ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ: ಕೆಲಸದ ಸ್ಥಳದಲ್ಲಿ ಕುಡಿದು ಗಲಾಟೆ ಮಾಡಿಕೊಂಡಿದ್ದ ವಲಸೆ ಕಾರ್ಮಿಕರ ಪೈಕಿ ಒಬ್ಬ ಇನ್ನೊಬ್ಬನ್ನು ಕೊಲೆ ಮಾಡುವ ಮೂಲಕ ಅಂತ್ಯ ಕಂಡಿದೆ. ಕುಂದಾಪುರ ತಾಲೂಕಿನ ಗಂಗೊಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಆಲೂರು ಗ್ರಾಮ ಪಂಚಾಯತ್ನ ಹರ್ಕೂರು ಗ್ರಾಮದ ಕಟ್ಟಿನಮಕ್ಕಿ ಎಂಬಲ್ಲಿ ಭಾನುವಾರ ರಾತ್ರಿ ಕೊಲೆ ಕೃತ್ಯ ನಡೆದಿದ್ದು, ಬಾಗಲಕೋಟೆ ಮೂಲದ ಸಂಗಪ್ಪ ಅಲಿಯಾಸ್ ಸಂಗಮೇಶ (42) ಕೊಲೆಯಾದ ವ್ಯಕ್ತಿಯಾಗಿದ್ದು, ಮಂಡ್ಯ ಮೂಲದ ರಾಜಾ (36) ಕೊಲೆ ಮಾಡಿದ ಆರೋಪಿಯಾಗಿದ್ದಾನೆ.
ಆಲೂರಿನ ಕಟ್ಟಿನಮಕ್ಕಿ ನಾಗೇಂದ್ರ ಆಚಾರ್ಯ ಎಂಬುವರು ಗುತ್ತಿಗೆ ಕೆಲಸ ಮಾಡಿಕೊಂಡಿದ್ದು, ಕುಂದಾಪುರದ ಮೈದಾನಗಳಲ್ಲಿ ವಾಸವಿರುವ ಸಂಗಪ್ಪ ಹಾಗೂ ರಾಜಾ ನಾಗೇಂದ್ರ ಆಚಾರ್ಯರ ಜೊತೆ ಒಂದು ತಿಂಗಳಿನಿಂದ ಕೆಲಸ ಮಾಡುತ್ತಿದ್ದರು. ಇಲ್ಲಿನ ದಿನೇಶ್ ಆಚಾರಿಯವರ ಮನೆ ನಿರ್ಮಾಣ ಕೆಲಸ ಮಾಡುತ್ತಿದ್ದವರು ಶನಿವಾರ ಸಂಬಳ ಪಡೆದು ಕುಂದಾಪುರಕ್ಕೆ ಹೋಗಿದ್ದರು. ಭಾನುವಾರ ಮತ್ತೆ ಮನೆ ಸಮೀಪದ ಶೆಡ್ಡಿಗೆ ಬಂದಿದ್ದು, ಮದ್ಯ ಸೇವಿಸಿದ್ದರು ಎನ್ನಲಾಗಿದೆ.
ಶೆಡ್ಡಿನಲ್ಲಿಯೇ ಮಲಗಿದ್ದ ಇಬ್ಬರ ನಡುವೆ ಯಾವುದೋ ಸಣ್ಣಪುಟ್ಟ ಕಾರಣಕ್ಕೆ ಮಾತಿಗೆ ಮಾತು ಬೆಳೆದಿದೆ. ಇದು ಹೀಗೆಯೇ ತಡರಾತ್ರಿಯವರೆಗೂ ಮುಂದುವರೆದು ಸಂಗಪ್ಪ ಎಂಬಾತ ಶೆಡ್ ಎದುರಿನ ಮನೆ ನಿರ್ಮಾಣಕ್ಕೆ ಹಾಕಲಾಗಿದ್ದ ಪಂಚಾಂಗದಲ್ಲಿ ಮಲಗಿದ್ದಾತನ ತಲೆಗೆ ರಾಜಾ ಕಲ್ಲು ಎತ್ತಿ ಹಾಕಿದ್ದಾನೆ. ಇದರಿಂದ ಸಂಗಪ್ಪ ಅಲ್ಲೆಯೇ ಸಾವನ್ನಪ್ಪಿದ್ದಾನೆ. ಬಳಿಕ ರಾಜಾ ನಾಗೇಮದ್ರ ಆಚಾರ್ಯರ ಮನೆಗೆ ಬಂದು ಮಾಹಿತಿ ನೀಡಿ ಪೊಲೀಸರಿಗೆ ಶರಣಾಗಿದ್ದಾನೆ.
ಘಟನಾ ಸ್ಥಳಕ್ಕೆ ಕುಂದಾಪುರ ಡಿವೈಎಸ್ಪಿ ಬೆಳ್ಳಿಯಪ್ಪ, ಬೈಂದೂರು ವೃತ್ತನಿರೀಕ್ಷಕ ಸಂತೋಷ್ ಎ. ಕಾಯ್ಕಿಣಿ, ಗಂಗೊಳ್ಳಿ ಠಾಣೆಯ ಪಿಎಸ್ಐ ವಿನಯ್ ಎಂ. ಕೊರ್ಲಹಳ್ಳಿ, ತನಿಖಾ ವಿಭಾಗದ ಪಿಎಸ್ಐ ಜಯಶ್ರೀ ಹೊನ್ನೂರು, ಕೊಲ್ಲೂರು ಠಾಣೆ ತನಿಖಾ ಪಿಎಸ್ಐ ಸುಧಾರಾಣಿ ಹಾಗೂ ಸಿಬ್ಬಂದಿಗಳು ಭೇಟಿ ನೀಡಿದ್ದಾರೆ. ಫಾರೆನ್ಸಿಕ್ ತಂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದೆ. ಗಂಗೊಳ್ಳಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.