ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ: ಒಂದು ಕಾರನ್ನು ಓವರ್ ಟೇಕ್ ಮಾಡುವ ಭರದಲ್ಲಿ ಇನ್ನೊಂದು ಕಾರು ರಿಕ್ಷಾಕ್ಕೆ ಡಿಕ್ಕಿ ಹೊಡೆದ ಪರಿಣಾಮ ರಿಕ್ಷಾ ಎದುರಿನ ಕಾರಿಗೆ ಡಿಕ್ಕಿಯಾಗಿ ರಿಕ್ಷಾದಲ್ಲಿದ್ದ ಯುವತಿ ಸಾವನ್ನಪ್ಪಿದ್ದಾರೆ. ಇಬ್ಬರು ಯುವಕರು ಗಂಭೀರ ಗಾಯಗೊಂಡಿದ್ದಾರೆ.
ಕುಂದಾಪುರ ತಾಲೂಕು ಕಂದಾವರ ಗ್ರಾಮದ ಮೂಡ್ಲಕಟ್ಟೆಯ ಕಂಬಳಗದ್ದೆ ಜಿ ಪಿ ಶೆಟ್ಟಿರವರ ಮನೆಯ ಎದುರಿನ ರಾಜ್ಯ ಹೆದ್ದಾರಿ 52ರಲ್ಲಿ ಶುಕ್ರವಾರ ಸಂಜೆ ಘಟನೆ ನಡೆದಿದ್ದು ಅಂಪಾರು ಗ್ರಾಮದ ನಿವಾಸಿ ಅಂಬಿಕಾ(22) ಸಾವನ್ನಪ್ಪಿದರೆ ಆಕೆಯ ಸಹೋದರ ಶಾಂತರಾಮ ಹಾಗೂ ಸಂಬಂಧಿ ನಯನಕುಮಾರ್ ಗಂಭೀರ ಗಾಯಗೊಂಡವರು.
ಅಂಬಿಕಾ ಅವರು ಸಂಬಂಧಿಕರ ಮನೆಯಾದ ಕುಂದಾಪುರದ ವಡೇರಹೋಬಳಿಯಿಂದ ಸಹೋದರ ಶಾಂತಾರಾಮ ಹಾಗೂ ನಯನಕುಮಾರ್ ಜೊತೆಗೆ ಆಟೋದಲ್ಲಿ ತನ್ನ ಮನೆಯಾದ ಅಂಪಾರಿಗೆ ಪ್ರಯಾಣಿಸುತ್ತಿದ್ದರು.
ಮೂಡ್ಲಕಟ್ಟೆ ಸಮೀಪ ಬರುತ್ತಿದ್ದಂತೆ ಬಸ್ರೂರು ಕಡೆಯಿಯಿಂದ ಬರುತ್ತಿದ್ದ ವಸಂತ ಪೂಜಾರಿ ಎಂಬಾತ ಎದುರಿನಿಂದ ಹೋಗುತ್ತಿದ್ದ ಇನ್ನೊಂದು ಕಾರನ್ನು ಓವರ್ ಟೇಕ್ ಮಾಡುತ್ತಿದ್ದ ವೇಳೆ ಎದುರಿನಿಂದ ಆಟೋರಿಕ್ಷಾಕ್ಕೆ ಡಿಕ್ಕಿ ಹೊಡೆದಿದೆ. ಢಕ್ಕಿ ರಭಸಕ್ಕೆ ಆಟೋ ರಿಕ್ಷಾ ಎದುರಿದ್ದ ಕಾರಿನ ಮೇಲೆ ಪಲ್ಟಿಯಾಗಿದೆ. ಪರಿಣಾಮ ರಿಕ್ಷಾದಲ್ಲಿದ್ದ ಅಂಬಿಕಾ ಗಂಭೀರ ಗಾಯಗೊಂಡು ಸಾವನ್ನಪ್ಪಿದ್ದಾರೆ. ರಿಕ್ಷಾದಲ್ಲಿದ್ದ ಶಾಂತಾರಾಮ್ ಹಾಗೂ ನಯನ್ ಕುಮಾರ್ ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ. ಕುಂದಾಪುರ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.