Video :
ಕುಂದಾಪುರ ಮಿರರ್ ಸುದ್ದಿ….
ಕುಂದಾಪುರ: ಅದು ನರ್ಸಿ ಅಜ್ಜಿಯ ಜೋಪಡಿ. ನರ್ಸಿ ಅಜ್ಜಿ ದಂಪತಿಗಳಿಗೆ ಕೆಲಸ ಮಾಡುವುದೇನು, ನಡೆದಾಡುವುದಕ್ಕೂ ಕಷ್ಟದ ಸ್ಥಿತಿ. ಹೌದು ಇದು ಕುಂದಾಪುರ ತಾಲೂಕಿನ ಯಡಾಡಿ ಮತ್ಯಾಡಿ ಗ್ರಾಮದ ಬಡ ವೃದ್ಧ ದಂಪತಿಗಳ ದುರಂತ ಕಥೆ.
ಕಿತ್ತು ತಿನ್ನುವ ಬಡತನದ ಜೊತೆಗೆ ವಯೋಸಹಜ ಸಮಸ್ಯೆಗಳ ಜೊತೆಗೆ ಕಿತ್ತುಹೋದ ಜೋಪಡಿ. 2020ರ ಲಾಕ್ ಡೌನ್ ಸಂದರ್ಭದಲ್ಲಿ ದಾನಿಗಳು ನೀಡಿದ ರೇಷನ್ ಕಿಟ್ ಹಂಚುವ ಸಂದರ್ಭದಲ್ಲಿ ಕಂಡು ಬಂದ ಈ ನರ್ಸಿ ಅಜ್ಜಿಯ ಜೋಪಡಿಗೆ ರೂಪಕೊಟ್ಟು ಹೊಸ ಮನೆ ನಿರ್ಮಿಸಿದ ವಾಟ್ಸಾಪ್ ಪ್ರೆಂಡ್ಸ್ ಗ್ರೂಪ್ ಸಾಧನೆಯೂ ಸಣ್ಣದಲ್ಲ.
ಹೌದು. ಕುಂದಾಪುರ ಫ್ರೆಂಡ್ಸ್ ವಾಟ್ಸಾಪ್ ಗ್ರೂಪ್ ನ ಅಡ್ಮಿನ್ ದಿನೇಶ್ ಪುತ್ರನ್ ಹಾಗೂ ಸ್ನೇಹಿತ ನಾಗೇಶ್ ನಾವಡರ ಕನಸು ಬುಧವಾರ ನನಸಾಗಿದೆ. ಸುಮಾರು ಒಂದೂವರೆ ಲಕ್ಷ ಮೌಲ್ಯದ ಪುಟ್ಟದಾದ ಮನೆಯೊಂದನ್ನು ನರ್ಸಿ ಅಜ್ಜಿ ದಂಪತಿಗಳಿಗೆ ಹಸ್ತಾಂತರಿಸಿದ್ದಾರೆ.
ಲಾಕ್ ಡೌನ್ ಬಳಿಕ ಅಜ್ಜಿಗೆ ಮನೆಕಟ್ಟುವ ಬಗ್ಗೆ ದಾನಿಗಳನ್ನು ಹುಡುಕಿದರೂ ಪ್ರಯೋಜನವಾಗಿಲ್ಲ. ಪ್ರತಿಷ್ಟಿತ ಕಂಪೆನಿಗಳಿಗೂ ಮನವಿ ಸಲ್ಲಿಸಿದರು. ಬಳಿಕ ಸ್ನೇಹಿತ ರವಿ ಮೊಗವೀರ ಜೊತೆ ಸೇರಿ ಸರ್ಕಾರದ ಸವಲತ್ತುಗಳ ಬಗ್ಗೆಯೂ ಪ್ರಯತ್ನಿಸಿ ಸೋತಿದ್ದಾರೆ.
ಕೊನೆಗೆ ದೃಡ ಮನಸ್ಸು ಮಾಡಿದ ಗೆಳೆಯರು ಸೇರಿ ತಮ್ಮ ಕುಂದಾಪುರ ಫ್ರೆಂಡ್ಸ್ ವಾಟ್ಸಾಪ್ ಗ್ರೂಪ್ ಹಾಗೂ ಕುಟುಂಬಿಕರ ಸಹಕಾರದಿಂದ, ಜೇಸೀ ಕುಂದಾಪುರ ಸಿಟಿ ಹಾಗೂ ರೋಟರಿ ಕುಂದಾಪುರ ಸನ್ ರೈಸ್ ಸದಸ್ಯರ ಬೆಂಬಲದಿಂದ ಸುಂದರ ಮನೆಯೊಂದು ಸಿದ್ಧವಾಗಿಯೇ ಬಿಟ್ಟಿತು.
ದಿನೇಶ್ ಪುತ್ರನ್ ವಿಠಲವಾಡಿ ಮನೆಯ ಸಂಪೂರ್ಣ ಜವಾಬ್ಧಾರಿ ನಿರ್ವಹಿಸಿದರೆ ರವಿ ಮೊಗವೀರ ಕಾಮಗಾರಿ ಉಸ್ತುವಾರಿ ನಿರ್ವಹಿಸಿದರು. ಬುಧವಾರ ನರ್ಸಿ ಅಜ್ಜಿ ಹಾಗೂ ಅವರ ಪತಿ ಅನಂತ ಮನೆಯನ್ನು ಉದ್ಘಾಟಿಸಿದರು. ನಾಗೇಶ್ ನಾವಡ, ಹುಸೈನ್ ಹೈಕಾಡಿ, ಡಾ. ಸೋನಿ ಡಿ ಕೋಸ್ತಾ, ರೇಷ್ಮಾ ಕೋಟ್ಯಾನ್ ಮೊದಲಾದವರು ಉಪಸ್ಥಿತರಿದ್ದರು.