Video:
ಕುಂದಾಪುರ ಮಿರರ್ ಸುದ್ದಿ…
ಬೈಂದೂರು: ನಾನು 32 ವರ್ಷಗಳಿಂದ ಬಿಜೆಪಿಯಲ್ಲಿ ಸಕ್ರಿಯ ಸದಸ್ಯನಾಗಿ, ಪಕ್ಷದ ಬಲವರ್ಧನೆಗೆ ಶ್ರಮಿಸಿದ್ದೇನೆ. ಎಲ್ಲಾ ಚುನಾವಣೆಗಳಲ್ಲಿ ಪಕ್ಷದ ಗೆಲುವಿಗೆ ದುಡಿದಿದ್ದೇನೆ. ಬ್ಯಾಂಕ್ ಕೆಲಸಕ್ಕೆ ರಾಜೀನಾಮೆ ನೀಡಿ ಪಕ್ಷದ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದೇನೆ. ಕಳೆದ ಮೂರು ಅವಧಿಗಳಲ್ಲಿಯೂ ಶಾಸಕ ಸ್ಥಾನದ ಅಭ್ಯರ್ಥಿತನ ನೀಡುವುದಾಗಿ ವಂಚಿಸುತ್ತಾ ಬಂದಿದ್ದಾರೆ ಎಂದು ಜಿ.ಪಂ ಮಾಜಿ ಸದಸ್ಯ ಬಾಬು ಶೆಟ್ಟಿ ತಿಳಿಸಿದರು.
ಅವರು ರವಿವಾರ ಬೈಂದೂರಿನ ಜೆಎನ್‍ಆರ್ ಕಲ್ಯಾಣ ಮಂದಿರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕೆಪಿಸಿಸಿ ರಾಜ್ಯಾಧ್ಯಕ್ಷ ಡಿ.ಕೆಶಿವಕುಮಾರ್ ಸಮ್ಮುಖದಲ್ಲಿ ಕಾಂಗ್ರೆಸ್ ಸೇರ್ಪಡೆಗೊಂಡು ಮಾತನಾಡಿದರು.
ನನ್ನ ಮೇಲೆ ಯಾವುದೇ ಕ್ರಿಮಿನಲ್ ಅಪಾಧನೆಗಳಿಲ್ಲ, ಪದವಿ ಶಿಕ್ಷಣ ಪಡೆದಿದ್ದೇನೆ. ತಳಮಟ್ಟದಿಂದ ಪಕ್ಷದಲ್ಲಿ ಗುರುತಿಸಿಕೊಂಡಿದ್ದೇನೆ. ಹಾಗಿದ್ದು ನನಗೆ ಯಾವ ಮಾನದಂಡ ಕೊರತೆ ಎಂದು ಟಿಕೆಟು ನಿರಾಕರಿಸಿದ್ದಾರೆ ಗೊತ್ತಿಲ್ಲ. ಬಿಜೆಪಿ ನಂಬಿಸಿ ಮೋಸ ಮಾಡಿದ್ದಾರೆ. ಬಿಜೆಪಿಯ ಎಲ್ಲ ಕುಯುಕ್ತಿಯನ್ನು ಬಯಲಿಗೆಳೆಯುತ್ತೇನೆ ಎಂದ ಅವರು, ನನ್ನ ಹಿರಿತನ, ಆರ್ಹತೆ ಕಾಂಗ್ರೆಸ್ ಪಕ್ಷದಲ್ಲಿ ಸೂಕ್ತ ಗೌರವ ನೀಡುವುದಾಗಿ ಹೇಳಿದ್ದಾರೆ. ಈ ಬಾರಿ ಸರ್ಕಾರ ರಚಿಸಲು ಬೈಂದೂರಿನಿಂದ ಒಂದು ಸ್ಥಾನ ಕಾಂಗ್ರೆಸ್ ಖಂಡಿತಾ ಗೆಲ್ಲಲಿದೆ ಎಂದು ಡಿಕೆ ಶಿವಕುಮಾರ್ ಅವರಿಗೆ ಬಾಬು ಹೆಗ್ಡೆ ಮಾತು ನೀಡಿದರು.
ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಶಂಕರ ಪೂಜಾರಿ ತಗ್ಗರ್ಸೆ, ತಾ.ಪಂ. ಮಾಜಿ ಸದಸ್ಯ ಸದಾಶಿವ ಪಡುವರಿ, ಮೌಲನಾ ದಸ್ತಗೀರ್ ಸಾಹೇಬ್, ಎಪಿಎಂಸಿ ಮಾಜಿ ಅಧ್ಯಕ್ಷ ವೆಂಕಟ ಪೂಜಾರಿ ಸಹಿತ ಅನೇಕ ಬಿಜೆಪಿ ಮುಖಂಡರು ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆಗೊಂಡಿದ್ದಾರೆ.
ಈ ಸಂದರ್ಭದಲ್ಲಿ ಉದ್ಯಮಿ ಯು,ಬಿ ಶೆಟ್ಟಿ, ಕಾಂಗ್ರೆಸ್ ಅಭ್ಯರ್ಥಿ ಕೆ.ಗೋಪಾಲ ಪೂಜಾರಿ, ಪಕ್ಷದ ಮುಖಂಡರಾದ ಎಂ.ಎ ಗಫೂರು, ರಾಜು ಪೂಜಾರಿ, ಪ್ರಕಾಶ್ಚಂದ್ರ ಶೆಟ್ಟಿ, ವಾಸುದೇವ ಯಡಿಯಾಳ, ಸಂಜೀವ ಶೆಟ್ಟಿ ಸಂಪಿಗೇಡಿ, ಕಿಶನ್ ಹೆಗ್ಡೆ ಕೊಳ್ಕೆಬೈಲು, ಅಶೋಕ ಪೂಜಾರಿ ಬೀಜಾಡಿ, ಗೌರಿ ದೇವಾಡಿಗ, ಮದನ್ ಕುಮಾರ್, ಪ್ರದೀಪ ಕುಮಾರ್ ಶೆಟ್ಟಿ, ಡಾ.ಸುಬ್ರಹ್ಮಣ್ಯ ಭಟ್ ಮೊದಲಾದವರು ಉಪಸ್ಥಿತರಿದ್ದರು.