ವಿಧಾನ ಪರೀಷತ್ ಸದಸ್ಯರಾದ ಎಸ್.ಎಲ್ ಭೋಜೆಗೌಡರಿಂದ ಧ್ವಜಾರೋಹಣ
ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ :ಯಡಾಡಿ-ಮತ್ಯಾಡಿಯ ಲಿಟ್ಲ್ ಸ್ಟಾರ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ 77ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಸಡಗರ -ಸಂಭ್ರಮದಿಂದ ಆಚರಿಸಲಾಯಿತು. ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಕರ್ನಾಟಕ ರಾಜ್ಯ ವಿಧಾನ ಪರಿಷತ್ತಿನ ಸದಸ್ಯರಾದ ಎಸ್.ಎಲ್ ಭೋಜೆಗೌಡರು ಆಗಮಿಸಿದ್ದು, ವಿಶೇಷ ಪಥ ಸಂಚಲನದ ಮೂಲಕ ವೇದಿಕೆಗೆ ಶಾಲಾ ಆಡಳಿತ ಮಂಡಳಿಯ ಸಹಭಾಗಿತ್ವದೊಂದಿಗೆ ಕರೆ ತರಲಾಯಿತು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಎಸ್. ಎಲ್ ಭೋಜೇಗೌಡರು ಧ್ವಜಾರೋಹಣಗೈದು ವಿದ್ಯಾರ್ಥಿಗಳನ್ನು ಉದ್ದೇಶಿಸಿ “ಸ್ವಾತಂತ್ರ್ಯ ದಿನಾಚರಣೆಯ ಮಹತ್ವ, ಮುಂದಿನ ಭವ್ಯ ಭಾರತದ ಪ್ರಜೆಗಳಾಗುವ ವಿದ್ಯಾರ್ಥಿಗಳಿಗೆ ದೇಶಕಟ್ಟುವ ಕಾಯಕದ ಕುರಿತು ಅರಿವು ಮೂಡಿಸಿದರು. ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಶ್ರೇಷ್ಠ ನಾಯಕರ ಗುಣಗಾನ ಮಾಡಿ, ಭಾರತೀಯರಾದ ನಾವೆಲ್ಲರೂ ಒಂದೇ, ನಾವೆಲ್ಲರೂ ಈ ದೇಶದ ಸಂವಿಧಾನದ ಅಡಿಯಲ್ಲಿ ಸಮಾನರೆಂದು ಭಾವಿಸಿ ಬಲಿಷ್ಠ ಭಾರತ ನಿರ್ಮಾಣ ಮಾಡೋಣ. ವಿದ್ಯಾರ್ಥಿಗಳು ಪ್ರತಿಯೊಂದು ರಾಷ್ಟ್ರೀಯ ಹಬ್ಬದಲ್ಲಿ ಪಾಲ್ಗೊಂಡು ರಾಷ್ಟ್ರ ಪ್ರೇಮ, ರಾಷ್ಟ್ರ ಭಕ್ತಿ, ಬೆಳೆಸಿಕೊಂಡು ಭಾರತದ ಸತ್ಪ್ರಜೆಯಾಗಿ ಬೆಳೆಯಬೇಕೆಂದು ಹೇಳುತ್ತಾ, ಕುವೆಂಪುರವರ ವಿಶ್ವ ಮಾನವ ಗೀತೆಯ ಸಂದೇಶವನ್ನು ಸಾರಿದರು. ‘ವಿಜಯಿ ವಿಶ್ವತಿ ರಂಗಾ ಪ್ಯಾರ ‘ಎಂಬ ಹಾಡಿಗೆ ನೆರೆದ 1500 ಕ್ಕೂ ಹೆಚ್ಚು ವಿದ್ಯಾರ್ಥಿಗಳು ರಾಷ್ಟ್ರ ಧ್ವಜವನ್ನು ಕೈಯಲ್ಲಿ ಹಿಡಿದು ಸಂಭ್ರಮಿಸಿದರು.
ಈ ಸ್ವಾತಂತ್ರ್ಯ ಸಂಭ್ರಮದ ವೇದಿಕೆಯಲ್ಲಿ 2022-23ನೇ ಸಾಲಿನ ಪ್ರೌಢ ಶಾಲೆ ಹಾಗೂ ಎಕ್ಸಲೆಂಟ್ ಪದವಿ ಪೂರ್ವ ಕಾಲೇಜಿನ ಶೈಕ್ಷಣಿಕವಾಗಿ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನವನ್ನು ನೀಡಿ ಸನ್ಮಾನಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷರಾಗಿ ಸುಜ್ಞಾನ್ ಎಜುಕೇಶನಲ್ ಟ್ರಷ್ಟ್ನ ಅಧ್ಯಕ್ಷರಾದ ಡಾ. ರಮೇಶ್ ಶೆಟ್ಟಿಯವರು ವಹಿಸಿದ್ದರು. ಸಂಸ್ಥೆಯ ಕಾರ್ಯದರ್ಶಿಯಾದ ಪ್ರತಾಪ್ ಚಂದ್ರ ಶೆಟ್ಟಿ, ಖಜಾಂಚಿಯಾದ ಭರತ್ ಶೆಟ್ಟಿ, ಹಾಗೂ ಶಾಲೆಯ ಮುಖ್ಯೋಪಾಧ್ಯಾಯರಾದ ಅಗಷ್ಟಿನ್ ಕೆ. ಎ, ಇತರ ಗಣ್ಯರು ಶಿಕ್ಷಕ ವೃಂದದವರು ಉಪಸ್ಥಿತರಿದ್ದರು.
ಸ್ವಾತಂತ್ರ್ಯ ಸಂಭ್ರಮದ ವಿಶೇಷ ಆಕರ್ಷಣೆಯಾಗಿ ಲಿಟ್ಲ್ ಸ್ಟಾರ್ ಆಂಗ್ಲ ಮಾಧ್ಯಮ ಶಾಲೆಯ ಚಿತ್ರ ಕಲಾ ಶಿಕ್ಷಕರಾದ ಗಿರೀಶ್ ಗಾಣಿಗ ಇವರು ನಿರ್ಮಿಸಿದ ಚಂದ್ರಯಾನ ಮತ್ತು ಭಾರತ ಭೂಪಟ ಮಾದರಿಗಳು ನೋಡುಗರ ಗಮನ ಸೆಳೆದವು. ಆಂಗ್ಲ ಭಾಷಾ ಉಪನ್ಯಾಸಕರಾದ ಪ್ರಕಾಶ್ ಆಚಾರ್ಯ ಕಾರ್ಯಕ್ರಮವನ್ನು ನಿರೂಪಿಸಿ, ವಂದಿಸಿದರು. ಶಾಲೆಯ ಶಿಕ್ಷಕ-ಶಿಕ್ಷಕೇತರ ವೃಂದದವರು, ವಿದ್ಯಾರ್ಥಿಗಳು, ಪೋಷಕರು ಉಪಸ್ಥಿತರಿದ್ದರು.