ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ :ಶಾಲಾ ಶಿಕ್ಷಣ ಇಲಾಖೆ, ಕುಂದಾಪುರ ಮತ್ತು ಸರ್ಕಾರಿ ಪ್ರೌಢಶಾಲೆ ಕಾಳಾವರ ಇವರ ಆಶ್ರಯದಲ್ಲಿ ಬುಧವಾರದಂದು ಪ್ರೌಢಶಾಲಾ ಬಾಲಕ, ಬಾಲಕಿಯರ ಬಾಲ್ ಬ್ಯಾಡ್ಮಿಂಟನ್ ಪಂದ್ಯಾವಳಿ ಕಾಳಾವರ ಪ್ರೌಢಶಾಲಾ ಕ್ರೀಡಾಂಗಣದಲ್ಲಿ ನಡೆಯಿತು.
ಪಂದ್ಯಾವಳಿಯ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ಕಾಳಾವರ ಪಂಚಾಯತ್ ನ ಅಧ್ಯಕ್ಷರಾದ ಮಂಜುನಾಥ ಶೆಟ್ಟಿಗಾರ್ ವಹಿಸಿದ್ದರು.
ಪಂದ್ಯಾವಳಿಯ ಉದ್ಘಾಟನೆಯನ್ನು ಕಾಳಿಂಗ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾದ ಚಂದ್ರಶೇಖರ ಹೆಗ್ಡೆಯವರು ನೆರವೇರಿಸಿ ಪಂದ್ಯಾಕೂಟಕ್ಕೆ ಶುಭ ಹಾರೈಸಿದರು.
ಕ್ರೀಡಾಂಗಣ ಉದ್ಘಾಟಿಸಿ ಮಾತಾಡಿದ ನೇತಾಜಿ ಯುವಕ ಮಂಡಲದ ಅಧ್ಯಕ್ಷ, ಯುವ ಉದ್ಯಮಿ ಭರತಕುಮಾರ ಶೆಟ್ಟಿಯವರು ಸರ್ಕಾರಿ ಪ್ರೌಢಶಾಲೆ ಕಾಳಾವರ ಗುಣಮಟ್ಟದ ಕಾರ್ಯಕ್ರಮಗಳನ್ನು ನಡೆಸುತ್ತಿರುವುದು ಊರಿಗೆ ಹೆಮ್ಮೆ ಎಂದರು.
ಅತಿಥಿಗಳ ಸಾಲಿನಲ್ಲಿ ಕಾಳಾವರ ಪಂಚಾಯತ್ ನ ಮಾಜಿ ಅಧ್ಯಕ್ಷರು ರೋಟೇರಿಯನ್ ರಂಜಿತ್ ಕುಮಾರ್ ಶೆಟ್ಟಿ, ಎಸ್. ಡಿ.ಎಂ.ಸಿ. ಅಧ್ಯಕ್ಷ ರಮೇಶ್ ಆಚಾರ್, ನಿವೃತ್ತ ಮುಖ್ಯೋಪಾಧ್ಯಾಯ ಅಶೋಕ್ ಜಿ ವರ್ಣೆಕರ್, ಕುಂದಾಪುರ ತಾಲೂಕು ದೈಹಿಕ ಶಿಕ್ಷಣ ಶಿಕ್ಷಕ ಸಂಘದ ಅಧ್ಯಕ್ಷ ಪ್ರಕಾಶ್ಚಂದ್ರ ಶೆಟ್ಟಿಯವರು ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.
ಮುಖ್ಯೋಪಾಧ್ಯಾಯಿನಿ ಗಾಯತ್ರಿ ಅಡಿಗ ಸ್ವಾಗತಿಸಿದರು. ಕುಂದಾಪುರ ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿ ರವೀಂದ್ರ ನಾಯಕ್ ಪ್ರಾಸ್ತಾವಿಕ ಮಾತನಾಡಿದರು. ದೈಹಿಕ ಶಿಕ್ಷಣ ಶಿಕ್ಷಕ ಅರುಣ್ ಕುಮಾರ್ ವಂದಿಸಿದರು.
ಬಾಲಕರ ವಿಭಾಗದಲ್ಲಿ ಒಟ್ಟು 10 ತಂಡಗಳು ಹಾಗೂ ಬಾಲಕಿಯರ ವಿಭಾಗದಲ್ಲಿ ಒಟ್ಟು 7 ತಂಡಗಳು ಭಾಗವಹಿಸಿದ್ದವು. ಬಾಲಕಿಯರ ವಿಭಾಗದಲ್ಲಿ ಪ್ರಥಮ ಸ್ಥಾನ ಎಸ್ ವಿ ಆಂಗ್ಲ ಮಾಧ್ಯಮ ಶಾಲೆ ಗಂಗೊಳ್ಳಿ ಪಡೆದರೆ ದ್ವಿತೀಯ ಸ್ಥಾನ ಅತಿಥೇಯ ಕಾಳಾವರ ಪ್ರೌಢಶಾಲೆ ಪಡೆದುಕೊಂಡಿತು. ಬಾಲಕರ ವಿಭಾಗದಲ್ಲಿ ಎಸ್ ವಿ ಆಂಗ್ಲ ಮಾಧ್ಯಮ ಶಾಲೆ ಗಂಗೊಳ್ಳಿ ಪ್ರಥಮ ಸ್ಥಾನ ಪಡೆದರೆ ದ್ವಿತೀಯ ಸ್ಥಾನ ಸರ್ಕಾರಿ ಪದವಿ ಪೂರ್ವ ಕಾಲೇಜು ಕುಂದಾಪುರ ಪಡೆದುಕೊಂಡಿತು.
ಸಮಾರೋಪ ಸಮಾರಂಭದಲ್ಲಿ ಮುಂಜಾನೆಯ ಅತಿಥಿಗಳೊಂದಿಗೆ ಸರ್ಕಾರಿ ಪದವಿ ಪೂರ್ವ ಕಾಲೇಜು ಕುಂದಾಪುರದ ಉಪಪ್ರಾಂಶುಪಾಲ ಕಿರಣ್ ಹೆಗ್ಡೆಯವರು ಸೇರಿ ಪ್ರಶಸ್ತಿಗಳನ್ನು ವಿತರಿಸಿದರು. ಕಾರ್ಯಕ್ರಮವನ್ನು ಶಿಕ್ಷಕ ದಿನೇಶ್ ಪ್ರಭು ನಿರೂಪಿಸಿದರು.