ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ :ಮಹಾತ್ಮಾ ಗಾಂಧಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿಯವರ ಜಯಂತಿಯನ್ನು ಅತ್ಯಂತ ಶೃದ್ಧಾ ಭಕ್ತಿಯಿಂದ ಆಚರಿಸಲಾಯಿತು. ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮುಖ್ಯೋಪಾಧ್ಯಾಯಿನಿ ಗಾಯತ್ರಿ ಅಡಿಗರು ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಗ್ರಾಮ ಪಂಚಾಯತ್ ಸದಸ್ಯ ಹಾಗೂ ಎಸ್ ಡಿ ಎಂ ಸಿ ಸದಸ್ಯ ಜಯಪ್ರಕಾಶ್ ಶೆಟ್ಟಿ, ಎಸ್ ಡಿ ಎಂ ಸಿ ಸದಸ್ಯ ಸತೀಶ್ ಜೋಗಿ ಉಪಸ್ಥಿತರಿದ್ದರು.
ಹಿಂದಿನ ಸಾಲಿನಲ್ಲಿ ಎಸ್. ಡಿ.ಎಂ.ಸಿ. ಅಧ್ಯಕ್ಷರಾಗಿ, ಶಾಲೆಯ ಸಮಗ್ರ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸಿದ ನಿತ್ಯಾನಂದ ದೇವಾಡಿಗರನ್ನು ಸನ್ಮಾನಿಸಲಾಯಿತು. ನಂತರ ಮಾತನಾಡಿ ನಿತ್ಯಾನಂದರು ತನ್ನ ಅವಧಿಯಲ್ಲಿ ಶಿಕ್ಷಕರು, ವಿದ್ಯಾರ್ಥಿಗಳು, ಪೋಷಕರು, ವಿದ್ಯಾರ್ಥಿಗಳೆಲ್ಲ ಸೇರಿ ಶಾಲೆ ಒಂದು ಕುಟುಂಬದಂತೆ ಭಾಸವಾಗಿತ್ತು ಎಂದು ತಮ್ಮ ಅನುಭವ ಹಂಚಿಕೊಂಡರು. ಮುಂದಿನ ಅಧ್ಯಕ್ಷ ರಮೇಶ್ ಆಚಾರ್ ರವರಿಗೆ ಇನ್ನೂ ಹೆಚ್ಚಿನ ಸಾಧನೆ ಮಾಡುವಲ್ಲಿ ಸಹಕಾರ ನೀಡುವುದಾಗಿ ಭರವಸೆ ನೀಡಿದರು.
2022-23ನೆಯ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ವಿಶೇಷ ಸಾಧನೆ ಮಾಡಿದ 8 ವಿದ್ಯಾರ್ಥಿಗಳನ್ನು ಗುರುತಿಸಿ ಅಭಿನಂದಿಸಲಾಯಿತು. ಅಭಿನಂದನೆಗೆ ಉತ್ತರಿಸಿದ ಸಂಧ್ಯಾ, ಹಾಗೂ ಸುಜಿತ್ ಧನ್ಯವಾದಗಳನ್ನು ಅರ್ಪಿಸಿದರು ಹಾಗೂ ಮುಂದಿನ ಸಾಲಿನಲ್ಲಿ ಈ ಸಾಧಕರ ಸಂಖ್ಯೆ ದ್ವಿಗುಣಗೊಳ್ಳಲಿ ಎಂದರು. ಅಧ್ಯಕ್ಷೀಯ ಮಾತುಗಳಲ್ಲಿ ಮುಖ್ಯೋಪಾಧ್ಯಾಯಿನಿಯವರು ಈ ಎಲ್ಲಾ ಸಾಧನೆಗೆ ಕಾರಣಕರ್ತರಾದ ಶಿಕ್ಷಕರು, ಎಸ್ ಡಿ ಎಂ ಸಿ, ಪೋಷಕರು, ಹಾಗೂ ಗ್ರಾಮಸ್ಥರನ್ನು ಸ್ಮರಿಸಿದರು.
ಗಣೇಶ ಶೆಟ್ಟಿಗಾರ್ ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿದರು. ಶಿಕ್ಷಕ ಅರುಣ್ ಕುಮಾರ್ ವಂದಿಸಿದರು, ಶಿಕ್ಷಕ ರವಿರಾಜ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.