ಅಂಪಾರು: ‘ನಮ್ಮೂರು-ನಮ್ಮ ಕೆರೆ” ಯೋಜನೆಯಡಿ ಅಭಿವೃದ್ದಿಗೊಂಡ ಕಂಚಾರು ಕೆರೆ ಹಸ್ತಾಂತರ
ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಗ್ರಾಮೀಣ ಪ್ರದೇಶದ ಜನರಿಗೆ ಉಳಿತಾಯ, ಸ್ವಾವಲಂಬನೆ, ಆರ್ಥಿಕ ಪ್ರಗತಿಗೆ ಮಹತ್ತರವಾದ ಕೊಡುಗೆ ನೀಡಿದೆ. ಜಲ ಜಾಗೃತಿಯ ವಿಚಾರದಲ್ಲಿಯೂ ಕೂಡಾ ಅರಿವು ಮೂಡಿಸಿ ಹೂಳು ತುಂಬಿದ ಕೆರೆಗಳಿಗೆ ಕಾಯಕಲ್ಪ ನೀಡುವ ಕಾರ್ಯ ಮಾಡುತ್ತಿರುವುದು ಶ್ಲಾಘನಾರ್ಹವಾದುದು ಎಂದು ಬೈಂದೂರು ವಿಧಾನಸಭಾ ಕ್ಷೇತ್ರದ ಶಾಸಕ ಬಿ.ಎಂ ಸುಕುಮಾರ ಶೆಟ್ಟಿ ಹೇಳಿದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ (ರಿ.) ಕುಂದಾಪುರ, ಗ್ರಾಮ ಪಂಚಾಯತ್ ಅಂಪಾರು, ಕಂಚಾರು ಕೆರೆ ಅಭಿವೃದ್ದಿ ಸಮಿತಿ ಇವರ ಸಹಭಾಗಿತ್ವದಲ್ಲಿ ”ನಮ್ಮೂರು-ನಮ್ಮ ಕೆರೆ” ಕಾರ್ಯಕ್ರಮದಡಿ ಅಭಿವೃದ್ದಿಗೊಂಡ 314ನೇ ಕಂಚಾರು ಕೆರೆಯನ್ನು ಗ್ರಾ.ಪಂ.ಗೆ ಹಸ್ತಾಂತರಿಸಿ, ಕೆರೆಯಂಗಳದಲ್ಲಿ ಗಿಡ ನಾಟಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಬಳಿಕ ಅವರು ಮಾತನಾಡಿದರು.
ಬೈಂದೂರು ವಿಧಾನಸಭಾ ಕ್ಷೇತ್ರದಲ್ಲಿ 79 ಸಾವಿರ ಮನೆಗಳಿಗೆ ಕುಡಿಯುವ ನೀರು ಕಲ್ಪಿಸುವ ಯೋಜನೆಗೆ ಅಕ್ಟೋಬರ್ ಅಂತ್ಯದೊಳಗೆ ಕಾರ್ಯರೂಪಕ್ಕೆ ಬರಲಿದೆ. ಮಲೆನಾಡು ಭಾಗದಲ್ಲಿಯೂ ನೀರಿನ ಸಮಸ್ಯೆ ಇದ್ದು ಅದಕ್ಕೆ ಪರಿಹಾರಕ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ವಸತಿ ರಹಿತರಿಗೆ ಅಮೃತ ಯೋಜನೆಯಡಿ ಅಂಪಾರು, ಶಂಕರನಾರಾಯಣ, ಸಿದ್ಧಾಪುರ, ನಾಡ, ಬಿಜೂರು ಮನೆ ಅವಶ್ಯಕತೆ ಇದ್ದವರಿಗೆ ಮನೆ ನಿರ್ಮಿಸಿಕೊಡಲಾಗುವುದು ಎಂದರು.
ಕುಂದಾಪುರ ಜನಜಾಗೃತಿ ವೇದಿಕೆ ಸ್ಥಾಪಕಾಧ್ಯಕ್ಷ ಬಿ. ಅಪ್ಪಣ್ಣ ಹೆಗ್ಡೆ ಸಭಾ ಕಾರ್ಯಕ್ರಮ ಉದ್ಘಾಟಿಸಿದರು. ಶ್ರೀ ಕ್ಷೇ.ಧ.ಗ್ರಾ.ಯೋಜನೆ ಬಿ.ಸಿ. ಟ್ರಸ್ಟ್ ಮುಖ್ಯಕಾರ್ಯನಿರ್ವಹಣಾಧಿಕಾರಿ ಡಾ. ಎಲ್.ಎಚ್. ಮಂಜುನಾಥ್ ಕೆರೆಗೆ ಬಾಗಿನ ಸಮರ್ಪಿಸಿದರು. ಅಂಪಾರು ಕಂಚಾರುಕೆರೆ ಅಭಿವೃದ್ಧಿ ಸಮಿತಿ ಅಧ್ಯಕ್ಷ ಶಾಮರಾಜ್ ಭಟ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಶ್ರೀ ಕ್ಷೇ.ಧ.ಗ್ರಾ.ಯೋಜನೆಯ ಜಿಲ್ಲಾ ನಿರ್ದೇಶಕ ಗಣೇಶ್ ಬಿ, ಕರಾವಳಿ ಪ್ರಾದೇಶೀಕ ಕಚೇರಿ ಉಡುಪಿ ಶ್ರೀ ಕ್ಷೇ.ಧ.ಗ್ರಾ.ಯೋಜನೆಯ ಪ್ರಾದೇಶಿಕ ನಿರ್ದೇಶಕರಾದ ವಸಂತ ಸಾಲ್ಯಾನ್, ಅಂಪಾರು ಗ್ರಾ.ಪಂ ಅಧ್ಯಕ್ಷೆ ಭಾರತಿ ಶೇಟ್, ಜನಜಾಗೃತಿ ವೇದಿಕೆ ಕುಂದಾಪುರ ತಾಲೂಕು ಅಧ್ಯಕ್ಷ ನವೀನಚಂದ್ರ ಶೆಟ್ಟಿ, ಪ್ರಗತಿ ಬಂಧು ಸ್ವಸಹಾಯ ಸಂಘಗಳ ಕೇಂದ್ರ ಒಕ್ಕೂಟದ ಅಧ್ಯಕ್ಷೆ ಶೋಭಾ ಚಂದ್ರ ಉಪಸ್ಥಿತರಿದ್ದರು.
ಶ್ರೀ ಕ್ಷೇ.ಧ.ಗ್ರಾ.ಯೋಜನೆಯ ಕುಂದಾಪುರ ತಾಲೂಕು ಹಿರಿಯ ಯೋಜನಾಧಿಕಾರಿ ಮುರಳೀಧರ ಕೆ.ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಚೇತನ್ ಕುಮಾರ್ ಕಾರ್ಯಕ್ರಮ ನಿರ್ವಹಿಸಿದರು. ಅಂಪಾರು ಗ್ರಾ.ಪಂ ಸದಸ್ಯ ಅಶೋಕ್ ವಂದಿಸಿದರು.