ಜರಗಿದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಪೊರಂಬೋಕು ಶೀರ್ಷಿಕೆಯಿಂದ ವಿರಹಿತಗೊಳಿಸಿರುವುದರಿಂದ ಹಕ್ಕುಪತ್ರ ನೀಡಲು ಅನುಕೂಲವಾಗಿದ್ದು ಸರ್ವೆ ಕಾರ್ಯದ ಅನಂತರ ಶೀಘ್ರದಲ್ಲೇ ಫಲಾನುಭವಿಗಳಿಗೆ ಹಕ್ಕುಪತ್ರ ಸಿಗಲಿದೆ ಎಂದರು. ಈ ಹಿಂದೆ 471 ಕುಟುಂಬಗಳಿಗೆ ಸಿ.ಆರ್.ಝಡ್. ಹಾಗೂ ವಾಸ್ತವ್ಯದ ಭೂ ಭಾಗಗಳು ಸಮುದ್ರ ಎಂದು ಆರ್.ಟಿ.ಸಿ.ಯಲ್ಲಿ ದಾಖಲಾದ್ದರಿಂದ ಹಾಗೂ ಸರಕಾರದ ಅನಾದಿನ ಭೂಮಿ ಎನ್ನುವ ಕಾರಣಕ್ಕೆ ಹಕ್ಕುಪತ್ರ ಸಿಗದೆ ಸಮಸ್ಯೆ ಎದುರಾಗಿತ್ತು. ಇದರಲ್ಲಿ 79ಕುಟುಂಬಗಳಿಗೆ ಹಕ್ಕುಪತ್ರ ಈ ಹಿಂದೆ ಮಂಜೂರಾಗಿದ್ದು ಅದರಲ್ಲಿ 22 ಮಂದಿ ಹಕ್ಕುಪತ್ರ ಪಡೆದಿದ್ದಾರೆ. ಪ್ರಸ್ತುತ 387ಕುಟುಂಬಗಳಿಗೆ ಸಮಸ್ಯೆ ಇದ್ದು 161ಮಂದಿಯ ಅನಾದಿನ ಭೂಮಿ, 178ಮಂದಿಯ ಪೆÇರಂಬೋಕು ಭೂಮಿ, ದೇವಸ್ಥಾನ, ಅಂಗನವಾಡಿ ಸೇರಂತೆ ಇತರ 20 ಪ್ರಕರಣಗಳಿಗೆ ಹಕ್ಕುಪತ್ರ ಸಿಗಲಿದೆ. ಸಮುದ್ರ ಎಂದು ದಾಖಲಾಗಿರುವ 132 ಪ್ರಕರಣಗಳು ಪರಿಶೀಲನೆ ಹಂತದಲ್ಲಿದ್ದು ಸರ್ವೇ ನಂಬರ್ ನೀಡುವ ಇನ್ನಿತರ ಕಾರ್ಯಗಳು ಕಂದಾಯ ಇಲಾಖೆ ಮಟ್ಟದಲ್ಲಿ ನಡೆಯಬೇಕಿದ್ದು ಈ ಭೂಮಿಯಲ್ಲಿ ವಾಸವಿರುವವರಿಗೆ ಹಕ್ಕುಪತ್ರ ನೀಡುವುದು ಸ್ವಲ್ಪ ಸಮಯಾವಕಾಶ ಬೇಕು ಎಂದು ಅಧ್ಯಕ್ಷರು ತಿಳಿಸಿದರು.
ಕುಂದಾಪುರ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಹಾಗೂ ಹಿಂದುಳಿದ ವರ್ಗಗಳ ಇಲಾಖೆಯ ಸಚಿವ ಕೋಟ ಶ್ರೀನಿವಾಸ್ ಪೂಜಾರಿಯವರ ಸತತ ಪರಿಶ್ರಮ ಹಾಗೂ ಅಧಿಕಾರಿಗಳ ಸಹಕಾರದಿಂದ ಹಕ್ಕುಪತ್ರ ಕನಸು ನನಸಾಗಿದ್ದು,ಈ ಹಂತದಲ್ಲಿ ಅನೇಕ ಮಂದಿ ಹಕ್ಕುಪತ್ರ ನಮ್ಮಹೋರಾಟದಿಂದ ಸಿಕ್ಕಿದೆ ಎನ್ನುವಂತೆ ಬಿಂಬಿಸಿಕೊಳ್ಳುವುದು ಸರಿಯಲ್ಲ ಎಂದರು, ಹಾಗೂ ಈ ಹಿಂದೆ ಕಂದಾಯ ಮೊತ್ತವನ್ನು ಐದು ಸಾವಿರ ನಿಗಡಿಪಡಿಸಲಾಗಿದ್ದು ದುಬಾರಿ ಎನ್ನುವ ಕಾರಣಕ್ಕೆ ಹಕ್ಕುಪತ್ರ ಪಡೆದಿರಲಿಲ್ಲ. ಈ ಬಾರಿ ಕನಿಷ್ಠ ಕಂದಾಯ ಮೊತ್ತ ಮಲ್ಪೆ ಕೊಳ ಮಾದರಿಯಲ್ಲಿ ನಿಗದಿಯಾಗಲಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಗ್ರಾ.ಪಂ. ಸದಸ್ಯ ಕೃಷ್ಣ ಪೂಜಾರಿ, ಜಯಶ್ರೀ, ರಶ್ಮಿಕಾ, ಗೀತಾ ಖಾರ್ವಿ, ಸರಸ್ವತಿ, ಬಿಜೆಪಿ ಮುಖಂಡ ಮಹಾಬಲ ಕುಂದರ್, ನಾಗರಾಜ ವಿ. ಕುಂದರ್, ಮನೋಹರ್ ಕುಂದರ್ ಕೋಡಿಬೆಂಗ್ರೆ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.