ಉಡುಪಿ :ಜಿಲ್ಲಾ ವ್ಯಾಪ್ತಿಯಲ್ಲಿ ಪ್ರಚಾರ ಫಲಕ ಅಳವಡಿಸಲು ಅನುಮತಿ ಪಡೆಯಬೇಕು: ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ.

0
295

ಕುಂದಾಪುರ ಮಿರರ್ ಸುದ್ದಿ…

ಉಡುಪಿ: ಜಿಲ್ಲೆಯ ನಗರ ಸೇರಿದಂತೆ ಗ್ರಾಮೀಣ ಭಾಗದಲ್ಲಿ ಯಾವುದೇ ರೀತಿಯ ಸಭೆ ಸಮಾರಂಭಗಳು ಸೇರಿದಂತೆ ಮತ್ತಿತರ ಕಾರ್ಯಕ್ರಮಗಳಲ್ಲಿ ಪ್ರಚಾರ ಫಲಕಗಳನ್ನು ಅಳವಡಿಸುವ ಮುನ್ನ ಸ್ಥಳೀಯ ಸಂಸ್ಥೆಗಳು ಅಥವಾ ಗ್ರಾಮ ಪಂಚಾಯತ್ ನಿಂದ ಅನುಮತಿ ಪಡೆಯುವುದು ಕಡ್ಡಾಯವಾಗಿದೆ ತಪ್ಪಿದಲ್ಲಿ ಅಂತಹವರ ವಿರುದ್ದ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ ತಿಳಿಸಿದರು.

ಅವರು ಇಂದು ಮಣಿಪಾಲದ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ನಡೆದ ರಾಜಕೀಯ ಪಕ್ಷಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

Click Here

ಸಾಮಾನ್ಯವಾಗಿ ಯಾವುದೇ ಪ್ರಚಾರ ಫಲಕಗಳು ಭಿತ್ತಿಪತ್ರಗಳು ಕರಪತ್ರಗಳು ಧ್ವನಿವರ್ಧಕಗಳ ಬಳಕೆ ಸೇರಿದಂತೆ ಮತ್ತಿತರ ಪ್ರಚಾರ ಕೈಗೊಳ್ಳುವ ಮುನ್ನ ನಿಗಧಿತ ಪ್ರಾಧಿಕಾರದಿಂದ ಕಾನೂನುನಡಿಯಲ್ಲಿ ಅವಶ್ಯವಿರುವ ಅನುಮತಿ ಪತ್ರವನ್ನು ಪಡೆದು ಕಾರ್ಯಗತಗೊಳಿಸಬೇಕು. ಒಂದೊಮ್ಮೆ ಉಲ್ಲಂಘಿಸಿ ನಡೆದುಕೊಂಡಲ್ಲಿ ಅಂತಹವರ ವಿರುದ್ದ ಕಾನೂನಡಿಯಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಯಾವುದೇ ರೀತಿಯ ಪ್ರಚಾರ ಫಲಕಗಳು ಸೇರಿದಂತೆ ಮತ್ತಿತರ ಪ್ರಚಾರ ಸಾಮಗ್ರಿಗಳನ್ನು ಅನುಮತಿ ಪಡೆದು ಬಳಸಿದ್ದಲ್ಲಿ ,ಅನುಮತಿಯ ಕಾಲಾವಧಿ ಮುಗಿದ ಕೂಡಲೇ ಅವುಗಳನ್ನು ತೆರವುಗೊಳಿಸಬೇಕು ಎಂದ ಅವರು ಯಾವುದೇ ಸಭೆ ಸಮಾರಂಭ ಮೆರವಣಿಗೆ ನಡೆಸಲು ಅನುಮತಿ ತೆಗೆದುಕೊಳ್ಳುವುದು ಕಡ್ಡಾಯ ಎಂದರು.

ಮತದಾರರ ಪಟ್ಟಿಯಲ್ಲಿ ಜಿಲ್ಲೆಯ ಪ್ರತಿಯೊಬ್ಬ ಅರ್ಹ ಮತದಾರರು ತಮ್ಮ ಹೆಸರು ನೊಂದಾವಣಿ ಆಗಿದೆಯೇ ಎಂಬ ಬಗ್ಗೆ ಖಚಿತಪಡಿಸಿಕೊಳ್ಳಬೇಕು , ಹೆಸರು ಬಿಟ್ಟು ಹೋದಲ್ಲಿ ಕೂಡಲೇ ಹೆಸರು ನೊಂದಾಯಿಸಿಕೊಳ್ಳಬೇಕು, ಮುಂದಿನ ವಾರದಲ್ಲಿ ಬಿ.ಎಲ್.ಓ ಗಳು ಹಾಗೂ ಚುನಾವಣಾ ಏಜೆಂಟರುಗಳ ಮತಗಟ್ಟೆ ಕೇಂದ್ರಗಳಲ್ಲಿ ಮತದಾರರ ಪಟ್ಟಿಯನ್ನು ಪರಿಶೀಲಿಸಿ ಯಾವುದೇ ರೀತಿ ಗೊಂದಲಗಳಿದ್ದಲ್ಲಿ ಚುನಾವಣಾಧಿಕಾರಿಗಳ ಗಮನಕ್ಕೆ ತರುವಂತೆ ತಿಳಿಸಿದರು.
ಪ್ರತಿ ಮತದಾನದ ಕೇಂದ್ರಗಳಲ್ಲಿ ಅಗತ್ಯ ಮೂಲಭೂತ ಸೌಕರ್ಯಗಳನ್ನು ವೀಕ್ಷಿಸಿ ಒಂದೊಮ್ಮೆ ಯಾವುದೇ ಸೌಕರ್ಯಗಳ ಕೊರತೆಯಿದ್ದಲ್ಲಿ ಚುನಾವಣಾಧಿಕಾರಿಗಳ ಗಮನಕ್ಕೆ ತರಬೇಕು ಎಂದ ಅವರು ಈ ಬಾರಿ ವಿಶೇಷವಾಗಿ 80 ವರ್ಷ ಮೇಲ್ಪಟ್ಟವರು ಮತ್ತು ವಿಶೇಷ ಚೇತನರಿಗೆ ಅಂಚೆ ಮತದಾನ ಮಾಡಲು ಅವಕಾಶ ಕಲ್ಪಿಸುವ ಸಾಧ್ಯತೆಗಳಿವೆ ಎಂದರು.

ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಸನ್ನ ಹೆಚ್, ಎಸ್ಪಿ ಹಾಕೆ ಅಕ್ಷಯ್ ಮಚ್ಚೀಂದ್ರ , ಅಪರ ಜಿಲ್ಲಾಧಿಕಾರಿ ವೀಣಾ, ತಾಲೂಕು ಚುನಾವಣಾ ಅಧಿಕಾರಿಗಳು ಹಾಗೂ ವಿವಿಧ ರಾಜಕೀಯ ಪಕ್ಷಗಳ ಪ್ರತಿನಿಧಿಗಳು ಉಪಸ್ಥಿತರಿದ್ದರು.

Click Here

LEAVE A REPLY

Please enter your comment!
Please enter your name here