ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ : ಶ್ರೀ ರಾಮ ಕ್ರಡಿಟ್ ಸೊಸೈಟಿ ವರದಿ ಸಾಲಿನಲ್ಲಿ 219 ಕೋಟಿ ರೂ. ಗಳಿಗೂ ಮಿಕ್ಕಿ ವ್ಯವಹಾರವನ್ನು ನಡೆಸಿ, 167.96 ಲಕ್ಷ ರೂ. ನಿವ್ಹಳ ಲಾಭ ಗಳಿಸಿದೆ. ಈ ಬಾರಿ ಸೊಸೈಟಿಯ ಸದಸ್ಯರಿಗೆ ಶೇ.17 ಡಿವೆಂಡ್ ನೀಡಲು ನಿರ್ಧರಿಸಲಾಗಿದೆ ಎಂದು ಸೊಸೈಟಿಯ ಅಧ್ಯಕ್ಷ ನಾಗರಾಜ್ ಕಾಮಧೇನು ತಿಳಿಸಿದರು.
ನಗರದ ಶ್ರೀ ಸೀತಾರಾಮಚಂದ್ರ ದೇವಸ್ಥಾನದ ರಜತ ಮಹೋತ್ಸವ ಸಭಾಭವನದಲ್ಲಿ ಭಾನುವಾರ ನಡೆದ ಸಂಸ್ಥೆಯ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ವರದಿ ವರ್ಷದಲ್ಲಿ 6308.38 ಲಕ್ಷ ರೂ. ಠೇವಣಿ ಹೊಂದಿದ್ದು, 4833.99 ಲಕ್ಷ ರೂ. ಸದಸ್ಯರಿಗೆ ಸಾಲ ಸೌಲಭ್ಯ ನೀಡಲಾಗಿದೆ. 985.55 ಲಕ್ಷ ರೂಪಾಯಿಗಳನ್ನು ವಿವಿಧ ನಿಧಿಗಳಲ್ಲಿ ಸಂಚಯಿಸಲಾಗಿದೆ. ಬ್ಯಾಂಕಿನ ಗ್ರಾಹಕರ ಅನುಕೂಲಕ್ಕಾಗಿ ಹಲವು ಯೋಜನೆಗಳನ್ನು ಅನುಷ್ಠಾನಗೊಳಿಸಲಾಗಿದ್ದು, ತ್ವರಿತ ಸ್ಪಂದನೆ, ಪಾರದರ್ಶಕ ಆಡಳಿತ ವ್ಯವಸ್ಥೆ, ತಂತ್ರಜ್ಞಾನ ಬಳಕೆ, ತಜ್ಞರ ಸಲಹೆಗಳೊಂದಿಗೆ ಸೊಸೈಟಿಯನ್ನು ಗ್ರಾಹಕ ಸ್ನೇಹಿ ಸಂಸ್ಥೆಯನ್ನಾಗಿಸಲು ಆಡಳಿತ ಮಂಡಳಿ ಬದ್ಧತೆಯನ್ನು ಹೊಂದಿದೆ ಎಂದು ನುಡಿದರು.
ಸಭೆಯಲ್ಲಿ ಭಾಗವಹಿಸಿದ ವಿಶ್ವ ರಾಮಕ್ಷತ್ರೀಯ ಸಮಾಜ ಸೇವಾ ಸಂಘದ ಅಧ್ಯಕ್ಷರಾದ ಶಶಿಧರ ನಾಯಕ್ ಅವರು, 28 ವರ್ಷಗಳ ಹಿಂದೆ ಸಮಾಜದ ಭವಿಷ್ಯದ ಅವಶ್ಯಕತೆ ಹಾಗೂ ಬೆಳವಣಿಗೆಯ ಕರಣದಿಂದ ರಾಮಕ್ಷತ್ರೀಯ ಸಮಾಜದ ಹಿರಿಯರು ಸ್ಥಾಪಿಸಿರುವ ಈ ಸಂಸ್ಥೆ ಇಂದು ಅಭಿವೃದ್ಧಿ ಪಥದಲ್ಲಿ ಮುನ್ನೆಡೆಯುತ್ತಿರುವುದು ಸಾರ್ಥಕತೆಯನ್ನು ತೋರುತ್ತಿದೆ. ಗ್ರಾಹರ ವಿಶ್ವಾಸ ಹಾಗೂ ಭರವಸೆಯನ್ನು ಉಳಿಸಿಕೊಂಡಿರುವ ಶ್ರೀರಾಮ ಕ್ರಡಿಟ್ ಸೊಸೈಟಿ ತನ್ನ ಸಮಾಜಮುಖಿ ಕಾರ್ಯಗಳಿಂದಲೂ ಗುರುತಿಸಿಕೊಂಡಿರುವುದು ಅಭಿನಂದನೀಯ. ನಿಸ್ವಾರ್ಥ ಚಿಂತನೆಯ ಆಡಳಿತ ಮಂಡಳಿ ಸಂಸ್ಥೆಯ ಚುಕ್ಕಾಣಿ ಹಿಡಿದಿದ್ದು, ಇನ್ನಷ್ಟು ಶಾಖೆಗಳನ್ನು ಮಾಡಿ, ಹೆಚ್ಚಿನ ಗ್ರಾಹಕರೊಂದಿಗೆ ಸಂಸ್ಥೆ ವಿಸ್ತಾರವಾಗಿ ಬೆಳೆಯಲಿ ಎಂದು ಹಾರೈಸಿದರು.
ರಾಮಕ್ಷತ್ರೀಯ ಸಮಾಜದ ಪ್ರತಿಭಾನ್ವಿತ 17 ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು. ಸೊಸೈಟಿಯ ಸದಸ್ಯರಾಗಿರುವ ತಲ್ಲೂರು ಗ್ರಾಮ ಪಂಚಾಯಿತಿಯ ನೂತನ ಅಧ್ಯಕ್ಷರಾದ ಗಿರೀಶ್ ಎಸ್.ನಾಯಕ್, ಉಪ್ಪೂರು ಗ್ರಾಮ ಪಂಚಾಯಿತಿಯ ನೂತನ ಅಧ್ಯಕ್ಷರಾದ ಗಾಯತ್ರಿ ಉಪ್ಪೂರು, ಹಂಗಳೂರು ಗ್ರಾಮ ಪಂಚಾಯಿತಿಯ ನೂತನ ಉಪಾಧ್ಯಕ್ಷರಾದ ಸತೀಶ್ ನೇರಂಬಳ್ಳಿ, ಕೋಟೇಶ್ವರ ಗ್ರಾಮ ಪಂಚಾಯಿತಿಯ ನೂತನ ಉಪಾಧ್ಯಕ್ಷೆಯಾದ ಆಶಾ ರಾಮಚಂದ್ರ, 5ನೇ ಬಾರಿ ಸಾಸ್ತಾನ ವ್ಯವಸಾಯ ಸೇವಾ ಸಹಕಾರಿ ಬ್ಯಾಂಕಿನ ನಿರ್ದೇಶಕರಾಗಿ ಆಯ್ಕೆಯಾದ ಶ್ರೀಧರ ಪಿ.ಎಸ್ ಹಾಗೂ ಕುಂದಾಪುರ ರಾಮಕ್ಷತ್ರೀಯ ಸಮಾಜದ ನೂತನ ಅಧ್ಯಕ್ಷರಾದ ಡಿ.ಕೆ.ಪ್ರಭಾಕರ ಅವರನ್ನು ಗೌರವಿಸಲಾಯಿತು.
ಉಪಾಧ್ಯಕ್ಷ ರಾಧಾಕೃಷ್ಣ ಬಿ ನಾಯಕ್, ನಿರ್ದೇಶಕರಾದ ಅಶೋಕ್ ಬೆಟ್ಟಿನ್, ಶ್ರೀಧರ ಪಿ.ಎಸ್, ದೇವಕಿ ಪಿ ಸಣ್ಣಯ್ಯ, ಎಂ.ಜಿ.ರಾಜೇಶ್, ಜಿ.ಆರ್.ಪ್ರಕಾಶ್, ಕೆ.ರಾಮನಾಥ ನಾಯಕ್, ಎನ್.ವಿ.ದಿನೇಶ್, ಗೋಪಾಲಕೃಷ್ಣ, ಲಕ್ಷ್ಮೀ ಡಿ.ಕೆ.ಪ್ರಭಾಕರ, ಮಂಜುನಾಥ್ ಮದ್ದೋಡಿ, ರವೀಂದ್ರ ಕಾವೇರಿ, ಅಜೇಯ್ ಹವಾಲ್ದಾರ್, ಡಿ.ಸದಾಶಿವ, ಕರುಣಾಕರ ರಾವ್ ಇದ್ದರು.
ಪ್ರಭಾರ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬಿ.ರಾಘವೇಂದ್ರ ನಿರೂಪಿಸಿದರು, ನಾಗರಾಜ್ ಕಾಮಧೇನು ಸ್ವಾಗತಿಸಿದರು, ಆಶೋಕ್ ಬೆಟ್ಟಿನ್ ವಂದಿಸಿದರು.