ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ: ಕೋಡಿಯ ಬ್ಯಾರೀಸ್ ಸಮೂಹ ಶಿಕ್ಷಣ ಸಂಸ್ಥೆಯಿಂದ ಅಕ್ಟೋಬರ್ ೨ ರಂದು ಗಾಂಧಿ ಜಯಂತಿ ಆಚರಿಸಲಾಯಿತು. ಈ ಸಂದರ್ಭದಲ್ಲಿ ಬ್ಯಾರೀಸ್ ಶಿಕ್ಷ ಮತ್ತು ಶಿಕ್ಷಣ ಫೌಂಡೇಶನ್ , ಬ್ಯಾರೀಸ್ ಸಂಸ್ಥೆಗಳ ಸಿಬ್ಬಂದಿಯ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಪ್ರತಿ ವರ್ಷ ಕೊಡಮಾಡುವ ಸಹಾಯ ಧನವನ್ನು ವಿತರಿಸಲಾಯಿತು.
ಆರ್ಥಿಕ ಮುಗ್ಗಟ್ಟಿನಿಂದಾಗಿ ಬ್ಯಾರೀಸ್ ಸಂಸ್ಥೆಗಳಲ್ಲಿರುವ ಸಿಬ್ಬಂದಿಯವರ ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದು ಎಂಬ ಉದ್ದೇಶದೊಂದಿಗೆ ಸ್ಥಾಪನೆಗೊಂಡ ಈ ಸಂಸ್ಥೆ, ಬ್ಯಾರೀಸ್ ಗ್ರೂಪಿನ ಚೇರ್ಮನ್ ರಾದ ಸಯ್ಯದ ಮೊಹಮದ್ ಬ್ಯಾರಿಯವರ ಕಾಳಜಿಯ ಪ್ರತೀಕವಾಗಿದೆ, ಈ ಸಂದರ್ಭದಲ್ಲಿ ಮಾತನಾಡಿದ ಬ್ಯಾರೀಸ್ ಸಮೂಹ ಸಂಸ್ಥೆಗಳ ನಿರ್ದೇಶಕರಾದ ದೋಮ ಚಂದ್ರಶೇಖರ್ ಅವರು ” ಗಾಂಧಿ ಜಯಂತಿ ಆಚರಣೆಯ ಸಂಧರ್ಭದಲ್ಲಿ ನಡೆದ ಈ ಸಹಾಯ ಧನ ವಿತರಣೆ ಬಹಳ ಔಚಿತ್ಯಪೂರ್ಣವಾದುದು ಎಂದು ಹೇಳುತ್ತಾ ಗಾಂಧೀಜಿಯವರ ಶಿಕ್ಷಣದ ಕಲ್ಪನೆಯ ಕುರಿತು ಮಾತನಾಡಿದರು. ಇದೇ ದಿನ ಜನಿಸಿದ ಇನ್ನೋರ್ವ ಧೀಮಂತ ನಾಯಕ ಲಾಲ್ ಬಹುದ್ದೂರ್ ಶಾಸ್ತ್ರೀ ಯವರನ್ನು ನೆನಪಿಸಿಕೊಳ್ಳುತ್ತಾ, ಇಂತಹ ಅಪೂರ್ವ ಮಹಾನ್ ವ್ಯಕ್ತಿಗಳ ಚರಿತ್ರೆ ಓದುವ ಹವ್ಯಾಸವನ್ನು ಬೆಳೆಯಿಸಿಕೊಳ್ಳಬೇಕು ಎಂದು ಹೇಳಿದರು.
ಕನ್ನಡ ಉಪನ್ಯಾಸಕರಾದ ಸಂದೀಪ್ ಶೆಟ್ಟಿ ಯವರು ಗಾಂಧಿ ಮತ್ತು ಶಾಸ್ತ್ರೀ ಯವರ ವ್ಯಕ್ತಿತ್ವಗಳ ಕುರಿತು ಮಾತನಾಡಿದರು.
ಸಂಸ್ಥೆಗಳ ಅಧ್ಯಕ್ಷರಾದ ಹಾಜಿ ಕೆ ಅಬ್ದುಲ್ ರೆಹಮಾನ್ ಸಹಾಯ ಧನವನ್ನು ವಿತರಿಸಿ ‘ ಗಾಂಧೀಜಿ ಮತ್ತು ಇತರ ನಾಯಕರ ಹೋರಾಟದಿಂದ ನಮ್ಮ ದೇಶಕ್ಕೆ ಸ್ವಾತಂತ್ರ್ಯ ದೊರಿತಿದೆ. ನಾವೆಲ್ಲರೂ ಒಗ್ಗಟ್ಟಿನಿಂದ ಶ್ರಮಿಸಿ ನಮ್ಮ ದೇಶವನ್ನು ಕಟ್ಟೋಣ ಎಂದು ಹೇಳಿದರು.
ಬ್ಯಾರೀಸ್ ಶಿಕ್ಷಣ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಸಿದ್ದಪ್ಪ ಕೆ ಎಸ್, ಪ್ರಾಸ್ತಾವಿಕ ಮಾತುಗಳನ್ನಾಡಿ , ಸ್ವಾಗತಿಸಿ, ಕಾರ್ಯಕ್ರಮ ನಿರ್ವಹಣೆ ಮಾಡಿದರು.