ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ: ಉಡುಪಿ ಜಿಲ್ಲಾ ಜನಜಾಗೃತಿ ವೇದಿಕೆಯ ನೂತನ ಅಧ್ಯಕ್ಷರಾಗಿ ರಟ್ಟಾಡಿ ನವೀನಚಂದ್ರ ಶೆಟ್ಟಿ ಆಯ್ಕೆಯಾಗಿದ್ದಾರೆ. ಉಡುಪಿಯ ಪ್ರಗತಿಯ ಸೌಧ ಕಟ್ಟಡದ ಸಭಾಂಗಣದಲ್ಲಿ ಮಾ.14ರಂದು ನಡೆದ ಉಡುಪಿ ಪ್ರಾದೇಶಿಕ ಕಚೇರಿ ವ್ಯಾಪ್ತಿಯ ಉಡುಪಿ ಜಿಲ್ಲಾ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆಯ ಸಭೆಯಲ್ಲಿ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.
ಕುಂದಾಪುರ, ಬೈಂದೂರು ತಾಲೂಕಿನ ಜನಜಾಗೃತಿ ವೇದಿಕೆಯ ಸ್ಥಾಪಕಾಧ್ಯಕ್ಷರಾದ ಬಿ. ಅಪ್ಪಣ್ಣ ಹೆಗ್ಡೆ ಅವರು ದೀಪ ಬೆಳಗಿಸಿ ಚಾಲನೆ ನೀಡಿದರು. ವೇದಿಕೆಯಲ್ಲಿ ಜಿಲ್ಲಾ ಜನಜಾಗೃತಿ ವೇದಿಕೆಯ ಅಧ್ಯಕ್ಷರಾದ ನವೀನ್ ಅಮೀನ್, ರಾಜ್ಯ ವೇದಿಕೆಯ ನಿಕಟಪೂರ್ವ ಅಧ್ಯಕ್ಷರಾದ ದೇವದಾಸ್ ಹೆಬ್ಬಾರ್, ಪ್ರಾದೇಶಿಕ ನಿರ್ದೇಶಕರಾದ ವಸಂತ ಸಾಲ್ಯಾನ್, ಜನಜಾಗೃತಿ ವೇದಿಕೆಯ ಪ್ರಾದೇಶಿಕ ನಿರ್ದೇಶಕಾದ ವಿವೇಕ್ ವಿನ್ಸೆಂಟ್ ಪಾಯಸ್, ಜಿಲ್ಲಾ ನಿರ್ದೇಶಕರಾದ ಶಿವರಾಯ ಪ್ರಭು ಮುಂತಾದವರು ಉಪಸ್ಥಿತರಿದ್ದರು.
ಸಭೆಯಲ್ಲಿ 2023-24ನೇ ಸಾಲಿನ ಕ್ರಿಯಾ ಯೋಜನೆಯ ಕುರಿತಂತೆ ಸಮಗ್ರ ಚರ್ಚೆ ನಡೆಸಲಾಯಿತು.
ಈ ಸಂದರ್ಭದಲ್ಲಿ ಮುಂದಿನ 2 ವರ್ಷಗಳ ಅವಧಿಗೆ ಉಡುಪಿ ಜಿಲ್ಲಾ ಜನಜಾಗೃತಿ ವೇದಿಕೆಯ ನೂತನ ಅಧ್ಯಕ್ಷರಾಗಿ ಕುಂದಾಪುರ ತಾಲೂಕಿನ ನವೀನ್ ಚಂದ್ರ ಶೆಟ್ಟಿ ಅವರು ಆಯ್ಕೆಯಾದರು. ಉಪಾಧ್ಯಕ್ಷರಾಗಿ ಕಾರ್ಕಳ ತಾಲೂಕಿನ ಸುಭಾಷ್‍ಚಂದ್ರ ಚೌಟ ಆಯ್ಕೆಯಾದರು. ಕಾರ್ಯಕ್ರಮವನ್ನು ಕುಂದಾಪುರ-2 ತಾಲೂಕಿನ ಯೋಜನಾಧಿಕಾರಿಗಳಾದ ನಾರಾಯಣ ಪಾಲನ್ ನಿರ್ವಹಿಸಿ, ಜನಜಾಗೃತಿ ಯೋಜನಾಧಿಕಾರಿಗಳಾದ ತಿಮ್ಮಯ್ಯ ನಾಯ್ಕ್ ಸ್ವಾಗತಿಸಿದರು. ಉಡುಪಿ ತಾಲೂಕಿನ ಯೋಜನಾಧಿಕಾರಿ ರಾಮ ಎಮ್ ವಂದಿಸಿದರು.