ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ: ಸಾಸ್ತಾನ ಸಹಕಾರಿ ವ್ಯವಸಾಯಿಕ ಸಂಘದ ಆಡಳಿತ ಮಂಡಳಿಯ ಚುನಾವಣೆ ಭಾನುವಾರ ನಡೆದಿದ್ದು ಐದು ಕಾಂಗ್ರೆಸ್ ಬೆಂಬಲಿತ ಹಾಗೂ ಆರು ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ. ಒಂದು ಸ್ಥಾನ ಪಕ್ಷೇತರ ಅಭ್ಯರ್ಥಿ ಗೆಲುವು ಸಾಧಿಸುವ ಮೂಲಕ ನಿರ್ಣಾಯಕ ಸ್ಥಾನದಲ್ಲಿದ್ದಾರೆ. ಒಟ್ಟು 13 ಸ್ಥಾನಗಳನ್ನು ಹೊಂದಿರುವ ಸೊಸೈಟಿ ಆಡಳಿತ ಮಂಡಳಿಯಲ್ಲಿ ಒಂದು ಎಸ್ಟಿ ಮೀಸಲು ಕ್ಷೇತ್ರದಲ್ಲಿ ಕಾಂಗ್ರೆಸ್ ಬೆಂಬಲಿತ ಸದಸ್ಯ ಅವಿರೋಧ ಆಯ್ಕೆಯಾಗಿದ್ದರು. 12 ಸ್ಥಾನಗಳಿಗೆ ಭಾನುವಾರ ಚುನಾವಣೆ ನಡೆದಿತ್ತು. ಇದರಿಂದಾಗಿ ಕಾಂಗ್ರೆಸ್ ಮತ್ತು ಬಿಜೆಪಿ ತಲಾ ಆರು ಸ್ಥಾನಗಳನ್ನು ಗೆದ್ದುಕೊಂಡಂತಾಗಿದೆ.
ಪಾಂಡೆಶ್ವರ ಸಾಮಾನ್ಯ ಕ್ಷೇತ್ರದಿಂದ ಚಂದ್ರಮೋಹನ್ (ಕಾಂಗ್ರೆಸ್), ಶ್ರೀಧರ ಪಿ.ಎಸ್. (ಕಾಂಗ್ರೆಸ್), ಐರೋಡಿ ಸಾಮಾನ್ಯ ಕ್ಷೇತ್ರದಿಂದ ಆನಂದ ಗಾಣಿಗ(ಕಾಂಗ್ರೆಸ್), ಎ ರಮೇಶ್ ಕಾರಂತ್(ಬಿಜೆಪಿ) , ಮೂಡುಪಡು ಸಾಮಾನ್ಯ ಕ್ಷೇತ್ರದಿಂದ ವಿಜಯ ಪೂಜಾರಿ(ಬಿಜೆಪಿ), ಅರುಣ ಪೂಜಾರಿ ವೈ. (ಬಿಜೆಪಿ), ಬಾಳೆಕುದ್ರು ಸಾಮಾನ್ಯ ಕ್ಷೇತ್ರದಿಂದ ಸುರೇಶ್ ಅಡಿಗ(ಪಕ್ಷೇತರ), ಹಿಂದುಳಿದ ವರ್ಗ ಎ ಮೀಸಲು ಕ್ಷೇತ್ರದಿಂದ ಗೋವಿಂದ ಪೂಜಾರಿ(ಬಿಜೆಪಿ), ಹಿಂದುಳಿದ ವರ್ಗ ಬಿ ಮೀಸಲು ಕ್ಷೇತ್ರದಿಂದ ಕಿರಣ್ ಥಾಮಸ್ ಡಯಾಸ್ (ಬಿಜೆಪಿ), ಮಹಿಳಾ ಮೀಸಲು ಕ್ಷೇತ್ರದಿಂದ ಲೀಲಾವತಿ ಗಂಗಾಧರ ಪೂಜಾರಿ(ಕಾಂಗ್ರೆಸ್), ಕಮಲ ಆಚಾರ್(ಕಾಂಗ್ರೆಸ್), ಪರಿಶಿಷ್ಟ ಜಾತಿ ಮೀಸಲು ಕ್ಷೇತ್ರದಿಂದ ಶೇಖರ ಗದ್ದೆಮನೆ(ಬಿಜೆಪಿ) ಜಯ ಗಳಿಸಿದ್ದಾರೆ. ಪರಿಶಿಷ್ಟ ಪಂಗಡ ಮೀಸಲು ಕ್ಷೇತ್ರದಿಂದ ಕಾಂಗ್ರೆಸ್ ಬೆಂಬಲಿತ ಪ್ರೀತಿ ಅವಿರೋಧ ಆಯ್ಕೆಗೊಂಡಿದ್ದಾರೆ.
ಈ ಹಿಂದೆ ಸಾಸ್ತಾನ ಸಹಕಾರಿ ವ್ಯವಸಾಯಿಕ ಸಂಘದ ಆಡಳಿತ ಮಂಡಳಿಯು ಕಾಂಗ್ರೆಸ್ ತೆಕ್ಕೆಯಲ್ಲಿತ್ತು. ಇದೀಗ ಸಮಬಲದ ಗೆಲುವಿನ ಮೂಲಕ ಪಕ್ಷೇತರ ಅಭ್ಯರ್ಥಿಯಾಗಿರುವ ಸುರೇಶ್ ಅಡಿಗ ಕಿಂಗ್ ಮೇಕರ್ ಆಗಿ ಹೊರಹೊಮ್ಮಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಅವರು ಮುಂದಿನ ದಿನಗಳಲ್ಲಿ ನಡೆಯುವ ವಿದ್ಯಾಮಾನವನ್ನು ಅನುಸರಿಸಿ ನಿರ್ಧಾರ ಪ್ರಕಟಿಸುವುದಾಗಿ ತಿಳಿಸಿದ್ದಾರೆ.
ಇತ್ತ ಹಿಂದಿನ ಆಡಳಿತ ಮಂಡಳಿಯ ಅಧ್ಯಕ್ಷರಾಗಿ ಸತತ ಐದನೇ ಬಾರಿ ಆಯ್ಕೆಯಾಗಿರುವ ಶ್ರೀಧರ್ ಪಿಎಸ್ ಪ್ರತಿಕ್ರಿಯಿಸಿ ಮುಂದಿನ ಯಾವುದೇ ಬೆಂಬಲಿತ ಪಕ್ಷಗಳ ಸದಸ್ಯರ ಆಡಳಿತ ಮಂಡಳಿಗೆ ಸಂಪೂರ್ಣ ಸಹಕಾರ ನೀಡುತ್ತೇನೆ. ಹಿಂದೆ ಕಟ್ಟಿ ಬೆಳೆಸಿದ ಈ ಸಹಕಾರಿ ಸಂಸ್ಥೆಯ ಅಭಿವೃದ್ಧಿಯೇ ನಮ್ಮೆಲ್ಲರ ಗುರಿಯಾಗಲಿದೆ ಎಂದರು.
ಮತ ಎಣಿಕೆ ಸಂದರ್ಭ ಹಾಜರಿದ್ದ ಕುಂದಾಪುರ ಶಾಸಕ ಕಿರಣ್ ಕುಮಾರ್ ಕೊಡ್ಗಿ ಮಾತನಾಡಿ, ನಮ್ಮ ಸದಸ್ಯರ ಒಗ್ಗಟ್ಟಿಗೆ ಸಂದ ಜಯವಾಗಿದೆ ಎಂದು ಪ್ರತಿಕ್ರಿಯಿಸಿದರು.
ಭಾನುವಾರದ ಚುನಾವಣೆಯ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದ ಬಿಜೆಪಿ ಬೆಂಬಲಿತರು ಶನಿವಾರ ನಡೆಸಿದ ಪ್ರತಿಭಟನೆ ಸೊಸೈಟಿ ಮತದಾರರನ್ನು ತಲುಪುವಲ್ಲಿ ಯಶಸ್ವಿಯಾಗಿರುವುದೇ ಬಿಜೆಪಿ ಕಾಂಗ್ರೆಸ್ ಸಮಬಲಕ್ಕೆ ಕಾರಣ ಎಂದು ವಿಶ್ಲೇಷಿಸಲಾಗುತ್ತಿದೆ.