Video:
ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ: ದೇಶದ ಪ್ರಧಾನ ಮಂತ್ರಿಗಳಾದ ನರೇಂದ್ರ ಮೋದಿಯವರು ತನ್ನ ಪ್ರತೀ ಭಾಷಣದಲ್ಲಿಯೂ ಹೇಳುವ ಬೇಟಿ ಬಚಾವೋ ಬೇಟಿ ಪಡಾವೋ ಎನ್ನುವ ಮಾತಿಗೆ ವಿರುದ್ಧವಾಗಿ ತನ್ನದೇ ಬಿಜೆಪಿ ಅಧಿಕಾರದಲ್ಲಿರುವ ಮಣಿಪುರದಲ್ಲಿ ನಡೆದ ಘಟನೆಯ ಬಗ್ಗೆ ಮೌನವಾಗಿರುವುದೇಕೆ ಎಂದು ಬೈಂದೂರು ಮಾಜೀ ಶಾಸಕ ಕೆ. ಗೋಪಾಲ ಪೂಜಾರಿ ಆಕ್ರೋಶ ಹೊರಹಾಕಿದ್ದಾರೆ.
ಮಣಿಪುರದಲ್ಲಿ ನಡೆದ ಘಟನೆಗೆ ಸಂಬಂಧಿಸಿ ಕೇಂದ್ರ ಸರ್ಕಾರದ ಮೌನ ನಡೆ ವಿರೊಧಿಸಿ ವಂಡ್ಸೆ ಬ್ಲಾಕ್ ಕಾಂಗ್ರೆಸ್ ವತಿಯಿಂದ ಹಮ್ಮಿಕೊಳ್ಳಲಾದ ಪ್ರತಿಭಟನೆಯನ್ನು ಉದ್ಧೇಶಿಸಿ ಮಾತನಾಡಿದರು. ಮಾನವೀಯತೆ ಎನ್ನುವುದನ್ನೂ ಮರೆತು ಈ ದೇಶದಲ್ಲಿ ಪ್ರಜೆಗಳು ತಲೆ ತಗ್ಗಿಸುವಂತಹಾ ಬೆತ್ತಲೆ ಮೆರವಣಿಗೆ ಘಟನೆಯಿಂದಾಗಿ ಜಗತ್ತಿನ ಮುಂದೆ ನಮ್ಮ ದೇಶ ಮಂಡಿಯೂರುವಂತಾಗಿದೆ. ತಕ್ಷಣ ಮಣಿಪುರದಲ್ಲಿ ರಾಷ್ಟ್ರಪತಿ ಆಳ್ವಿಕೆ ಹೇರಬೇಕು. ಮತ್ತು ಇಲ್ಲಿನ ಹಿಂಸಾಚಾರ ಮತ್ತು ದೌರ್ಜನ್ಯದ ಜವಾಬ್ಧಾರಿಯನ್ನು ಕೇಂದ್ರ ಸರ್ಕಾರವೇ ಹೊರಬೇಕು ಎಂದು ಆಗ್ರಹಿಸಿದರು.
ಇದೇ ಸಂದರ್ಭ ಮಾತನಾಡಿದ ವಂಡ್ಸೆ ಬ್ಲಾಕ್ ಅಧ್ಯಕ್ಷ ಪ್ರದೀಶ್ ಕುಮಾರ್ ಶೆಟ್ಟಿ ಗುಡಿಬೆಟ್ಟು, ಮಣಿಪುರದಲ್ಲಿ ಬಿಜೆಪಿ ಮತ್ತು ಕೇಂದ್ರ ಸರ್ಕಾರವು ವೋಟ್ ಬ್ಯಾಂಕನ್ನಾಗಿ ಮಾಡಿಕೊಳ್ಳುವ ಕುತಂತ್ರ ರಾಜಕೀಯ ನಡೆಸುತ್ತಿದೆ ಎಂದು ಆರೋಪಿಸಿದರು. ಮೂಲನಿವಾಸಿಗಳಾದ ಕುಕಿ ಬುಡಕಟ್ಟು ಜನಾಂಗ ಹಾಗೂ ಮೈತೇಹಿ ಜನಾಂಗಗಳ ನಡುವಿನ ಸಂಘರ್ಷವನ್ನು ಶಮನ ಮಾಡಬೇಕಿದ್ದ ಅಲ್ಲಿನ ರಾಜ್ಯ ಬಿಜೆಪಿ ಸರ್ಕಾರ ಬೆತ್ತಲೆ ಮೆರವಣಿಗೆಯ ದೃಶ್ಯಗಳನ್ನು ನೋಡುತ್ತಾ ರಾಜಕೀಯ ತಂತ್ರ ರೂಪಿಸುತ್ತಿರುವುದು ದೇಶದ ದುರಂತ ಎಂದರು.
ವಂಡಬಳ್ಳಿ ಜಯರಾಮ ಶೆಟ್ಟಿ ಮಾತನಾಡಿ ಮಾತೆತ್ತಿದರೆ ಜೈ ಶ್ರೀರಾಮ್ ಎನ್ನುವ ಬಿಜೆಪಿ ಮಣಿಪುರದಲ್ಲಿ ರಾಮನ ಪತ್ನಿ ಯನ್ನೇ ಬೆತ್ತಲೆಗೊಳಿಸುತ್ತಿದ್ದರೆ ಮೌನಕ್ಕೆ ಶರಣಾಗಿರುವುದು ನಾಚಿಕೆಗೆಡಿನ ಸಂಗತಿ ಎಂದರು. ವಂಡ್ಸೆ ಗ್ರಾಮ ಪಂಚಾಯತ್ ಅಧ್ಯಕ್ಷ ಅಡಕೆಕೊಡ್ಲು ಉದಯಕುಮಾರ್ ಶೆಟ್ಟಿ ಮಾತನಾಡಿದರು.
ಮುಖಂಡರಾದ ಸಂಪಗೇಡಿ ಸಂಜೀವ ಶೆಟ್ಟಿ, ಉದಯ ಪೂಜಾರಿ ಚಿತ್ತೂರು, ನಾಗಪ್ಪ ಕೊಠಾರಿ, ಸದಾಶಿವ ಶೆಟ್ಟಿ, ಸುದೀಶ್ ಶೆಟ್ಟಿ ಗುಲ್ವಾಡಿ, ತಮ್ಮಯ್ಯ ದೇವಾಡಿಗ ಗುಜ್ಜಾಡಿ, ವಾಸುದೇವ ಪೈ ಸಿದ್ದಾಪುರ, ಉಮೇಶ ಕೊಠಾರಿ, ಮಂಜುಳಾ ದೇವಾಡಿಗ, ಕಿರಣ್ ಹೆಗ್ಡೆ, ಪ್ರಸನ್ನಕುಮಾರ್ ಶೆಟ್ಟ, ವಂಡ್ಸೆ ಗ್ರಾ.ಪಂ ಮಾಜಿ ಅದ್ಯಕ್ಷ ಶ್ರೀನಿವಾಸ ಪೂಜಾರಿ ಕಲ್ಮಡಿ, ಸಂಜೀವ ಪೂಜಾರಿ ವಂಡ್ಸೆ, ಗ್ರಾ.ಪಂ ಸದಸ್ಯರಾದ ಗೋವರ್ದನ್ ಜೋಗಿ, ಸುಬ್ಬು ಮೊದಲಾದವರು ಉಪಸ್ಥಿತರಿದ್ದರು.