ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ: ಚುನಾವಣಾ ಆಯೋಗದ ಕಟ್ಟುನಿಟ್ಟಿನ ಕ್ರಮಗಳ ನಡುವೆ ನಡೆದ ಸಾರ್ವತ್ರಿಕ ವಿಧಾನಸಭಾ ಚುನಾವಣೆ ಪ್ರಚಾರ, ಅಬ್ಬರಗಳ ಬಳಿಕ ಬುಧವಾರ ಚುನಾವಣೆಯೂ ಮುಗಿದು ಹೋಗಿದೆ.
ಕುಂದಾಪುರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ದಿನೇಶ್ ಹೆಗ್ಡೆ ಮೊಳಹಳ್ಳಿ ತಮ್ಮ ಹುಟ್ಟೂರಾದ ಮೊಳಹಳ್ಳಿಯ ಕೈಲ್ಕೇರೆ ಶಾಲೆಯಲ್ಲಿ ಮತದಾನ ಮಾಡಿದರೆ, ಕುಂದಾಪುರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎ.ಕಿರಣ್ ಕುಮಾರ್ ಕೊಡ್ಗಿ ಅವರು ಬೈಂದೂರು ವಿಧಾನಸಭಾ ಕ್ಷೇತ್ರದ ಮಚ್ಚಟ್ಟು ಮತಗಟ್ಟೆಯಲ್ಲಿ ಮತದಾನ ಮಾಡಿದರು.
ಬೈಂದೂರು ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಗುರುರಾಜ್ ಗಂಟಿಹೊಳೆ ಬಿಜೂರು ಗ್ರಾಮದ ಕಂಚಿಕಾನ್ ಶಾಲೆಯ ಮತಗಟ್ಟೆಯಲ್ಲಿ ಮತದಾನ ಮಾಡಿದರೆ ಬೈಂದೂರು ಕಾಂಗ್ರೆಸ್ ಅಭ್ಯರ್ಥಿ ಕೆ. ಗೋಪಾಲ ಪೂಜಾರಿಯವರು ಮನೆ ಸಮೀಪದ ಕಟ್ ಬೆಲ್ತೂರು ಕನ್ಯಾನ ಶಾಲೆಯಲ್ಲಿ ಮತದಾನ ಮಾಡಿದರು. ಇಲ್ಲಿನ ಜೆಡಿಎಸ್ ಅಭ್ಯರ್ಥಿ ಮನ್ಸೂರ್ ಇಬ್ರಾಹಿಂ ಅವರು ಮರವಂತೆಯ ಮತಗಟ್ಟೆಯಲ್ಲಿ ಮತ ಚಲಾಯಿಸಿದರು.
ಈ ಬಾರಿಯ ಚುನಾವಣೆಯಲ್ಲಿ ವಿಶೇಷವೆಂದರೆ, ಬೆಳಿಗ್ಗೆ ಮತದಾನ ಆರಂಭವಾಗುವ ಮೊದಲೇ ಬಹುತೇಕ ಮತಗಟ್ಟೆಗಳಲ್ಲಿ ಮತದಾರರು ಸರತಿ ಸಾಲಿನಲ್ಲಿ ಕಾಧು ನಿಂತು ಮತ ಚಲಾಯಿಸಿದರು. ಮಧ್ಯಾಹ್ನ ಸುಮಾರಿಗೆ ಶೇ.50 ಮತದಾನವಾದರೆ ಬಳಿಕ ಮತದಾನದ ವೇಗ ಕುಂಠಿತಗೊಂಡು ಸರಾಸರಿ ಅಂದಾಜು ಶೇ. 72ಕ್ಕೆ ತಲುಪಿತ್ತು. ಬೈಂದೂರಿನಲ್ಲಿ 78.94% ಹಾಗೂ ಕುಂದಾಪುರದಲ್ಲಿ 77.64% ಮತದಾನವಾಗಿದೆ.
ಬೈಂದೂರಿನಲ್ಲಿ ಬಿಜೆಪಿ ಅಭ್ಯರ್ಥಿ ಗುರುರಾಜ್ ಗಂಟಿಹೊಳೆಯವ ಪರ ಕಾರ್ಯಕರ್ತರು ಬರಿಗಾಲಿನಲ್ಲಿಯೇ ಮತದಾನದ ಪ್ರಕ್ರಿಯೆಯಲ್ಲಿ ಪಾಲ್ಗೊಂಡರು. ಇಡೀ ದಿನ ಗುರುರಾಜ್ ಜೊತೆಗೆ ಬರಿಗಾಲಿನಲ್ಲಿಯೇ ಇದ್ದು ತಮ್ಮ ಅಭ್ಯರ್ಥಿ ಪರ ಹುರುಪು ತುಂಬಿದರು.
ಕುಂದಾಪುರ ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು 209592 ಮತದಾರರಿದ್ದಾರೆ. ಒಟ್ಟು 222 ಮತಗಟ್ಟೆಗಳಿವೆ. ಇದರಲ್ಲಿ 38 ನಗರ ಪ್ರದೇಶ, 184 ಗ್ರಾಮೀಣ ಪ್ರದೇಶದ ಮತಗಟ್ಟೆಗಳಾಗಿವೆ.
ಇದೀಗ ಎರಡೂ ಪಕ್ಷಗಳ ಅಭ್ಯರ್ಥಿಗಳು ಹಾಗೂ ಕಾರ್ಯಕರ್ತರು ತಮ್ಮ ತಮ್ಮ ಪಕ್ಷಗಳ ಗೆಲುವಿನ ಬಗ್ಗೆ ಲೆಕ್ಕಾಚಾರದಲ್ಲಿ ತೊಡಗಿಕೊಂಡಿದ್ದು ಅಂತಿಮ ಫಲಿತಾಂಶಕ್ಕಾಗಿ ಛಾತಕ ಪಕ್ಷಿಗಳಂತೆ ಕಾಯುತ್ತಿದ್ದಾರೆ.