ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ: ಯಮನ ಆಹ್ವಾನ ಎಲ್ಲಿ ಯಾರಿಗೆ ಹೇಗಿರುತ್ತೋ ಗೊತ್ತಿಲ್ಲ. ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಐವರ್ನಾಡು ಗ್ರಾಮದ ಮಡ್ತಿಲ ಮೀರನಾಥ್ ಗೌಡ ಎಂಬುವರ ಮಗ ಸುಹಾಸ್ಂ.ಎಂ. (೨೧) ಎಂಬಾತ ಶುಕ್ರವಾರ ಮಧ್ಯಾಹ್ನ ಕುಂದಾಪುರ ತಾಲೂಕಿನ ಬಿದ್ಕಲ್ ಕಟ್ಟೆ ಸಮೀಪದ ಸೌಡ ಎಂಬಲ್ಲಿ ಹೊಳೆಗೆ ಸ್ನೇಹಿತರೊಂದಿಗೆ ಜಲಕ್ರೀಡೆಯಾಡಲೆಂದು ಹೋಗಿ ನಾಪತ್ತೆಯಾಗಿದ್ದಾನೆ.
ಸುಹಾಸ್ ಮೂಡಬಿದ್ರೆಯ ಆಯುರ್ವೇದ ಔಷಧಿ ಕಂಪೆನಿಯೊಂದರ ಮೆಡಿಕಲ್ ರೆಪ್ ಆಗಿ ಕೆಲಸ ಮಾಡುತ್ತಿದ್ದ. ಶುಕ್ರವಾರ ಬೆಳಿಗ್ಗೆಯಷ್ಟೇ ತನ್ನ ಮನೆಯಾದ ಐವರ್ನಾಡಿನ ಮಡ್ತಿಲದಿಂದ ಮೂಡಬಿದ್ರೆಗೆ ಬಂದಿದ್ದ. ಅಲ್ಲಿಂದ ಸ್ನೇಹಿತರೊಂದಿಗೆ ಸೌಡ ಹೊಳೆಗೆ ಆಟವಾಡಲು ಬಂದಿದ್ದರು ಎಂದು ತಿಳಿದು ಬಂದಿದೆ. ಸೌಡ ಸಮೀಪದ ಹೊಳೆಯಲ್ಲಿ ನೀರಿಗಿಳಿದ ಸುಹಾಸ್ ಆಕಸ್ಮಿಕವಾಗಿ ಹೊಳೆಯಲ್ಲಿ ಕೊಚ್ಚಿ ಹೋಗಿದ್ದಾನೆ. ಜೊತೆಗಿದ್ದ ಯುವಕರು ತಕ್ಷಣ ಸ್ಥಳೀಯರಿಗೆ ಸುದ್ಧಿ ತಲುಪಿಸಿದ್ದು, ಕಾಂಗ್ರೆಸ್ ಮುಖಂಡ ಕಾನ್ಮಕ್ಕಿ ಹರಿಪ್ರಸಾದ್ ಶೆಟ್ಟಿಯವರು ಕೋಟ ಪೊಲೀಸರಿಗೆ ಹಾಗೂ ಸುಳ್ಯದ ನಿತಾನಂದ ಮುಂಡೋಡಿಯವರಿಗೆ ಮಾಹಿತಿ ನೀಡಿ ಸಂಬಂಧಿಕರಿಗೆ ಸುದ್ಧಿ ಮುಟ್ಟಿಸಿದ್ದಾರೆ.
ಘಟನಾ ಸ್ಥಳಕ್ಕೆ ಅಗ್ನಿಶಾಮಕ ದಳ ಹಾಗೂ ಮುಳುಗು ತಜ್ಞರು ಧಾವಿಸಿದ್ದು, ಸುಹಾಸನನ್ನು ಹುಡುಕುತ್ತಿದ್ದಾರೆ. ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಹೊಳೆಯಲ್ಲಿ ಭಾರೀ ಹರಿವು ಇದ್ದು, ಸುಹಾಸ್ ದೇಹ ಹೊಳೆಯಿಂದ ಹರಿದು ಸಮುದ್ರ ಸೇರುವ ಸಾಧ್ಯತೆ ಹೆಚ್ಚಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.