ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ: ನಿಮ್ಮನ್ನು ನೀವು ನಂಬಿ, ನಿಮ್ಮ ಸಾಮರ್ಥ್ಯವನ್ನು ನಂಬಿ, ಅದು ನಿಮ್ಮನ್ನು ಯಶಸ್ಸಿನತ್ತ ಸಾಗಿಸುತ್ತದೆ. ನಿಮ್ಮಿಂದ ಅಸಾಧ್ಯ ಎಂಬುದು ಯಾವುದು ಇಲ್ಲ. ಸಂಪರ್ಕವನ್ನು ಬೆಳೆಸಿ, ಸಾಮರ್ಥ್ಯವನ್ನು ಬಳಸಿಕೊಂಡು ಬದುಕನ್ನು ಕಟ್ಟಿಕೊಳ್ಳಿ. ಹಾಗೆ ಸಹಾಯ ಪಡೆದ ಸಂಸ್ಥೆಯನ್ನು ಸ್ಮರಿಸಿ ಎಂದು ಯುನಿವರ್ಸಲ್ ಗ್ರೂಫ್ ಆಫ್ ಇನ್‌ಸ್ಟಿಟ್ಯೂಶನ್ಸ್‌ನ ಅಧ್ಯಕ್ಷರಾದ ಆರ್.ಉಪೇಂದ್ರ ಶೆಟ್ಟಿಯವರು ಕುಂದಾಪುರದ ಡಾ. ಬಿ.ಬಿ. ಹೆಗ್ಡೆ ಕಾಲೇಜಿನಲ್ಲಿ ವಾರ್ಷಿಕೋತ್ಸವ ಮುಖ್ಯ ಅತಿಥಿ ನೆಲೆಯಲ್ಲಿ ಮಾತನಾಡಿದರು.
ಡಾ. ಬಿ.ಬಿ. ಹೆಗ್ಡೆ ಕಾಲೇಜಿನ ವಾರ್ಷಿಕೋತ್ಸವದ ಅಧ್ಯಕ್ಷತೆಯನ್ನು ವಹಿಸಿಕೊಂಡಿದ್ದ ಕುಂದಾಪುರ ಎಜ್ಯುಕೇಶನ್ ಸೊಸೈಟಿಯ ಅಧ್ಯಕ್ಷರು, ಬೈಂದೂರು ಶಾಸಕರಾದ ಬಿ.ಎಮ್. ಸುಕುಮಾರ ಶೆಟ್ಟಿ ಮಾತನಾಡಿ, ಬದುಕನ್ನು ಕಟ್ಟಿಕೊಳ್ಳುವಲ್ಲಿ ವಿದ್ಯೆಯ ಜೊತೆಜೊತೆಗೆ, ಸಮಾಜದ ಶಿಕ್ಷಣದ ಮಹತ್ವವನ್ನು ತಮ್ಮ ಅನುಭವದೊಂದಿಗೆ ಹಂಚಿಕೊಂಡರು.
ಮುಖ್ಯ ಅತಿಥಿಗಳಾಗಿ ಡಾ. ಸಂಪತ್ ಕುಮಾರ್ ಹೆಚ್.ಸಿ., ಉಳ್ತೂರು ಮೋಹನದಾಸ ಶೆಟ್ಟಿ, ಬಿ.ಎಸ್. ಸುರೇಶ ಶೆಟ್ಟಿ, ವಸಂತ್ ಗಿಳಿಯಾರ್ ಮತ್ತು ವಿದ್ಯಾರ್ಥಿ ಕ್ಷೇಮಪಾಲನಾ ಅಧಿಕಾರಿ ಶಿವರಾಜ್ ಸಿ. ಅರೆಹೊಳೆ, ವಿದ್ಯಾರ್ಥಿ ಕ್ಷೇಮಪಾಲನ ಕಾರ್ಯದರ್ಶಿ ಸಂಪತ್ ಶೆಟ್ಟಿ ಉಪಸ್ಥಿತರಿದ್ದರು.
ಶೈಕ್ಷಣಿಕ, ಸಾಂಸ್ಕೃತಿಕ, ಕ್ರೀಡೆ, ಹೀಗೆ ಸರ್ವಾಂಗೀಣ ಸಾಧನೆಗೆ ಕೊಡಮಾಡುವ ಬಿಎಂಎಸ್ ಗೋಲ್ಡ್ ಮೆಡಲ್ ಮತ್ತು ಮಂಗಳೂರು ವಿಶ್ವವಿದ್ಯಾನಿಲಯ ಕೊಡಮಾಡುವ ಐಕ್ಯೂಎಸಿ ಗೋಲ್ಡ್ ಮೆಡಲ್ ಸೇರಿದಂತೆ ವಿವಿಧ ಪ್ರತಿಭಾವಂತರನ್ನು ಪುರಸ್ಕರಿಸಲಾಯಿತು.
ಪ್ರಾಂಶುಪಾಲರಾದ ಪ್ರೊ .ಕೆ. ಉಮೇಶ್ ಶೆಟ್ಟಿ ಕೊತ್ತಾಡಿ ವಾರ್ಷಿಕ ವರದಿ ಸಲ್ಲಿಸಿದರು. ಉಪ ಪ್ರಾಂಶುಪಾಲರಾದ ಚೇತನ್ ಶೆಟ್ಟಿ ಕೋವಾಡಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಬೋಧಕ ಮತ್ತು ಬೋಧಕೇತರರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ವಾಣಿಜ್ಯಶಾಸ್ತ್ರ ಉಪನ್ಯಾಸಕಿ ಅವಿತಾ ಕೋರೆಯಾ ಅತಿಥಿಗಳನ್ನು ಸಭೆಗೆ ಪರಿಚಯಿಸಿದರು. ಕನ್ನಡ ಉಪನ್ಯಾಸಕಿ ಪ್ರವೀಣಾ ಪೂಜಾರಿ ವಂದಿಸಿ, ವಾಣಿಜ್ಯ ಶಾಸ್ತ್ರ ಉಪನ್ಯಾಸಕಿ ಆಶಾ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.
ಸಭಾ ಕಾರ್ಯಕ್ರಮದ ನಂತರದಲ್ಲಿ ವಿದ್ಯಾರ್ಥಿಗಳಿಂದ ವೈವಿಧ್ಯಮಯ ಮನೋರಂಜನಾ ಕಾರ್ಯಕ್ರಮ ಜರುಗಿತು.