ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ: ನಾಲ್ಕು ಬಾರಿ ಶಾಸಕರಾಗಿ ಆಯ್ಕೆಯಾಗಿ ಬೈಂದೂರು ವಿಧಾನಸಭಾ ಕ್ಷೇತ್ರವನ್ನು ಅಭಿವೃದ್ದಿಯತ್ತ ಕೊಂಡೊಯ್ದಿದ್ದ ಮಾಜೀ ಶಾಸಕ ಕೆ. ಗೋಪಾಲ ಪೂಜಾರಿಯವರಿಗೆ ಸೂಕ್ತ ಸ್ಥಾನಮಾನ ನೀಡುವಂತೆ ರಾಜ್ಯ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅವರಿಗೆ ಕೊಲ್ಲೂರು ಕಾಂಗ್ರೆಸ್ ಸಮಿತಿ ವತಿಯಿಂದ ಮನವಿ ಮಾಡಲಾಯಿತು.
ಬುಧವಾರ ಗೃಹಸಚಿವ ಕುಟುಂಬ ಸಮೇತ ಕೊಲ್ಲೂರಿಗೆ ಆಗಮಿಸಿ ಚಂಡಿಕಾಯಾಗದಲ್ಲಿ ಭಾಗವಹಿಸಿ ದೇವಿಯ ದರ್ಶನ ಪಡೆದ ಬಳಿಕ ನಡೆದ ಸಭೆಯಲ್ಲಿ ಈ ಮನವಿ ಮಾಡಲಾಯಿತು.
ಮಾಜೀ ಶಾಸಕ ಕೆ. ಗೋಪಾಲ ಪೂಜಾರಿಯವರು ಈ ಹಿಂದೆ ಕೆ.ಎಸ್.ಆರ್.ಟಿ.ಸಿ ನಿಗಮ ಅಧ್ಯಕ್ಷರಾಗಿದ್ದ ಸಂದರ್ಭ ಉಡುಪಿ ಜಿಲ್ಲೆಯ ಗ್ರಾಮೀಣ ಭಾಗಗಳಿಗೆ ಬಸ್ ಸೌಲಭ್ಯ ಒದಗಿಸಿದ್ದರು. ಬೈಂದೂರಿನಲ್ಲಿ ಬಸ್ ಡಿಪೋ ಹಾಗೂ ಸುಸಜ್ಜಿತ ಬಸ್ ನಿಲ್ದಾಣಕ್ಕೆ ಅನುಮೋದನೆ ದೊರಕಿತ್ತು. ಈ ಹಿನ್ನೆಲೆಯಲ್ಲಿ ಸೂಕ್ತ ಸ್ಥಾನಮಾನ ನೀಡಿದಲ್ಲಿ ಉಡುಪಿ ಜಿಲ್ಲೆಯಲ್ಲಿ ಪಕ್ಷ ಸಂಘಟನೆಗೆ ಹೆಚ್ಚು ಒತ್ತು ನೀಡಲು ಸಾಧ್ಯವಾಗುತ್ತದೆ ಎಂದು ಮನವಿ ಮಾಡಲಾಯಿತು.
ಅಲ್ಲದೇ ಕೊಲ್ಲೂರು ದೇವಸ್ಥಾನಕ್ಕೆ ಖಾಯಂ ಪೊಲೀಸರನ್ನು ನೇಮಿಸುವಂತೆ ಬೇಡಿಕೆ ಸಲ್ಲಿಸಲಾಯಿತು. ಈ ಸಂದರ್ಭ ಕೊಲ್ಲೂರು ಕಾಂಗ್ರೆಸ್ ಸಮಿತಿ ವತಿಯಿಂದ ಗೃಹಸಚಿವರನ್ನು ಸನ್ಮಾನಿಸಲಾಯಿತು.
ಮಾಜೀ ಸಚಿವ ವಿನಯಕುಮಾರ್ ಸೊರಕೆ, ಮಾಜೀ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ. ರಮೇಶ್ ಗಾಣಿಗ, ಮಾಜಿ ತಾಲೂಕು ಪಂಚಾಯತ್ ಸದಸ್ಯೆ ಗ್ರೀಷ್ಮಾ ಗಿರಿಧರ್ ಭಿಡೆ, ಗ್ರಾಮ ಪಂಚಾಯತ್ ಸದಸ್ಯ ಪ್ರಕಾಶ್ ಪೂಜಾರಿ, ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಜಯಪ್ರಕಾಶ್ ಶೆಟ್ಟಿ, ಕಾಂಗ್ರೆಸ್ ಮುಖಂಡರಾದ ವಾಸು, ವಿನಾಯಕ ಆಚಾರ್ಯ, ಚಂದ್ರ ಬಳೆಗಾರ್, ಹರೀಶ್ ಸಿ ವಿ ಮೊದಲಾದವರು ಉಪಸ್ಥಿತರಿದ್ದರು.