ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ: ಸಂತ ಅಂತೋನಿಯವರ ಪುಣ್ಯ ಕ್ಷೇತ್ರ ಹೊಸಂಗಡಿ ಸಮೀಪದ ಕೆರೆಕಟ್ಟೆಯಲ್ಲಿ ವಾರ್ಷಿಕ ಹಬ್ಬ ಮಂಗಳವಾರದಂದು ಬಹಳ ವಿಜೃಂಭಣೆಯಿಂದ ನಡೆಯಿತು. ದಿವ್ಯ ಬಲಿಪೂಜೆಯನ್ನು ಉಡುಪಿ ಧರ್ಮ ಪ್ರಾಂತ್ಯದ ಪರಮ ಪೂಜ್ಯ ಬಿಷಪ್ ಜೆರಾಲ್ಡ್ ಐಸಾಕ್ ಲೋಬೋ ನೇರವೇರಿಸಿದರು.
ಆರ್ಶೀವಚನ ನೀಡಿದ ಅವರು, ದೇವರ ವಾಕ್ಯದ ಮಹತ್ವ ಮತ್ತು ಅದನ್ನು ನಮ್ಮ ಜೀವನದಲ್ಲಿ ಹೇಗೆ ಅಳವಡಿಸಿಕೊಳ್ಳಬೇಕು, ಇದರಿಂದ ಸಮಾಜದಲ್ಲಿ ಒಂದು ಉತ್ತಮ ಕುಟುಂಬವನ್ನು ಕಟ್ಟಲು ಸಾಧ್ಯವಾಗುತ್ತದೆ. ಎಂದು ತಿಳಿಹೇಳಿದರು.
ಸಂತ ಅಂತೋನಿಯವರ ಜೀವನ ಕ್ರಮ ಎಲ್ಲರಿಗೂ ಅನುಕರಣೀಯ, ಬಡವರು, ನಿರ್ಗತಿಕರು, ಸಮಾಜದಲ್ಲಿನ ಕೆಳವರ್ಗದವರ ಮೇಲೆ ಕಾಳಜಿ ಇರಬೇಕು, ತ್ಯಾಗ ಪ್ರೀತಿ ಹಾಗೂ ನಿಸ್ವಾರ್ಥ ಸೇವೆಯಿಂದ ಎಲ್ಲರೂ ದೇವರ ಪ್ರೀತಿ ಮತ್ತು ಕೃಪೆಗೆ ಪಾತ್ರರಾಗಬಹುದು, ಸಂತ ಅಂತೋನಿ ದೇವರ ಮೇಲೆ ಇನ್ನಷ್ಟು ಭಕ್ತಿ ಜಾಸ್ತಿಯಾಗಬೇಕು, ಆಗ ಮಾತ್ರ ಜೀವನದಲ್ಲಿ ಸಾರ್ಥಕತೆಯನ್ನು ಸಾಧಿಸಲು ಸಾಧ್ಯ ಎಂದು ಹೇಳಿದರು.
ಉಡುಪಿ ಧರ್ಮಪ್ರಾಂತ್ಯದ ವಿಗಾರ್ ಜೆರಾಲ್ ಫರ್ಡಿನಾಂಡ್ ಗೊನ್ಸಾಲ್ವಿಸ್ ಪ್ರವಚನ ನೀಡಿದರು.
ಫಾದರ್ ಸ್ಟ್ಯಾನಿ ತಾವ್ರೊ ವಿಗಾರ್ ವಾರ್ (ವಲಯ ಕುಂದಾಪುರ), ಕೆರೆಕಟ್ಟೆ ಕ್ಷೇತ್ರದ ನಿರ್ದೇಶಕ ಧರ್ಮಗುರುಗಳಾದ ಫಾದರ್ ಸುನೀಲ್ ವೇಗಸ್ ಹಾಗೂ ಕುಂದಾಪುರ ಮತ್ತು ಉಡುಪಿ ಪ್ರಾಂತ್ಯದ ಧರ್ಮಗುರುಗಳು ಬಲಿಪೂಜೆಗೆ ಸಹಕರಿಸಿದರು.
ದಿವ್ಯ ಬಲಿ ಪೂಜೆಯ ಮೊದಲು ಸಂತ ಅಂತೋಣಿ ಕೆರೆಕಟ್ಟೆಯ ಬಹು ದೊಡ್ಡ ಯೋಜನೆಯ ನಿರಾಶ್ರಿತರ ಮನೆಯ ಕಟ್ಟಡಕ್ಕೆ ಉಡುಪಿ ಧರ್ಮ ಪ್ರಾಂತ್ಯದ ಪರಮ ಪೂಜ್ಯ ಬಿಷಪ್ ಜೆರಾಲ್ಡ್ ಐಸಾಕ್ ಲೋಬೋ ಅವರು ಶಿಲಾನ್ಯಾಸ ನೆರವೇರಿಸಿದರು.
ಈ ಸಂದರ್ಭ ವಾರ್ಷಿಕ ಮಹೋತ್ಸವಕ್ಕೆ ಸಹಕರಿಸಿದವರಿಗೆ ಮೊಂಬತ್ತಿ ನೀಡುವ ಮೂಲಕ ಧನ್ಯವಾದ ಸಮರ್ಪಿಸಲಾಯಿತು.
ಮಂಗಳವಾರ ಬೆಳಗ್ಗಿನಿಂದಲೇ ಪುಣ್ಯ ಕ್ಷೇತ್ರಕ್ಕೆ ಸಾವಿರಾರು ಭಕ್ತರು ಭೇಟಿ ನೀಡಿ ಮೊಂಬತ್ತಿ ಹಚ್ಚಿ ಹೂ ಸಮರ್ಪಣೆ ಮಾಡುವ ಮೂಲಕ ಸಂತ ಅಂತೋನಿಯವರಿಗೆ ಪೂಜೆಸಲ್ಲಿಸಿದರು.
ಎಲ್ಲ ಭಕ್ತಾಧಿಗಳಿಗೆ ಭೋಜನದ ವ್ಯವಸ್ಥೆ ಮಾಡಲಾಯಿತು.