ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ :ಮೈಸೂರು ಮರ್ಕಂಟೈಲ್ ಕಂಪನಿ ಅಧ್ಯಕ್ಷರು ಮತ್ತು ಹೆಗ್ಗುಂಜೆ ರಾಜೀವ ಶೆಟ್ಟಿ ಚಾರಿಟೇಬಲ್ ಸೊಸೈಟಿ ಬೆಂಗಳೂರು ಇದರ ಅಧ್ಯಕ್ಷರಾಗಿರುವ ಡಾ.ಶ್ರೀನಿವಾಸ ಶೆಟ್ಟಿ ಹಾಲಾಡಿ (ಎಚ್.ಎಸ್.ಶೆಟ್ಟಿ) ಇವರಿಗೆ ಪ್ರತಿಷ್ಟಿತ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಬೆಳಗಾವಿ ಇವರು 23ನೇ ಘಟಿಕೋತ್ಸವ ಸಂದರ್ಭದಲ್ಲಿ ಗೌರವ ಡಾಕ್ಟರ್ ಆಫ್ ಸೈನ್ಸ್ ಗೌರವವನ್ನು ನೀಡಿ ಗೌರವಿಸಿದೆ. ಆ ಹಿನ್ನೆಲೆಯಲ್ಲಿ ಹುಟ್ಟೂರಿನಲ್ಲಿ ಡಾ.ಶ್ರೀನಿವಾಸ ಶೆಟ್ಟಿ ಹಾಲಾಡಿ ಅವರನ್ನು ಸನ್ಮಾನಿಸುವ ಕಾರ್ಯಕ್ರಮವನ್ನು ಸೆ.22 ಶುಕ್ರವಾರ, ಪೂರ್ವಾಹ್ನ 11 ಗಂಟೆಗೆ ಹಾಲಾಡಿಯ ಶ್ರೀಮತಿ ಶಾಲಿನಿ ಜಿ.ಶಂಕರ್ ಕನ್ವೆಶನ್ ಸೆಂಟರ್‍ನಲ್ಲಿ ಆಯೋಜಿಸಲಾಗಿದೆ ಎಂದು ಡಾ.ಶ್ರೀನಿವಾಸ ಶೆಟ್ಟಿ ಹಾಲಾಡಿ ಹುಟ್ಟೂರ ಸನ್ಮಾನ ಸಮಿತಿ ಅಧ್ಯಕ್ಷರಾದ ಸರ್ವೋತ್ತಮ ಶೆಟ್ಟಿ ಹೇಳಿದರು.
ಅವರು ಕುಂದಾಪುರದಲ್ಲಿ ಸುದ್ಧಿಗೋಷ್ಠಿಯಲ್ಲಿ ಮಾತನಾಡಿದರು.
ಈ ಕಾರ್ಯಕ್ರಮವನ್ನು ಕರ್ನಾಟಕ ರಾಜ್ಯ ಸರ್ಕಾರದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವರು ಹಾಗೂ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಉದ್ಘಾಟಿಸಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕುಂದಾಪುರ ವಿಧಾನಸಭಾ ಕ್ಷೇತ್ರದ ಶಾಸಕ ಕಿರಣ್ ಕುಮಾರ್ ಕೊಡ್ಗಿ ವಹಿಸಲಿದ್ದಾರೆ. ವೇ.ಮೂ.ತಟ್ಟುವಟ್ಟು ವಾಸುದೇವ ಜೋಯಿಸ ಹಾಲಾಡಿ ಆಶೀರ್ವಚನ ನೀಡಲಿದ್ದಾರೆ. ಪತ್ರಕರ್ತ ಹರಿಪ್ರಕಾಶ್ ಕೋಣೆಮನೆ ಪ್ರಾಸ್ತಾವಿಕ ಮಾತುಗಳನ್ನಾಡಲಿದ್ದಾರೆ. ಕರ್ನಾಟಕ ವಿಧಾನಪರಿಷತ್ ಮಾಜಿ ಸಭಾಪತಿ ಕೆ ಪ್ರತಾಪ್ ಚಂದ್ರ ಶೆಟ್ಟಿ ಅವರು ಸನ್ಮಾನಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಜಯಪ್ರಕಾಶ್ ಹೆಗ್ಡೆ, ವಿಧಾನ ಪರಿಷತ್ ಸದಸ್ಯ ಕೋಟ ಶ್ರೀನಿವಾಸ್ ಪೂಜಾರಿ, ಉದ್ಯಮಿ ಎಂ ದಿನೇಶ್ ಹೆಗ್ಡೆ ಮೊಳಹಳ್ಳಿ ಹಾಲಾಡಿ ಗ್ರಾಮ ಪಂಚಾಯತ್ ಅಧ್ಯಕ್ಷ ಅಶೋಕ್ ಶೆಟ್ಟಿ ಚೋರಾಡಿ, ಭಾಗವಹಿಸಲಿದ್ದಾರೆ ಎಂದರು.
ಹಾಲಾಡಿಯ ಶಿಕ್ಷಕರಾದ ಹೆಗ್ಗುಂಜೆ ರಾಜೀವ ಶೆಟ್ಟಿ ಮತ್ತು ಹಾಲಾಡಿ ಕುದ್ರುಮನೆ ಸರೋಜಿನಿ ಶೆಟ್ಟಿಯವರ ಪುತ್ರರಾದ ಶ್ರೀನಿವಾಸ ಶೆಟ್ಟಿ ಹಾಲಾಡಿ ಯವರು ರಫ್ತು ಉದ್ಯಮ ಕ್ಷೇತ್ರದಲ್ಲಿ ಹೆಚ್.ಎಸ್ .ಶೆಟ್ಟಿ ಎಂದೇ ಪ್ರಸಿದ್ಧರಾಗಿದ್ದಾರೆ. ಭಾರತದ ಕೃಷಿ ಉತ್ಪನ್ನಗಳ ರಫ್ತು ವಹಿವಾಟಿನಲ್ಲಿ ಅಭೂತಪೂರ್ವ ಸಾಧನೆಯನ್ನು ಮಾಡಿದ್ದಾರೆ. ಕಾರವಾರ ಬಂದರು ಸಮೀಪ ದೇಶದಲ್ಲಿ ಪ್ರಥಮವಾಗಿ 2001 ರಲ್ಲಿ ಯಶಸ್ವಿಯಾಗಿ ಬಿಸಿ ಶಿಲಾಜಿತು (ಬಿಟುಮೆನ್) ಸರಕನ್ನು ಬಂದರುವಿನಲ್ಲಿ ಲಂಗರು ಹಾಕಿದ ಹಡಗಿನಿಂದ ದ್ರವ ರೂಪದಲ್ಲಿ ಸಂಗ್ರಾಹರಕ್ಕೆ ಸಾಗಣಿಕೆ ಮಾಡಿ, ಸಂಗ್ರಹಿಸಿ ನಿರ್ವಹಣೆ ಮಾಡಿದ ಕೀರ್ತಿ ಇವರಿಗೆ ಸಲ್ಲುತ್ತದೆ. ಅಲ್ಲದೆ ಪುನರ್ ನವೀಕರಿಸಬಹುದಾದ ಜಲ ವಿದ್ಯುತ್, ಸೌರ ವಿದ್ಯುತ್, ಪವನ ವಿದ್ಯುತ್, ಜೈವಿಕ ವಿದ್ಯುತ್ ಸ್ಥಾವರಗಳ ಸ್ಥಾಪನೆ ಹಾಗೂ ಹಲವಾರು ವಿದ್ಯಾರ್ಥಿ ಅಭಿವೃದ್ಧಿಯ ಮತ್ತು ಸಮಾಜ ಸೇವೆಯನ್ನು ಮಾಡಿರುವುದನ್ನು ಪರಿಗಣಿಸಿ ಪ್ರತಿಷ್ಠಿತ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಬೆಳಗಾವಿ, ಇವರು ಡಾಕ್ಟರ್ ಆಫ್ ಸೈನ್ಸ್ ಗೌರವ ಪದವಿ ನೀಡಿ ಗೌರವಿಸಿದ್ದಾರೆ.
ಶ್ರೀನಿವಾಸ್ ಶೆಟ್ಟಿ ಹಾಲಾಡಿ ಅವರು 2008 ಕ್ಕಿಂತ ಮೊದಲು ತಮ್ಮ ಮೈಸೂರ್ ಮರ್ಕಂಟೈಲ್ ಕಂಪನಿಯ ಮೂಲಕ ತನ್ನ ಹುಟ್ಟೂರಾದ ಹಾಲಾಡಿಗೆ ಶೈಕ್ಷಣಿಕವಾಗಿ ಸಹಕಾರವನ್ನು ನೀಡುತ್ತಿದ್ದರು. 2008ರಲ್ಲಿ ಇವರ ಅಧ್ಯಕ್ಷತೆಯಲ್ಲಿ ಸ್ಥಾಪಿತವಾದ ಹೆಗ್ಗುಂಜೆ ರಾಜೀವ ಶೆಟ್ಟಿ ಚಾರಿಟೇಬಲ್ ಸೊಸೈಟಿ (ರಿ) ಬೆಂಗಳೂರು ಇದರ ಮೂಲಕ ಹಾಲಾಡಿಯ ಶಾಲೆಗಳ ವಿದ್ಯಾರ್ಥಿಗಳೊಂದಿಗೆ ಉಡುಪಿ ಹಾಗೂ ಇತರ ಜಿಲ್ಲೆಯ ವಿದ್ಯಾರ್ಥಿಗಳಿಗೂ ಸಮವಸ್ತ್ರ ಹಾಗೂ ಇನ್ನಿತರ ಅವಶ್ಯಕತೆಗಳನ್ನು ನೀಡುತ್ತಾ ಬಂದಿದ್ದಾರೆ. ಇವರು 2016 ರಲ್ಲಿ ಹಾಲಾಡಿ ಸರಕಾರಿ ಪದವಿಪೂರ್ವ ಕಾಲೇಜಿಗೆ ಸುಸಜ್ಜಿತವಾದ ಕಟ್ಟಡ, ಪ್ರಯೋಗಾಲಯ ಕಂಪ್ಯೂಟರ್ ಲ್ಯಾಬ್ ಒದಗಿಸಿಕೊಟ್ಟು ಸುವ್ಯವಸ್ಥಿತ ಹೆಗ್ಗುಂಜೆ ರಾಜೀವ ಶೆಟ್ಟಿ ಪದವಿ ಪೂರ್ವ ಕಾಲೇಜಾಗಿ ಪುನರ್ ನಾಮಕರಣಗೊಂಡಿತು ಎಂದು ಹೇಳಿದರು.
ಸುದ್ಧಿಗೋಷ್ಠಿಯಲ್ಲಿ ನ್ಯಾಯವಾದಿ ರವಿರಾಜ್ ಶೆಟ್ಟಿ ಟ್ರಸ್ಟ್‍ನ ಕೋಶಾಧಿಕಾರಿ ರಾಜೀವ ಶೆಟ್ಟಿ, ಸಮಿತಿಯ ಉದಯಕುಮಾರ್ ಶೆಟ್ಟಿ, ಕೃಷ್ಣ ಪೂಜಾರಿ ಅಮಾಸೆಬೈಲು, ಸೂರ್ಯಪ್ರಕಾಶ್, ಸೀತಾರಾಮ ಗಾಣಿಗ ಹಾಲಾಡಿ, ಜ್ಞಾನೇಶ್ ಶೆಟ್ಟಿ, ಆಶೀಷ್ ಶೆಟ್ಟಿ ಉಪಸ್ಥಿತರಿದ್ದರು.