Video:
ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ: ರಾಷ್ಟ್ರೀಯ ಹಬ್ಬಗಳ ಆಚರಣೆ ಸಮಿತಿ, ತಾಲ್ಲೂಕು ಆಡಳಿತ ಹಾಗೂ ತಾಲ್ಲೂಕು ಪಂಚಾಯಿತಿ ಆಶ್ರಯದಲ್ಲಿ ನಡೆದ ಕುಂದಾಪುರ ತಾಲ್ಲೂಕು ಮಟ್ಟದ ಬ್ರಹ್ಮಶ್ರೀ ನಾರಾಯಣ ಗುರು ಅವರ 169ನೇ ಜಯಂತಿ ಕಾರ್ಯಕ್ರಮವು ತಾಲೂಕು ಕಚೇರಿ ಕೋರ್ಟ್ ಹಾಲ್ ನಲ್ಲಿ ಗುರುವಾರ ನಡೆಯಿತು. ಗಣ್ಯರು ನಾರಾಯಣ ಗುರುಗಳ ಭಾವಚಿತ್ರಕ್ಕೆ ಪುಷ್ಪಾರ್ಪಣೆಗೈದರು.
ಕುಂದಾಪುರ ಶಾಸಕ ಎ. ಕಿರಣ್ ಕುಮಾರ್ ಕೊಡ್ಗಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಈ ದೇಶ ಕಂಡ ಮಹಾನ್ ಸಮಾಜ ಸುಧಾರಕ ನಾರಾಯಣಗುರುಗಳು ನಮಗೆಲ್ಲ ಆದರ್ಶಪ್ರಾಯರಾಗಿದ್ದು ಅವರು ಹಾಕಿಕೊಟ್ಟ ದಾರಿಯಲ್ಲಿ ಸಾಗಬೇಕು ಎಂದು ಕರೆ ನೀಡಿದರು.
ತಾಲ್ಲೂಕು ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷ ಅಶೋಕ ಪೂಜಾರಿ ಬೀಜಾಡಿ ಮಾತನಾಡಿ, ಸಮಾಜದಲ್ಲಿ ಬೇರು ಬಿಟ್ಟಿದ್ದ ಅಸ್ಪೃಶ್ಯತೆ, ಶೋಷಣೆ, ಮೂಢನಂಬಿಕೆಯಂತಹ ಅನಿಷ್ಠ ಪದ್ಧತಿಯ ವಿರುದ್ಧ ಸಾಮಾಜಿಕ ಕ್ರಾಂತಿ ಮಾಡಿದ್ದ ಬ್ರಹ್ಮಶ್ರೀ ನಾರಾಯಣ ಗುರುಗಳು ಸಮಾಜದ ಅನೇಕ ತೊಡಕುಗಳನ್ನು ಹೋಗಲಾಡಿಸಿ, ಸಮಾಜದ ಸುಧಾರಣೆಗಾಗಿ ಶ್ರಮಿಸಿದ ದಾರ್ಶನಿಕರು ಎಂದರು.
ಕುಂದಾಪುರ ಉಪ ವಿಭಾಗದ ಸಹಾಯಕ ಆಯುಕ್ತರಾದ ರಶ್ಮಿ, ತಹಶಿಲ್ದಾರರ ಶೋಭಾಲಕ್ಷ್ಮೀ, ಕಾರ್ಯದರ್ಶಿ ಗಣೇಶ್ ವಿಠ್ಠಲವಾಡಿ, ಯುವಕ ಮಂಡಲದ ಅಧ್ಯಕ್ಷ ಯೋಗೀಶ್ ಕೋಡಿ, ಗುಣರತ್ನ, ಸುಮನಾ ಮೊದಲಾದವರು ಉಪಸ್ಥಿತರಿದ್ದರು. ಉಪ ತಹಶೀಲ್ದಾರ್ ವಿನಯ್ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.