ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ: ಇಂದು ರಾಜ್ಯದೆಲ್ಲೆಡೆ “ಶಕ್ತಿ” ಯೋಜನೆ ಲೋಕಾರ್ಪಣೆಗೊಂಡಿದ್ದು ಮುಂದಿನ ಮೂರು ತಿಂಗಳುಗಳ ಒಳಗೆ ಪ್ರತಿಯೊಬ್ಬ ಅರ್ಹ ಫಲಾನುಭವಿಗಳು ಶಕ್ತಿ ಕಾರ್ಡ್ ಮಾಡಿಸಿಕೊಳ್ಳುವುದು ಕಡ್ಡಾಯ ಎಂದು ಕುಂದಾಪುರ ತಹಸೀಲ್ದಾರ್ ಶೋಭಾಲಕ್ಷ್ಮೀ ಹೇಳಿದರು.
ಅವರು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಮಂಗಳೂರು ವಿಭಾಗದ ವತಿಯಿಂದ ಕರ್ನಾಟಕದಾದ್ಯಂತ ಮಹಿಳೆಯರಿಗೆ ನಗರ ಸಾರಿಗೆ, ಸಾಮಾನ್ಯ ಹಾಗೂ ವೇಗದೂರತ ಸರ್ಕಾರೀ ಬಸ್ ಗಳಲ್ಲಿ ಉಚಿತ ಪ್ರಯಾಣ “ಶಕ್ತಿ ಯೋಜನೆ” ಯನ್ನು ಕುಂದಾಪುರ ಸರ್ಕಾರೀ ಬಸ್ ನಿಲ್ದಾಣದಲ್ಲಿ ಉದ್ಘಾಟಿಸಿ ಮಾತನಾಡಿದರು.
ಇಂದಿನಿಂದ ಯೋಜನೆ ಆರಂಭವಾಗಿದ್ದು, ಪ್ರಯಾಣಿಸುವ ಮಹಿಳೆಯರು ತಾತ್ಕಾಲಿಕವಾಗಿ ಕರ್ನಾಟಕದಲ್ಲಿ ವಾಸ್ತವ್ಯವಿರುವ ದಾಖಲೆಗಳನ್ನು ಬಸ್ ಕಂಡಕ್ಟರ್ ಗೆ ತೋರಿಸಬೇಕು. ಕಂಡಕ್ಟರ್ ಉಚಿತ ಪ್ರಯಾಣದ ಟಕೆಟ್ ನೀಡುತ್ತಾರೆ. ಪ್ರಯಾಣಿಕರು ಪ್ರಯಾಣ ಮುಗಿಯುವ ವರೆಗೂ ಉಚಿತ ಟಕೆಟನ್ನು ಜೊತೆಗಿಟ್ಟುಕೊಳ್ಳಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದು, ದೀಪ ಬೆಳಗಿಸುವಲ್ಲಿ ಹಾಜರಿದ್ದುದು ವಿಶೇಷವಾಗಿತ್ತು.
ಬೈಂದೂರು ತಹಸೀಲ್ದಾರ್ ಶ್ರೀಕಾಂತ್ ಎಸ್ ಹೆಗ್ಡೆ, ಕುಂದಾಪುರ ಪೊಲೀಸ್ ಉಪನಿರೀಕ್ಷಕ ಈರಯ್ಯ ಡಿ.ಎನ್., ಕೆ.ಎಸ್.ಆರ್.ಟಿ.ಸಿ. ಘಟಕ ವ್ಯವಸ್ಥಾಪಕ ರಾಜೇಶ್ ಎಂ., ಮಂಗಳೂರು ವಿಭಾಗದ ಸಹಾಯಕ ಆಡಳಿತ ಅಧಿಕಾರಿ ರಾಜು ಉಪಸ್ಥಿತರಿದ್ದರು.
ಬಳಿಕ “ಶಕ್ತಿ” ಯೋಜನೆಯ ಅಂಗವಾಗಿ ಶೃಂಗರಿಸಿದ್ದ ಬಸ್ಸಿಗೆ ಕಟ್ಟಲಾಗಿದ್ದ ರಿಬ್ಬನ್ ಕಟ್ ಮಾಡುವ ಮೂಲಕ ಅಧಿಕೃತ ಚಾಲನೆ ನೀಡಲಾಯಿತು. ಬಳಿಕ ತಹಸೀಲ್ದಾರ್ ಶೋಭಾಲಕ್ಷ್ಮೀ ಸೇರಿದಂತೆ ಐವತ್ತಕ್ಕೂ ಹೆಚ್ಚು ಮಹಿಳೆಯರು ಎರಡು ಬಸ್ಸುಗಳಲ್ಲಿ ಕುಂದಾಪುರದ ಬಸ್ ನಿಲ್ದಾಣದಿಂದ ತ್ರಾಸಿ ವರೆಗೆ ಪ್ರಯಾಣಿಸಿ ವಾಪಾಸ್ಸಾಗುವ ಮೂಲಕ ಉಚಿತ ಪ್ರಯಾಣವನ್ನು ಖಚಿತಗೊಳಿಸಿದರು.
ಎಡಬ್ಲ್ಯೂಎಸ್ ಕುಂದಾಪುರ ಬಿ.ಟಿ.ನಾಯಕ್ ಸ್ವಾಗತಿಸಿದರು. ರಾಜೇಶ್ ಮೊಗವೀರ ಪ್ರಾಸ್ತಾವಿಸಿ, ಯೋಗೀಶ್ ಬಂಗೇರಾ ವಂದಿಸಿದರು. ನೆರದಿದ್ದವರಿಗೆ ಸಿಹಿ ತಿಂಡಿ ಹಂಚಿ ಸಂಭ್ರಮಿಸಿದರು.