ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ :200 ಭಕ್ತರಿಂದ ತಿರುಪತಿಗೆ ಪಾದಯಾತ್ರೆ – ಇದು 13ನೇ ವರ್ಷದ ಸಾಧನೆ
ಕುಂದಾಪುರ: ಮನಸ್ಸು ಮಾಡಿದರೆ ಹೆಲಿಕಾಪ್ಟರ್ ನಲ್ಲಿ ಒಂದೇ ದಿನದಲ್ಲಿ ತಿರುಪತಿಗೆ ಹೋಗಿ ವೆಂಕಟರಮಣನ ದರ್ಶನ ಮಾಡಿ ಬರಬಹುದು. ಆದರೆ ಅವರು ಹಾಗೇ ಮಾಡುತ್ತಿಲ್ಲ. ಕಳೆದ 13 ವರ್ಷಗಳಿಂದ ನಿರಂತರವಾಗಿ ಪಾದಯಾತ್ರೆಯ ಮೂಲಕ ತಿರುಪತಿ ದರ್ಶನ ಮಾಡಿಕೊಂಡು ಬರುವ ಉದ್ಯಮಿಯೊಬ್ಬರ ರೋಚಕ ಕತೆಯಿದು.
ಹೌದು. ಉಡುಪಿಯ ವೆಂಕಟೇಶ್ವರ ಸ್ವೀಟ್ಸ್ ನ ಮಾಲಕ ಪಿ.ಲಕ್ಷ್ಮೀನಾರಾಯಣ ರಾವ್ ದೃಢ ನಿರ್ಧಾರದ ಕತೆಯಿದು. ತಾನು ಹೇಗಾದರೂ ಹೋಗಬಹುದು ಆದರೆ ತನ್ನ ಜೊತೆಗೆ ಒಂದಿಷ್ಟು ಜನ ಭಕ್ತರನ್ನು ಕರೆದುಕೊಂಡು ಹೋಗಬೇಕು. ತಿರುಪತಿ ದರ್ಶನಕ್ಕೆ ಕಷ್ಟಪಟ್ಟು ಹೋದರೆ ಮಾತ್ರ ದರ್ಶನ ಸಂಪನ್ನವಾಗುತ್ತದೆ ಎಂದು ನಂಬಿದ ಪಿ.ಲಕ್ಷ್ಮೀನಾರಾಯಣ ರಾವ್, ಬರೋಬ್ಬರಿ 18 ದಿನಗಳ ಕಾಲ ಕಾಲ್ನಡಿಗೆಯಲ್ಲಿ ತನ್ನ ಜೊತೆಗಾರರೊಂದಿಗೆ ನಡೆದೇ ತಿರುಪತಿ ದರ್ಶನ ಮಾಡಿ ಬರುತ್ತಿದ್ದಾರೆ.
ಇದೀಗ 13ನೇ ವರ್ಷದ ಪಾದಯಾತ್ರೆ ಆರಂಭಗೊಂಡಿದ್ದು, ಈ ಬಾರಿ ಸುಮಾರು 200 ಜನ ಭಕ್ತರು ಪಿ.ಲಕ್ಷ್ಮೀನಾರಾಯಣ ರಾವ್ ಜೊತೆ ಪಾದಯಾತ್ರೆಯಲ್ಲಿ ಭಾಗವಹಿಸುತ್ತಿದ್ದಾರೆ. ಆಗಸ್ಟ್ 22ರಿಂದ( ಪ್ರತಿವರ್ಷದಂತೆ ನಾಗರಪಂಚಮಿಯ ಮರುದಿನ) ಆರಂಭಗೊಂಡಿರುವ ಪಾದಯಾತ್ರೆಯು 18 ದಿನಗಳ ಬಳಿಕ ಸೆಪ್ಟಂಬರ್ 7ರಂದು ತಿರುಪತಿ ತಲುಪಲಿದೆ. ಮೊದಲ ದಿನ ಲಕ್ಷ್ಮೀನಾರಾಯಣ್ ರಾವ್ ಮನೆಯಲ್ಲಿ ಅವರಿಂದ ಬಟ್ಟೆಗಳನ್ನು ಸ್ವೀಕರಿಸಿದ ಬಳಿಕ ಅಲ್ಲಿಂದ ಹೊರಟು ಹಿರಿಯಡಕ ನಾರಾಯಣಗುರು ಸಭಾಭವನದಲ್ಲಿ ಉಳಿದುಕೊಂಡು, ಒಂದೊಂದು ದಿನ ಒಂದೊಂದು ಸ್ಥಳದಲ್ಲಿ ಉಳಿದು ಹೊಸ್ಮಾರು, ಧರ್ಮಸ್ಥಳ, ಗುಂಡ್ಯ, ಸಕಲೇಶಪುರ, ಹಾಸನ, ಚೆನ್ನಾರಾಯಪಟ್ಟಣ, ಬೆಳ್ಳೂರು ಕ್ರಾಸ್, ಕುದೂರು, ಚಿಕ್ಕಬೆಲವಂಗಲ, ನಂದಿಗ್ರಾಮ, ಕೈವಾರ, ರಾಯಲ್ಪಡು ಶಾಲೆ, ಚಿಂತಪರ್ತಿ ಹಾಲ್, ಬಾಕ್ರಪೇಟೆ ಶಾಲೆ, ಶ್ರೀನಿವಾಸ ಮಂಗಾಪುರ, ಶ್ರೀನಿವಾಸ ಮಂಗಾಪುರ ದಿಂದ ತಿರುಪತಿ ತಲುಪಿ, ತಿರುಪತಿ ವೆಂಕಟೇಶ್ವರನ ದರ್ಶನ ಪಡೆಯಲಾಗುತ್ತದೆ. ವಿಶೇಷವೆಂದರೆ ಪಾದಯಾತ್ರೆಯಲ್ಲಿ ಭಾಗವಹಿಸುವ 200 ಭಕ್ತರಿಗೂ ಎಲ್ಲಾ ಖರ್ಚು ಊಟ, ತಿಂಡಿ, ಕುಡಿಯುವ ನೀರಿನ ವ್ಯವಸ್ಥೆ, ಉಳಿಯುವ ವ್ಯವಸ್ಥೆ, ವೆಂಕಟೇಶ್ವರ ಸ್ವೀಟ್ಸ್ ವತಿಯಿಂದಲೇ ನಡೆಯುತ್ತದೆ.
ಒಟ್ಟಿನಲ್ಲಿ ತಿರುಪತಿ ದರ್ಶನಕ್ಕೆ ಉಚಿತ ಖರ್ಚುವೆಚ್ಚಗಳ ಮೂಲಕ ಪಾದಯಾತ್ರೆಯಲ್ಲಿ ನಡೆಯುವ ಮತ್ತು ಪಾದಯಾತ್ರೆಯ ನೇತೃತ್ವ ವಹಿಸಿದ ಉಡುಪಿಯ ವೆಂಕಟೇಶ್ವರ ಸ್ವೀಟ್ಸ್ ನ ಮಾಲಕ ಪಿ.ಲಕ್ಷ್ಮೀನಾರಾಯಣ ರಾವ್ ರವರಿಗೆ ಶುಭ ಹಾರೈಸೋಣ.