ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ: ಉಡುಪಿ ಜಿಲ್ಲಾ ಕೊರಗ ಸಂಘಟನೆಗಳು ಹಾಗೂ ಕರ್ನಾಟಕ ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿ, ಉಡುಪಿ ಜಿಲ್ಲಾ ಸಂಘಟನಾ ಸಮಿತಿಯ ನೇತೃತ್ವದಲ್ಲಿ ಡಾ. ಮಹಮ್ಮದ್ ಫೀರ್ ವರದಿ ಜ್ಯಾರಿಗೆ ಆಗ್ರಹಿಸಿ ನಾಳೆ ದಿನಾಂಕ 14ರಿಂದ ನಾಡಾ ಗ್ರಾಮ ಪಂಚಾಯತ್ ಎದುರು ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ ನಡೆಸಲಾಗುವುದು ಎಂದು ಕರ್ನಾಟಕ ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿಯ ಉಡುಪಿ ಜಿಲ್ಲಾ ಸಂಚಾಲಕ ಶ್ರೀಧರ ನಾಡಾ ತಿಳಿಸಿದ್ದಾರೆ.
ನಾಡ ಗ್ರಾಮ ಪಂಚಾಯತ್ ವ್ಯಾಪ್ತಿಯ 40 ಕೊರಗ ಕುಟುಂಬಗಳಿಗೆ ಡಾ. ಮಹ್ಮದ್ ಫೀರ್ ವರದಿ ಪ್ರಕಾರ ಪ್ರತಿ ಕೊರಗ ಕುಟುಂಬಗಳಿಗೆ 2.50 ಎಕರೆ ಭೂಮಿ ನೀಡಬೇಕು. ಆದರೆ ವರದಿಯನ್ನು ಸರ್ಕಾರ ಜಾರಿಗೆ ತರದೆ ಕೊರಗ ಸಮುದಾಯಕ್ಕೆ ಅನ್ಯಾಯ ಮಾಡಿದೆ. ಹಾಗಾಗಿ ನಾಡ ಪಂಚಾಯತ್ ವ್ಯಾಪ್ತಿಯ ಪ್ರತಿ ಕೊರಗ ಕುಟುಂಬಗಳಿಗೆ ಭೂಮಿಯನ್ನು ನೀಡಬೇಕು ಹಾಗೂ ಜೈನರ ಕಾಲದಿಂದಲೂ 300 ಅಧಿಕ ವರ್ಷದಿಂದ ವಾಸವಿರುವ, ನಾಡ ಗ್ರಾಮ ಸರ್ವೇ ನಂಬರ್ 41/1 ರ 4.17 ಎಕರೆ ಭೂಮಿ ಕೊರಗ ಕುಟುಂಬದ ಸ್ವಾಧೀನ ಇದೆ. ಕೊರಗ ಸಮುದಾಯದ ಶೈಕ್ಷಣಿಕ ಮತ್ತು ತಿಳುವಳಿಕೆಯ ಕೊರತೆಯಿಂದ ಭೂಮಿಗೆ ಸಂಬಂಧಿಸಿದ ದಾಖಲೆಗಳನ್ನು ಹಿರಿಯರು ಸರಿಯಾಗಿ ನಿರ್ವಹಿಸಿಲ್ಲ. ಕೊರಗರ ಈ ದೌರ್ಬಲ್ಯಗಳನ್ನು ದುರುಪಯೋಗ ಮಾಡಿಕೊಂಡು ಸ್ಥಳೀಯ ಅಂದಿನ ಜಮೀನ್ದಾರರು ಅವರ ಹೆಸರಿಗೆ ದಾಖಲೆಗಳನ್ನು ಮಾಡಿಸಿಕೊಂಡಿದ್ದಾರೆ ಎಂದು ಆರೋಪಿಸಿದ್ದಾರೆ.
ಅಳಿವಿನಂಚಿನಲ್ಲಿರುವ ಕೊರಗರ ಅಭಿವೃದ್ಧಿಗೆ ಸರ್ಕಾರವೆ 1994ರಲ್ಲಿ ನೇಮಿಸಿ ಪಡೆದಿರುವ ಡಾ. ಮಹ್ಮದ್ ಫೀರ್ ಆಯೋಗದ ವರದಿ ಕೊರಗ ಸಮುದಾಯದ ಸಮಗ್ರ ಅಭಿವೃದ್ಧಿಗೆ ಆಶಾದಾಯಕವಾಗಿದೆ. ಇಂತಹ ಮಹತ್ವದ ವರದಿ ಜಾರಿಗೆ ತರಲು ಸರಕಾರ ವಿಫಲವಾಗಿದೆ. ಡಾಕ್ಟರ್ ಮಹಮದ್ ಪೀರ್ ವರದಿ ಪ್ರಕಾರ ಮೊದಲ ಹಂತದಲ್ಲಿ ಪ್ರತಿ ಕೊರಗ ಕುಟುಂಬಗಳಿಗೆ 2.50 ಎಕರೆ ಭೂಮಿಯನ್ನು ನೀಡಿ, ಕೃಷಿ ತರಬೇತಿ, ಕೃಷಿ ಪರಿಕರಗಳ ಜೊತೆಗೆ ಸಹಾಯ ಒದಗಿಸಿ ಕೃಷಿ ಪೂರ್ವ ನಾಗರಿಕತೆಯಿಂದ ಮುಂದಿನ ಹಂತಕ್ಕೆ ಸಮುದಾಯವನ್ನು ಕೊಂಡೊಯ್ಯುವುದು ಸರ್ಕಾರದ ಜವಾಬ್ದಾರಿ ಆಗಿದೆ ಎಂದು ಹೇಳಿದ್ದಾರೆ.
ಪಡುಕೋಣೆ ಕೊರಗರ ಭೂಮಿ ವಿವಾದವನ್ನು ಜಿಲ್ಲಾಧಿಕಾರಿಗಳ ಸಮ್ಮುಖದಲ್ಲಿ ಬಗೆಹರಿಸಿ ನ್ಯಾಯ ಒದಗಿಸಲು ಮತ್ತು ನಾಡ ಪಂಚಾಯತ್ ವ್ಯಾಪ್ತಿಯ ಕೊರಗ ಕುಟುಂಬಗಳ ಭೂಮಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಪರಿಹರಿಸಲು ಒತ್ತಾಯಿಸಿ ನಾಡ ಗ್ರಾಮ ಪಂಚಾಯತ್ ಕಛೇರಿ ಎದುರು ಅನಿರ್ದಿಷ್ಟ ಕಾಲ ಧರಣಿ ಸತ್ಯಾಗ್ರಹ ನಡೆಸಲು ತೀರ್ಮಾನಿಸಿದ್ದು ಮುಖಂಡರಾದ ವಿ. ಗಣೇಶ ಕೊರಗ, ಲಕ್ಷ್ಮಣ ಬೈಂದೂರು, ಮಹಬಲ ಕೋಟ, ಗೌರಿ ಕೆಂಜೂರು ಹಾಗೂ ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿ ರಾಜ್ಯ ಮುಖಂಡರಾದ ಡಾ. ಎಸ್. ವೈ.ಗುರುಶಾಂತ, ಡಾಕ್ಟರ್ ಕೃಷ್ಣಪ್ಪ ಕೊಂಚಾಡಿ ಭಾಗವಹಿಸುತ್ತಾರೆ ಎಂದು ಶ್ರೀಧರ ನಾಡ ಹೇಳಿದ್ದಾರೆ.