ಕುಂದಾಪುರ ಮಿರರ್ ಸುದ್ದಿ…
ಕೋಟ: : ಕಲಿಯುಗದಲ್ಲಿ ಭಗವಂತನನ್ನು ಒಲಿಸಿಕೊಳ್ಳಲು ಅತಿ ಸುಲಭ ಮಾರ್ಗ ಭಜನೆ. ಮಹಾ ಭಜಕ, ಪರಮ ಭಾಗವತ ಎಂದು ಇತಿಹಾಸ ಕೊಂಡಾಡುವ ಪ್ರಹ್ಲಾದನನ್ನು ಉದ್ದರಿಸಲೆಂದೇ ಅವತರಿಸಿದವ ನರಸಿಂಹ. ಹೀಗೆ ಭಜನೆಗೂ ನರಸಿಂಹನಿಗೂ ಅವಿನಾಭಾವ ಸಂಬಂಧವಿದೆ. ಅಂತಹ ನರಸಿಂಹನನ್ನೇ ಗುರುವಾಗಿ ಸ್ವೀಕರಿಸಿರುವ ಕ್ಷೇತ್ರ ಸಾಲಿಗ್ರಾಮದಲ್ಲಿ ಭಜನೋತ್ಸವ ನಡೆಯುತ್ತಿರುವುದು ಅತ್ಯಂತ ಪ್ರಸ್ತುತ ಎಂದು ಖ್ಯಾತ ಯೋಗಗುರು, ಚಿಂತಕ ವಿದ್ವಾನ್ ಡಾ. ವಿಜಯ ಮಂಜರ್ ಹೇಳಿದರು.
ಕೂಟ ಮಹಾಜಗತ್ತು ಸಾಲಿಗ್ರಾಮ ಕೇಂದ್ರ ಮತ್ತು ಅಂಗ ಸಂಸ್ಥೆಗಳ ಸಹಯೋಗದಲ್ಲಿ ಸಾಲಿಗ್ರಾಮದ ಶ್ರೀ ಗುರು ನರಸಿಂಹ ದೇವಳದ ಆಶ್ರಯದಲ್ಲಿ ಮಹಿಳಾ ವೇದಿಕೆಯವರು ದೇವಳದಲ್ಲಿ ಆಯೋಜಿಸಿದ ಅಧಿಕ ಶ್ರಾವಣ ಮಾಸದ ವಿಶೇಷ ಕಾರ್ಯಕ್ರಮ “ಶ್ರಾವಣ ಸಿರಿ” ಭಜನೋತ್ಸವಕ್ಕೆ ದೀಪ ಬೆಳಗುವುದರ ಮೂಲಕ ಚಾಲನೆ ನೀಡಿ ಅವರು ಮಾತನಾಡಿದರು.
ಶ್ರಾವಣ ಮಾಸ ಶ್ರೇಷ್ಠವಾದುದು. ಅಧಿಕ ಶ್ರಾವಣ ಇನ್ನೂ ಶ್ರೇಷ್ಠ. ಈ ಅಧಿಕ ಶ್ರಾವಣದಲ್ಲಿ ಭಜನೆಯನ್ನು ಶ್ರವಣ ಮತ್ತು ಗಾಯನ ಮಾಡುವುದು ತುಂಬಾ ಪುಣ್ಯಕರ ಎಂಬುದು ಶಾಸ್ತ್ರ
ವಾಕ್ಯ ಎಂದು ಬಣ್ಣಿಸಿದ ಅವರು, ಧಾರ್ಮಿಕ ಕಾರ್ಯಕ್ರಮಗಳನ್ನು ಮುಕ್ತ ಮನದಿಂದ ಸ್ವಾಗತಿಸಿ ಸಹಕರಿಸುವ ದೇವಳದ ಆಡಳಿತ ಮಂಡಳಿಯನ್ನು ಶ್ಲಾಘಿಸಿದರು.
ದೇವಳ ಆಡಳಿತ ಮಂಡಳಿ ಅಧ್ಯಕ್ಷ ಡಾ. ಕೆ. ಎಸ್. ಕಾರಂತ ಶುಭ ಹಾರೈಸಿ, ಶಾಸ್ತ್ರಗಳು ಹೇಳುವಂತೆ ಒಳ್ಳೆಯದನ್ನೇ ಕೇಳಿ, ಕಂಡು, ಆಚರಿಸಲು ಮತ್ತು ದೇವರು ಮೆಚ್ಚುವಂತೆ ನಮ್ಮ ಆಯುಷ್ಯ ಕಳೆಯಲು ಭಜನೆ ಸೂಕ್ತ ಮಾರ್ಗ ಎಂದು ವಿವರಿಸಿ, ಭಜನೆ ಇತ್ಯಾದಿ ಎಲ್ಲಾ ಒಳ್ಳೆಯ ಧಾರ್ಮಿಕ ಕಾರ್ಯಕ್ರಮಗಳಿಗೂ ದೇವಳ ಸಮಿತಿ ಸದಾ ಸಹಕಾರ ನೀಡುತ್ತದೆ ಎಂದು ಹೇಳಿದರು.
ಕೂಟ ಮಹಾಜಗತ್ತು ಕೇಂದ್ರ ಸಂಸ್ಥೆಯ ಅಧ್ಯಕ್ಷ ಎಚ್. ಸತೀಶ ಹಂದೆ, ಸಾಲಿಗ್ರಾಮ ಅಂಗಸಂಸ್ಥೆಯ ಅಧ್ಯಕ್ಷ ಶ್ರೀಪತಿ ಅಧಿಕಾರಿ, ಬ್ರಾಹ್ಮಣ ಮಹಾಸಭಾದ ಸಾಲಿಗ್ರಾಮ ವಲಯಾಧ್ಯಕ್ಷ ಶಿವರಾಮ ಉಡುಪ, ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಉಪಾಧ್ಯಕ್ಷೆ ರೂಪಾ ಶಾಸ್ತ್ರಿ, ಸಂಚಾಲಕಿ ಶಾಂತಾ ಗಣೇಶ್, ಅಂಗ ಸಂಸ್ಥೆಯ ಜೊತೆ ಕಾರ್ಯದರ್ಶಿ ಸುರೇಶ್ ತುಂಗ, ಪಟ್ಟಾಭಿರಾಮ ಸೋಮಯಾಜಿ, ರಾಜಾರಾಮ ಐತಾಳ, ಮಂಜುನಾಥ ಉಪಾಧ್ಯ, ಮಹಿಳಾ ವೇದಿಕೆ ಕಾರ್ಯದರ್ಶಿ ಶಿವಪ್ರಭಾ ಅಲ್ಸೆ ಮೊದಲಾದವರು ಉಪಸ್ಥಿತರಿದ್ದರು.
ಮಹಿಳಾ ವೇದಿಕೆ ಅಧ್ಯಕ್ಷೆ ಯಶೋದಾ ಸಿ. ಹೊಳ್ಳ ಸ್ವಾಗತಿಸಿದರು. ಸುಮಂಗಲಿ ಕಾರ್ಯಕ್ರಮ ನಿರ್ವಹಿಸಿದರು.
ನಂತರ ನಡೆದ ಶ್ರಾವಣ ಶ್ರೀ ಭಜನೋತ್ಸವದಲ್ಲಿ ಖ್ಯಾತ ಗಾಯಕರಾದ ಸಂಗೀತಾ ಬಾಲಚಂದ್ರ, ಎ. ಎಂ. ಮೋಹನ್ ರಾವ್, ಮಾಲಾತಿ ಜೆ. ಅಡಿಗ, ವಿದ್ವಾನ್ ಶಂಭು ಭಟ್, ಲಲಿತಾ ಶ್ರೀರಾಮ್, ಪಲ್ಲವಿ ತುಂಗ, ಪವಿತ್ರ ವಿ. ಮಯ್ಯ ಹಾಗೂ ವಿವಿಧ ಭಜನಾ ತಂಡಗಳವರು ಸುಶ್ರಾವ್ಯ ಭಜನೆಗಳನ್ನು ಹಾಡಿದರು.
ಪಕ್ಕವಾದ್ಯದಲ್ಲಿ ಸುರೇಶ್ ಅಡಿಗ (ಹಾರ್ಮೋನಿಯಂ), ರವಿಕುಮಾರ್ (ಪಿಟೀಲು), ದಯಾನಂದ ವಾರಂಬಳ್ಳಿ (ತಬಲಾ)ಮತ್ತು ದೇವದಾಸ್ ರಾವ್ (ಮದ್ದಳೆ) ಸಹಕರಿಸಿದರು.