ಕುಂದಾಪುರ ಮಿರರ್ ಸುದ್ದಿ….
ಕೋಟ: ಪರೋಪಕಾರಾರ್ಥಮಿದಂ ಶರೀರಂ ಎಂಬ ಉಕ್ತಿಯಂತೆ ಬದುಕನ್ನು ಸಾರ್ಥಕಗೊಳಿಸುವ ಹಂಬಲವಿರುವವರಿಗೆ, ಅದರಲ್ಲೂ ವೈದ್ಯಕೀಯ ವೃತ್ತಿಪರರಿಗೆ ಜನ್ಮ ಕೊಟ್ಟ ನೆಲದ ಋಣಭಾರವನ್ನು ಹಗುರಗೊಳಿಸಲು ಇರುವ ಅತ್ಯಂತ ಸೂಕ್ತ ಮಾರ್ಗವು ಉಚಿತ ಶಿಬಿರವಾಗಿದ್ದು ,ಈ ದಿಸೆಯಲ್ಲಿ ಡಾ.ಕೆ.ಎಸ್.ಉಪಾಧ್ಯರು ಮಾದರಿಯಾಗಿದ್ದಾರೆಂದು ಶ್ರೀ ಗುರುನರಸಿಂಹ ದೇವಳದ ಆಡಳಿತ ಮಂಡಳಿಯ ಅಧ್ಯಕ್ಷ ಡಾ.ಕೆ.ಎಸ್.ಕಾರಂತ ಅಭಿಪ್ರಾಯಪಟ್ಟರು.
ಸಾಲಿಗ್ರಾಮದ ಶ್ರೀ ಗುರುನರಸಿಂಹ ದೇವಸ್ಥಾನದ ಘಟಕವಾದ ಶ್ರೀ ಮದ್ಯೋಗಾನಂದ ಉಚಿತ ಚಿಕಿತ್ಸಾಲಯದ ಆಶ್ರಯದಲ್ಲಿ ಮೂಲತಃ ಕೋಟತಟ್ಟು- ಪಡುಕರೆ, ಪ್ರಕೃತ ಬೆಂಗಳೂರಿನಲ್ಲಿ ಚರ್ಮ ರೋಗ ತಜ್ಞ ಡಾ.ಕೆ.ಎಸ್.ಉಪಾಧ್ಯರಿಂದ ಏರ್ಪಟ್ಟ ತಪಾಸಣೆ ಮತ್ತು ಲಭ್ಯ ಔಷಧ ವಿತರಣಾ ಶಿಬಿರವನ್ನು ದೀಪ ಪ್ರಜ್ವಲನದ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.
ಡಾ.ಉಪಾಧ್ಯರ ಪುತ್ರಿಯರಾದ ಡಾ.ಅನನ್ಯ ಮತ್ತು ಶರಣ್ಯ ತಂದೆಯವರೊಂದಿಗೆ ಸಹಕರಿಸಿದರು. ಆಸುಪಾಸಿನ ಊರುಗಳಿಂದ 70ಕ್ಕೂ ಹೆಚ್ಚಿನ ಫಲಾನುಭವಿಗಳು ಶಿಬಿರದ ಪ್ರಯೋಜನವನ್ನು ಪಡೆದರು. ಕೂಟ ಮಹಾ ಜಗತ್ತಿನ ಕೇಂದ್ರಾಧ್ಯಕ್ಷ ಡಾ.ಸತೀಶ ಹಂದೆ ,ದೇವಳದ ಉಪ ಪ್ರಬಂಧಕ ಗಣೇಶ ಭಟ್ಟ ಮತ್ತು ಸಹಾಯಕ ಸಿಬ್ಬಂದಿ ಅಖಿಲೇಶ ಐತಾಳರು ವ್ಯವಸ್ಥೆಯ ಉಸ್ತುವಾರಿಯನ್ನು ವಹಿಸಿದ್ದರು.