ಉತ್ತಮ ದೈಹಿಕ, ಮಾನಸಿಕ, ಆರೋಗ್ಯಕ್ಕೆ ಯೋಗಾಭ್ಯಾಸ ಒಳಿತು: ಶಾಸಕ ಯಶ್‌ಪಾಲ್ ಸುವರ್ಣ

0
280

ಕುಂದಾಪುರ ಮಿರರ್ ಸುದ್ದಿ…

ಉಡುಪಿ :ಯೋಗಾಭ್ಯಾಸದಿಂದ ಮನುಷ್ಯನ ದೈಹಿಕ, ಮಾನಸಿಕ, ಆಧ್ಯಾತ್ಮಿಕ ಆರೋಗ್ಯವನ್ನು ಕಾಪಾಡಿಕೊಳ್ಳಲು ಉತ್ತಮ ಸಾಧನವಾಗಿದ್ದು, ಪ್ರತಿಯೊಬ್ಬರೂ ತಮ್ಮ ದೈನಂದಿನ ಜೀವನದಲ್ಲಿ ಯೋಗಾಭ್ಯಾಸವನ್ನು ಮಾಡಬೇಕೆಂದು ಶಾಸಕ ಯಶ್‌ಪಾಲ್ ಸುವರ್ಣ ಕರೆ ನೀಡಿದರು..

ಅವರು ಇಂದು ನಗರದ ಅಜ್ಜರಕಾಡು ಒಳಾಂಗಣ ಕ್ರೀಡಾಂಗಣದಲ್ಲಿ, ಆಯುಷ್ ಇಲಾಖೆ ಬೆಂಗಳೂರು, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆಯುಷ್ ಇಲಾಖೆ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಉಡುಪಿ, ಡಾ. ಜಿ. ಶಂಕರ್ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರ, ಅಜ್ಜರಕಾಡು ಉಡುಪಿ ಹಾಗೂ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರ ತೆಂಕನಿಡಿಯೂರು ಇವರ ಸಹಯೋಗದಲ್ಲಿ ಆಜಾದಿ ಕಾ ಅಮೃತ ಮಹೋತ್ಸವದ ಅಂಗವಾಗಿ ನಡೆದ ಅಂತರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ, ಮಾತನಾಡುತ್ತಿದ್ದರು.

Click Here

ಯೋಗಾಭ್ಯಾಸವು ಅನಾರೋಗ್ಯ ಹಾಗೂ ಹೆಚ್ಚಿನ ದೈಹಿಕ ಸಮಸ್ಯೆಗಳನ್ನು ದೂರ ಮಾಡುತ್ತದೆ. ಇತ್ತೀಚಿನ ದಿನಗಳಲ್ಲಿ ಯೋಗಾಭ್ಯಾಸವು ವಿಶ್ವದಲ್ಲಿಯೇ ಹೆಚ್ಚಿನ ಮಹತ್ವ ಪಡೆದಿದ್ದು, ಅನೇಕ ದೇಶಗಳಲ್ಲಿ ಜನರು ಇದನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡಿರುವುದು ನಾವು ಕಾಣಬಹುದಾಗಿದೆ ಎಂದರು.

ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ, ಮಾತನಾಡಿ, ಸದೃಢ ಆರೋಗ್ಯಕ್ಕೆ ಯೋಗ ತುಂಬಾ ಸಹಕಾರಿಯಾಗಿದೆ. ನಮ್ಮ ದೇಶದ ಸಾಂಸ್ಕೃತಿಕ ಪರಂಪರೆಯಲ್ಲಿ ಯೋಗಾಭ್ಯಾಸದ ಬಗ್ಗೆ ಇತ್ತು. ಆದರೆ ಆಧುನಿಕ ಜೀವನ ಶೈಲಿಯಿಂದಾಗಿ ಯೋಗಾಭ್ಯಾಸ ಕುಂಠಿತವಾಯಿತು. ಆದರೆ ಇತ್ತೀಚಿನ ದಿನಗಳಲ್ಲಿ ಇದರ ಮಹತ್ವವನ್ನು ಅರಿತು ಜನರು, ಯೋಗಾಭ್ಯಾಸಕ್ಕೆ ಒತ್ತು ಕೊಡುತ್ತಿರುವುದು ಒಂದು ಉತ್ತಮ ಕಾರ್ಯ. ಪ್ರತಿನಿತ್ಯ ಇದರ ಅಭ್ಯಾಸ ಮಾಡುವುದು ಒಳಿತು ಎಂದರು.
ಜಿಲ್ಲೆಯಲ್ಲಿ ಅನೇಕ ಸಂಘ-ಸಂಸ್ಥೆಗಳು ಜನರಿಗೆ ಉತ್ತಮ ಯೋಗಾಭ್ಯಾಸದ ಶಿಬಿರಗಳನ್ನು ನಡೆಸುವುದರೊಂದಿಗೆ ಹೆಚ್ಚಿನ ಜನರು ಇದರಲ್ಲಿ ಪಾಲ್ಗೊಳ್ಳುವಂತೆ ಮಾಡಿರುವುದು ಒಂದು ಅಭಿನಂದನಾರ್ಹ ಕಾರ್ಯ ಎಂದರು.

ಸಭಾ ಕಾರ್ಯಕ್ರಮಕ್ಕೂ ಮುನ್ನ ಸುಮಾರು 45 ನಿಮಿಷಗಳ ಯೋಗದ ಪ್ರಾತ್ಯಕ್ಷಿಕೆ ನಡೆಯಿತು.

ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಸನ್ನ ಹೆಚ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ನಾಗಭೂಷಣ ಉಡುಪ, ಜಿಲ್ಲಾ ಆಯುಷ್ ಅಧಿಕಾರಿ ಡಾ. ಸತೀಶ್ ಆಚಾರ್ಯ್, ಜಿಲ್ಲಾ ಸರ್ಜನ್ ಡಾ. ಸುದೇಶ್ ಕುಮಾರ್, ವಿವಿಧ ಇಲಾಖೆಗಳ ಅಧಿಕಾರಿಗಳು, ಕಾಲೇಜಿನ ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here