ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ: ಸಾಮಾಜಿಕ ಜಾಲತಾಣಗಳು ಬಹು ಶಕ್ತಿಶಾಲಿ ಸಂವಹನ ಮಾಧ್ಯಮಗಳಾಗಿ ಮಾರ್ಪಟ್ಟಿವೆ. ಈ ವಿದ್ಯುನ್ಮಾನ ಸಮರ್ಪಕ ಬಳಕೆ ಹಾಗೂ ಸದ್ಭಳಕೆ ತೀರಾ ಅಪರೂಪ. ಆದರೆ ಕೋಟೇಶ್ವರದ ರಾಘವೇಂದ್ರ ಎನ್ನುವ ಗಾಯಕ ಫೇಸ್‍ಬುಕ್ ಪುಟದ ಮೂಲಕ ತೆರೆಮರೆಯ ಸುಪ್ತ ಪ್ರತಿಭೆಗಳನ್ನು ಲೈವ್‍ನಲ್ಲಿ ವೀಕ್ಷಕರಿಗೆ ಪರಿಚಯಿಸುವ ಕೆಲಸ ಮಾಡುತ್ತಿದ್ದಾರೆ. ಅವರ ಈ ವಿಶಿಷ್ಠ ಕೈಂಕರ್ಯ 100 ಅವೃತ್ತಿಗಳನ್ನು ಕಂಡು ಮುನ್ನುಗ್ಗುತ್ತಿದೆ.
ಯುವ ಗಾಯಕರಾಗಿ ಗುರುತಿಸಿಕೊಂಡಿರುವ ರಾಘವೇಂದ್ರ ಕೋಟೇಶ್ವರ ಅವರ ಕಣ್ಮುಂದೆ ಹಲವಾರು ಪ್ರತಿಭೆಗಳು ಇದ್ದು ಅವರಿಗೆ ಸೂಕ್ತ ವೇದಿಕೆ ಸಿಗದೇ ಇರುವುದನ್ನು ಹತ್ತಿರದಿಂದ ಗಮನಿಸಿದರು. ದೊಡ್ಡ ದೊಡ್ಡ ವೇದಿಕೆಯಲ್ಲಿ ಗ್ರಾಮೀಣ ಪ್ರತಿಭೆಗಳಿಗೆ ಅವಕಾಶ ಮರೀಚಿಕೆ. ರಿಯಾಲಿಟಿ ಶೋಗಳು ಹಾಗೂ ಇತರ ವೇದಿಕೆಯ ಕಾರ್ಯಕ್ರಮಗಳಲ್ಲಿ ಹಳ್ಳಿಯ, ಬೇರೆ ವೃತ್ತಿ ನಿರತರಾಗಿರುವ ಪ್ರತಿಭೆಗಳಿಗೆ ತಮ್ಮ ಪ್ರತಿಭೆಯನ್ನು ಸಮಾಜದ ಮುಂದೆ ತೋರಿಸಲು ಸಾಧ್ಯವಾಗುವುದಿಲ್ಲ. ಅಂತಹ ಪ್ರತಿಭೆಗಳಿಗೆ ಒಂದು ವೇದಿಕೆ ಮಾಡಿಕೊಡಬೇಕು ಎನ್ನುವ ಹಿನ್ನೆಲೆಯಲ್ಲಿ ತನ್ನ ಫೇಸ್ ಬುಕ್ ಪೇಜ್‍ನಲ್ಲಿ ಇನ್ನೂ ಸೂಕ್ತ ವೇದಿಕೆ ಸಿಗದ ಪ್ರತಿಭೆಗಳನ್ನೇ ಲಕ್ಷ್ಯದಲ್ಲಿ ಇರಿಸಿಕೊಂಡು ಪ್ರತಿಭಾನವರಣಕ್ಕೆ ನೇರಪ್ರಸಾರ ಕಾರ್ಯಕ್ರಮ ರೂಪಿಸಿದರು. ತನ್ನ ಮನೆಯಲ್ಲಿಯೇ ಲೈವ್ ನೀಡಲು ವ್ಯವಸ್ಥೆ ಕಲ್ಪಿಸಿಕೊಂಡರು. ಈ ಪ್ರಯತ್ನಕ್ಕೆ ದಿನದಿಂದ ದಿನಕ್ಕೆ ಉತ್ತಮ ಪ್ರತಿಕ್ರಿಯೆ ಸಿಗತೊಡಗಿತು. ಹಳ್ಳಿ ಹಳ್ಳಿಯ, ಗ್ರಾಮಾಂತರ ಪ್ರದೇಶದ ಬೇರೆ ಬೇರೆ ವೃತ್ತಿ ನಿರತರು ಬಂದು ಲೈವ್ ಕಾರ್ಯಕ್ರಮ ನೀಡತೊಡಗಿದರು. ಯಶಸ್ವಿ ನೂರು ಎಪಿಸೋಡುಗಳನ್ನು ಕಂಡ ಈ ಸರಣಿ ಕಾರ್ಯಕ್ರಮ ಸೆ.7ರಂದು ತೆಕ್ಕಟ್ಟೆಯ ಹಯಗ್ರೀವ ಕಲ್ಯಾಣ ಮಂಟಪದಲ್ಲಿ 100ನೇ ಯಶಸ್ವಿ ಪ್ರಯೋಗ ದಾಖಲಿಸಿತು.
ಒಂದೊಂದು ಎಪಿಸೋಡುಗಳಲ್ಲಿ 3 ಗಂಟೆಯ ತನಕ ಆಗಮಿಸುವ ಕಲಾವಿದರು, ಗಾಯಕರು ಕಾರ್ಯಕ್ರಮ ನೀಡುತ್ತಾರೆ. ಹಾಡು, ನೃತ್ಯ, ಭಜನೆ, ಭಾಗವತಿಕೆ ಹೀಗೆ ವ್ಯಕ್ತಿಯಲ್ಲಿ ಸುಪ್ತವಾಗಿರುವ ಕಲೆಯನ್ನು ವೀಕ್ಷಕರ ಮುಂದಿಡುವುದೇ ಈ ಪೇಜ್‍ನ ಉದ್ದೇಶ. ಈಗಾಗಲೇ ಈ ಪೇಜ್‍ನಲ್ಲಿ ಪೆಟ್ರೋಲ್ ಬಂಕ್‍ನಲ್ಲಿ ಕೆಲಸ ಮಾಡುವವರು ತಮ್ಮ ಪ್ರತಿಭೆ ಪ್ರದರ್ಶಿಸಿದ್ದಾರೆ. ಗಾರೆ ಕೆಲಸ ಮಾಡುವರು , ಕೂಲಿ ಕೆಲಸ ಮಾಡುವವರು ಕೂಡಾ ಧೈರ್ಯದಿಂದ, ಆತ್ಮವಿಶ್ವಾಸದಿಂದ ತಮ್ಮಲ್ಲಿರುವ ಪ್ರತಿಭೆಯನ್ನು ಪ್ರದರ್ಶನ ಮಾಡಿದ್ದಾರೆ. ತಮ್ಮಲ್ಲಿರುವ ಪ್ರತಿಭೆಯನ್ನು ಪ್ರದರ್ಶಿಸಿಸಲು ಸೂಕ್ತ ವೇದಿಕೆ ಸಿಗಲಿಲ್ಲ. ಅದೀಗ ಇಲ್ಲಿ ಸಿಕ್ಕಿದೆ ಎನ್ನುವ ಕೃತಾರ್ಥ ಭಾವವನ್ನು ಅವರು ವ್ಯಕ್ತ ಪಡಿಸಿದ್ದಾರೆ.
ಸುಪ್ತ ಪ್ರತಿಭೆಗಳೊಂದಿಗೆ ಈಗಾಗಲೇ ಪ್ರಚಲಿತದಲ್ಲಿರುವ ಪ್ರತಿಭೆಗಳಿಗೂ ಕೂಡಾ ಅವಕಾಶ ನೀಡಲಾಗಿದೆ. ಯಕ್ಷಗಾನ ಭಾಗವತಿಕೆ, ಚಂಡೆ, ಮದ್ದಳೆ ವಾದಕರಿಗೂ ಮುಕ್ತ ಅವಕಾಶ ನೀಡಲಾಗಿದೆ. ಭಜನೆ, ಕೀರ್ತನೆ, ಭಾವಗೀತೆ, ಜಾನಪದ ಗೀತೆ ಇತ್ಯಾದಿಗಳನ್ನು ಹಂಚಿಕೊಂಡಿದ್ದಾರೆ. ಅದೆಷ್ಟೋ ಹೊಸ ಪ್ರತಿಭೆಗಳನ್ನು ಪರಿಚಯಿಸಲಾಗಿದೆ. ಯಕ್ಷಗಾನಾಭಿ ವಂದನಂ ಮೂಲಕ ಯಕ್ಷಗಾನಕ್ಕೆ ಒತ್ತು ನೀಡಿದ್ದಾರೆ.
ಇತ್ತೀಚೆಗೆ ನೂರರ ಸಂದರ್ಭದಲ್ಲಿ ವೈವಿಧ್ಯಮಯ ಕಾರ್ಯಕ್ರಮವನ್ನು ಆಯೋಜನೆ ಮಾಡಿಕೊಂಡರು. ಗಾಯನ, ನರ್ತನ, ಜಾದೂ, ಯಕ್ಷನಾಟ್ಯ ಜೊತೆಯಲ್ಲಿ ಈ ತನಕ ಪರಿಚಯಿಸಿದ ಪ್ರತಿಭೆಗಳಿಗೆ ಗೌರವರ್ಪಣೆ, ಇಬ್ಬರು ಕಲಾಮನಸ್ಸುಗಳಿಗೆ ಸಹಾಯಹಸ್ತ ವಿತರಣೆಯನ್ನು ನೆರವೇರಿಸಿದರು. ಈ ವೇದಿಕೆಯನ್ನು ಇನ್ನಷ್ಟು ಪ್ರಬಲಶಾಲಿಯನ್ನಾಗಿ ಬೆಳೆಸುವ ಸಂಕಲ್ಪ ಇವರದ್ದು.
ಕೋಟೇಶ್ವರ ಶ್ರೀ ಶನೀಶ್ವರ ದೇವಸ್ಥಾನದ ಪೂಜಾ ಅರ್ಚಕರಾದ ಬಸವರಾಜು ಮತ್ತು ಕುಸುಮ ದಂಪತಿಗಳ ಪುತ್ರರಾದ ರಾಘವೇಂದ್ರ ಸಂಗೀತ ಕ್ಷೇತ್ರದ ಬಗ್ಗೆ ಆಸಕ್ತಿ ಮೂಡಿ ಅದರಲ್ಲಿ ಪ್ರಾವೀಣ್ಯತೆ ಪಡೆದರು. ಇವರ ಬಾಳಸಂಗಾತಿ ವಂದನಾ ಕೂಡಾ ಉತ್ತಮ ಗಾಯಕಿ. ಇವರ ಎಲ್ಲಾ ಕಾರ್ಯಗಳಿಗೂ ಪ್ರೇರಕಿ. ಯುವ ಮದ್ದಳೆಗಾರರಾಗಿರುವ ಭರತ್ ಚಂದನ್ ಕೋಟೇಶ್ವರ ಕೂಡಾ ಸಲಹೆ ಸಹಕಾರ ನೀಡುತ್ತಿದ್ದಾರೆ. ಸೋದರರ ತುಂಬು ಪ್ರೋತ್ಸಾಹ ಯಶಸ್ಸಿಗೆ ಕಾರಣ. ಇವರ ಪ್ರತಿಭೆಗೆ ಹಲವು ಸನ್ಮಾನ, ಗೌರವ ಪುರಸ್ಕಾರಗಳು ಸಂದಿವೆ.
“ಇಂತಹ ಕಲ್ಪನೆ ಬರಲು ಮಂಗಳೂರಿನ ಒಂದು ತಂಡ ಕಾರಣ. ಅಲ್ಲಿ ಇವರು ಸಂಗೀತವನ್ನು ಲೈವ್ ನೀಡಲು ಹೋಗುತ್ತಿದ್ದರು. ಆಗ ಅಲ್ಲಿನ ಸಂಘಟಕರು ನೀವೇ ಏಕೆ ಮಾಡಬಾರದು ಎನ್ನುವ ಸಲಹೆ ನೀಡಿದರು. ಅದು ಸರಿ ಎನಿಸಿತು. ನಾನು ಲೈವ್ ನೀಡಿದರೆ ನಮ್ಮ ಸುತ್ತಮುತ್ತಲಿನ ಪ್ರತಿಭೆಗಳಿಗೂ ಪ್ರಯೋಜನ ಆಗುತ್ತದೆ ಎನ್ನುವ ಹಿನ್ನೆಲೆಯಿಂದ ಈ ಪ್ರಯತ್ನಕ್ಕೆ ಮುಂದಾದೆ. ಇದಕ್ಕೆ ಸೋದರ ರಮೇಶ ಪ್ರೋತ್ಸಾಹ ನೀಡಿದರು. ಮನೆಯಲ್ಲಿ ಲೈವ್ ನೀಡಲು ಸ್ಟುಡಿಯೋ ನಿರ್ಮಿಸಲು ಸಹಕರಿಸಿದರು. ಈಗ ಮನೆಯಿಂದಲೇ ಗುಣಮಟ್ಟದ ದೃಶ್ಯ-ಧ್ವನಿಯ ಗುಣಮಟ್ಟದೊಂದಿಗೆ ನೇರಪ್ರಸಾರ ಮಾಡಲಾಗುತ್ತಿದೆ”-ರಾಘವೇಂದ್ರ ಕೋಟೇಶ್ವರ