ಕುಂದಾಪುರ ಮಿರರ್ ಸುದ್ದಿ…
ಬೈಂದೂರು: ದೇಶದ ಪ್ರತಿಯೋರ್ವರಿಗೂ ಕೊರೊನಾ ಲಸಿಕೆ ಸಿಗಬೇಕು ಎನ್ನುವ ಸಲುವಾಗಿ ಕೊರೊನಾ ವಾರಿಯರ್ ನಿರಂತರವಾಗಿ ಶ್ರಮಿಸುತ್ತಿದ್ದಾರೆ. ಇದಕ್ಕೆ ನಿದರ್ಶನ ಎನ್ನುವಂತೆ ಬೈಂದೂರು ತಾಲೂಕು ಮರವಂತೆ ಪ್ರಾಥಮಿಕ ಆರೋಗ್ಯ ಕೇಂದ್ರದ ಇಬ್ಬರು ನರ್ಸ್‌ಗಳು ಹಾಗೂ ಇಬ್ಬರು ಆಶಾ ಕಾರ್ಯಕರ್ತೆಯರು ನಾವುಂದ ಗ್ರಾಮದಲ್ಲಿರುವ ಕುದ್ರುವಿಗೆ ದೋಣಿ ಮೂಲಕ ನದಿ ದಾಟಿ ಲಸಿಕೆ ನೀಡಿದ್ದಾರೆ.
ಸೌಪರ್ಣಿಕಾ ನದಿಯಾಚೆ ಇರುವ ನಾವುಂದ ಕುದ್ರುವಿನಲ್ಲಿ ಏಳು ಕುಟುಂಬಗಳು ನೆಲಸಿದ್ದು, 35ಕ್ಕೂ ಅಧಿಕ ಜನರಿದ್ದಾರೆ. ಇವರಲ್ಲಿ ಹೆಚ್ಚಿನ ಮಂದಿ ಪ್ರಥಮ ಹಾಗೂ ದ್ವಿತೀಯ ಲಸಿಕೆ ಪಡೆದುಕೊಂಡಿದ್ದಾರೆ. ಆದರೆ, 3-4 ಮಂದಿ ವೃದ್ಧರು ನಡೆದುಕೊಂಡು ಬರಲು ಅಶಕ್ತರಾಗಿದ್ದು, ದೋಣಿಯಲ್ಲಿ ಬರಲು ಸಾಧ್ಯವಿರಲಿಲ್ಲ. ಹಾಗಾಗಿ ಅವರಿದ್ದ ಸ್ಥಳಕ್ಕೆ ಪ್ರಾಥಮಿಕ ಆರೋಗ್ಯ ಕೇಂದ್ರದ ನರ್ಸ್‌ಗಳಾದ ರಾಜೇಶ್ವರಿ, ಮಿತ್ರಾ ಹಾಗೂ ಆಶಾ ಕಾರ್ಯಕರ್ತೆಯರಾದ ದೇವಕಿ, ಸಾಕು ಅವರು ರಮೇಶ್ ಕಾರಂತ ಎನ್ನುವವರ ದೋಣಿಯಲ್ಲಿ ಸಾಗಿ ಲಸಿಕೆ ನೀಡಿದ್ದಾರೆ.
ತಂಡವು ನಾವುಂದ ಗ್ರಾ. ಪಂ ವ್ಯಾಪ್ತಿಯಲ್ಲಿರುವ 21 ಮಂದಿಯ ಮನೆಗೆ ತೆರಳಿ ಲಸಿಕೆ ನೀಡಿದ್ದು ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.