ವಿಶ್ವ ಪೌಷ್ಠಿಕ ಸಪ್ತಾಹ ಮಾಸಾಚರಣೆ – ಕಾನೂನು ಮಾಹಿತಿ ಕಾರ್‍ಯಕ್ರಮ ಹಾಗೂ ಪೋಷಣ್ ಅಭಿಯಾನ
ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ: ನಮ್ಮ ಪೂರ್ವಜರು, ಹಿರಿಯರಿಗೆ ಪೌಷ್ಠಿಕತೆ ಬಗ್ಗೆ ಅಗಾಧವಾದ ಜ್ಞಾನವಿತ್ತು. ಅದಕ್ಕೆ ಅವರ ಜೀವಿತಾವಧಿಯೇ ಸಾಕ್ಷಿ. ಆಗಿನ ಸರಾಸರಿ ಬದುಕಿನ ಅವಧಿ ೮೦-೯೦ ವರ್ಷ ಆಗಿತ್ತು. ಆದರೆ ಈಗ ೪೫-೫೦ ವರ್ಷಕ್ಕೆ ಆ ವಯಸ್ಸಿನವರ ಅನುಭವ ಆಗುತ್ತಿದೆ. ಇದಕ್ಕೆ ನಾವು ತಿನ್ನುವ ಆಹಾರ, ಇನ್ನಿತರ ಅಂಶಗಳು ಕಾರಣ. ಅಪೌಷ್ಠಿಕತೆ ಅನ್ನುವುದು ಗಂಭೀರ ಸಂಗತಿ. ಸರಕಾರ ಈ ಬಗ್ಗೆ ಕ್ರಮಕೈಗೊಳ್ಳುತ್ತಿದೆ. ನಮ್ಮ ಜವಾಬ್ದಾರಿಯೂ ಇದೆ. ಈ ಬಗ್ಗೆ ನಾವೆಲ್ಲರೂ ಅರಿವು ಮೂಡಿಸಬೇಕಾಗಿದೆ. ಅಪೌಷ್ಠಿಕತೆ ಹೋಗಲಾಡಿಸಲು ಅರಿವು ಅಗತ್ಯ. ಆಹಾರದ ಸಮತೋಲನ ಬಹಳ ಮುಖ್ಯ ಎಂದು ಕುಂದಾಪುರದ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಅಬ್ದುಲ್ ರಹೀಂ ಹುಸೇನ್ ಶೇಖ್ ಹೇಳಿದರು.
ಅವರು ಶನಿವಾರ ಕುಂದಾಪುರದ ತಾ.ಪಂ. ಸಭಾಂಗಣದಲ್ಲಿ ತಾಲೂಕು ಕಾನೂನು ಸೇವೆಗಳ ಸಮಿತಿ, ವಕೀಲರ ಸಂಘ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಹಾಗೂ ತಾಲೂಕು ಆಡಳಿತ ಕುಂದಾಪುರದ ಸಂಯುಕ್ತ ಆಶ್ರಯದಲ್ಲಿ ವಿಶ್ವ ಪೌಷ್ಠಿಕ ಸಪ್ತಾಹ ಮಾಸಾಚರಣೆ ಅಂಗವಾಗಿ ಆಯೋಜಿಸಿದ ಕಾನೂನು ಮಾಹಿತಿ ಕಾರ್‍ಯಕ್ರಮ ಹಾಗೂ ಪೋಷಣ್ ಅಭಿಯಾನವನ್ನು ಉದ್ಘಾಟಿಸಿ ಮಾತನಾಡಿದರು.
ಇತ್ತೀಚಿನ ದಿನಗಳಲ್ಲಿ ಆತ್ಮಹತ್ಯೆ ಪ್ರವೃತ್ತಿ ಹೆಚ್ಚುತ್ತಿದ್ದು, ಇದು ಆತಂಕಕಾರಿ ಬೆಳವಣಿಗೆ. ಇದಕ್ಕೆ ಅಪೌಷ್ಠಿಕತೆಯು ಸಹ ಒಂದು ಕಾರಣ ಆಗಿರಬಹುದು. ಮಾನಸಿಕ ಸದೃಢತೆಯು ಬಹಳ ಮುಖ್ಯ. ಆತ್ಮಹತ್ಯೆಯಂತಹ ಪ್ರಕರಣ ಕಡಿಮೆಯಾಗುವ ನಿಟ್ಟಿನಲ್ಲಿ ನಾವೆಲ್ಲ ಕಾರ್‍ಯಪ್ರವೃತ್ತರಾಗಬೇಕು ಎಂದವರು ಕರೆ ನೀಡಿದರು.
ತಾಲೂಕು ಕಾನೂನು ಸೇವೆಗಳ ಸಮಿತಿ ಅಧ್ಯಕ್ಷ, ಹಿರಿಯ ಸಿವಿಲ್ ನ್ಯಾಯಾಽಶ ರಾಜು ಎನ್. ಮಾತನಾಡಿ, ಮಕ್ಕಳು ಭವಿಷ್ಯದಲ್ಲಿ ಉತ್ತಮ ಸಾಧನೆ ಮಾಡಲು ಶಾರೀರಿಕ ಸದೃಢತೆ ಬಹಳ ಮುಖ್ಯ. ಅದಕ್ಕಾಗಿ ಈ ಪೌಷ್ಠಿಕ ಸಪ್ತಾಹವನ್ನು ದೇಶಾದ್ಯಂತ ಆಚರಿಸುವ ಮೂಲಕ ಅದರ ಬಗ್ಗೆ ಅರಿವು ಮೂಡಿಸಲಾಗುತ್ತಿದೆ. ಅಪೌಷ್ಠಿಕತೆಯನ್ನು ಹೋಗಲಾಡಿಸುವುದೇ ಇದರ ಮುಖ್ಯ ಉದ್ದೇಶ ಎಂದರು.
ಪ್ರಧಾನ ಸಿವಿಲ್ ಮತ್ತು ಜೆಎಂಎಫ್‌ಸಿ ನ್ಯಾಯಾಧೀಶೆ, ತಾಲೂಕು ಕಾನೂನು ಸೇವೆಗಳ ಸಮಿತಿ ಕಾರ್‍ಯದರ್ಶಿ ಶ್ರುತಿ ಎಸ್. ಮಾತನಾಡಿದರು. ಕುಂದಾಪುರ ತಹಶೀಲ್ದಾರ್ ಶೋಭಾಲಕ್ಷ್ಮಿ ಅಧ್ಯಕ್ಷತೆ ವಹಿಸಿದ್ದರು.
ಕುಂದಾಪುರ ಕ್ಷೇತ್ರ ಶಿಕ್ಷಣಾಧಿಕಾರಿ ಶೋಭಾ ಶೆಟ್ಟಿ, ವಕೀಲರ ಸಂಘದ ಪ್ರ. ಕಾರ್‍ಯದರ್ಶಿ ಜೆ. ಶ್ರೀನಾಥ್ ರಾವ್ ಮತ್ತಿತರರು ಉಪಸ್ಥಿತರಿದ್ದರು.
ಸಂಪನ್ಮೂಲ ವ್ಯಕ್ತಿಗಳಾದ ಆಯುಷ್ ಧಾಮ ಆಸ್ಪತ್ರೆಯ ವೈದ್ಯಾಧಿಕಾರಿ ಡಾ| ಸೋನಿ, ಡಾ| ಸ್ವಾತಿ ಶೆಣೈ ಪೌಷ್ಠಿಕತೆ ಬಗ್ಗೆ ಮಾಹಿತಿ ನೀಡಿದರು.
ಕುಂದಾಪುರದ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಅನುರಾಧ ಪ್ರಸ್ತಾವಿಸಿ, ಸ್ವಾಗತಿಸಿದರು. ಪ್ರಭಾವತಿ ಶೆಟ್ಟಿ ಕಾರ್‍ಯಕ್ರಮ ನಿರೂಪಿಸಿದರು.