ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ: ಯುವಶಕ್ತಿಯಲ್ಲಿ ಚೈತನ್ಯ ಶಕ್ತಿ ತುಂಬುವ ಸಮಗ್ರ ಶಿಕ್ಷಣವನ್ನು ನೀಡಬೇಕು ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ.ಮೋಹನ ಆಳ್ವ ಕರೆ ನೀಡಿದರು.
ಅವರು ಮಾರ್ಚ್ 5ರಂದು ಇಲ್ಲಿನ ಭಂಡಾರ್ಕಾರ್ಸ್ ಪದವಿ ಕಾಲೇಜಿನಲ್ಲಿ 60ರ ಸಂಭ್ರಮದಲ್ಲಿ “ನಾಟಕೋತ್ಸವ”ವನ್ನು ಉದ್ಘಾಟಿಸಿ ಮಾತನಾಡಿದರು.
ಭಾವಿ ಭವಿಷ್ಯವನ್ನು ಕಟ್ಟಿಕೊಡುವ ಯುವಜನತೆಯಲ್ಲಿ ಒಳ್ಳೆಯ ಮನಸ್ಥಿತಿ ಕಟ್ಟುವ ಕೆಲಸವಾಗಬೇಕು. ನಾವು ಜಾಗೃತರಾಗಬೇಕು. ಜಾತಿ,ಮಾತು,ಪಂಥ ಮೀರಿದ ಊರನ್ನು ಕಟ್ಟಬೇಕು. ಸಂಸ್ಕಾರದ ಸಂಸ್ಕೃತಿ ಕಟ್ಟುವುದು ಅವಿಭಾಜ್ಯ ಅಂಗವಾಗಬೇಕು ಅಲ್ಲದೆ ನಮ್ಮಲ್ಲಿ ಸದ್ವಿಚಾರದ ಸೌಂದರ್ಯ ಪ್ರಜ್ಞೆ ಇರಬೇಕು ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ವಿಶ್ವಸ್ಥ ಮಂಡಳಿಯ ಹಿರಿಯ ಸದಸ್ಯ ಕೆ.ಶಾಂತಾರಾಮ್ ಪ್ರಭು ವಹಿಸಿದ್ದರು.
ವೇದಿಕೆಯಲ್ಲಿ ವಿಶ್ವಸ್ಥ ಮಂಡಳಿಯ ಸದಸ್ಯರಾದ ಕೆ.ದೇವದಾಸ್ ಕಾಮತ್, ರಾಜೇಂದ್ರ ತೋಳಾರ್, ಸದಾನಂದ ಚಾತ್ರ, ಡಾ.ರಂಜಿತ್ ಕುಮಾರ್ ಶೆಟ್ಟಿ, ಅಭಿನಂದನ್ ಶೆಟ್ಟಿ ಉಪಸ್ಥಿತರಿದ್ದರು.
ಭಂಡಾರ್ಕಾರ್ಸ್ ಪದವಿ ಕಾಲೇಜಿನ ಪ್ರಾಂಶುಪಾಲರಾದ ಡಾ.ಎನ್.ಪಿ.ನಾರಾಯಣ ಶೆಟ್ಟಿ ಸ್ವಾಗತಿಸಿದರು. ಪದವಿ ಕಾಲೇಜಿನ ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಡಾ.ಶುಭಕರಾಚಾರಿ ವಂದಿಸಿದರು. ಕಲಾ ಸಂಪದ ಸಂಯೋಜಕರಾದ ಶಶಾಂಕ್ ಪಟೇಲ್ ಕಾರ್ಯಕ್ರಮ ನಿರೂಪಿಸಿದರು.