ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ : ಇಲ್ಲಿನ ಪುರಸಭೆ ವ್ಯಾಪ್ತಿಯಲ್ಲಿ ಅಧಿಕೃತ ಆಟೋ ನಿಲ್ದಾಣಗಳಿಗಾಗಿ ದೀರ್ಘಕಾಲದಿಂದ ಒತ್ತಾಯಿಸುತ್ತಿದ್ದರೂ ಈ ನಿಟ್ಟಿನಲ್ಲಿ ಸಾಕಷ್ಟು ಕೆಲಸಗಳು ಆಗದೇ ಯಥಾಸ್ಥಿತಿ ಮುಂದುವರಿದಿದೆ. ಆಡಳಿತ ವ್ಯವಸ್ಥೆ ರಿಕ್ಷಾ ಚಾಲಕ-ಮಾಲಕರನ್ನು ನಿರಂತರವಾಗಿ ನಿರ್ಲಕ್ಷ್ಯ ಮಾಡುತ್ತಲೇ ಬಂದಿದೆ. 40 ವರ್ಷಗಳಿಂದ ಕಡೆಗಣಿಸುತ್ತಲೇ ಬಂದಿದೆ. ತುಂಬಾ ಕಷ್ಟದಿಂದ ರಿಕ್ಷಾ ಚಾಲಕರು ಇವತ್ತು ಬದುಕು ಕಟ್ಟಿಕೊಳ್ಳುತ್ತಿದ್ದಾರೆ. ಸಮಾಜಕ್ಕೆ ತಮ್ಮದೆಯಾದ ಸೇವೆ ನೀಡುತ್ತಿದ್ದಾರೆ. ಇದಕ್ಕೆ ಪೂರಕವಾಗಿ ಸಹಕಾರ ನೀಡಬೇಕಾದವರು ನಮ್ಮ ಬೇಡಿಕೆಯನ್ನು ನಿರ್ಲಕ್ಷ್ಯ ಮಾಡುತ್ತಿದ್ದಾರೆ. ಇದೀಗ ವಿನಾಯಕ ರಿಕ್ಷಾ ನಿಲ್ದಾಣ ವಿಚಾರದಲ್ಲಿಯೂ ಕೂಡಾ ಉಚ್ಚ ನ್ಯಾಯಾಲಯದ ಆದೇಶ ಪಾಲಿಸುವ ಸಲುವಾಗಿ ಅವೈಜ್ಞಾನಿಕವಾಗಿ ಬದಲಾವಣೆ ಮಾಡಿದೆ. ಈ ಬಗ್ಗೆ ನ್ಯಾಯಕ್ಕಾಗಿ ಸಹಾಯಕ ಆಯುಕ್ತರಿಗೆ ಮನವಿ ಸಲ್ಲಿಸಿದ್ದೇವೆ. ಸಮಸ್ಯೆ ಪರಿಹಾರ ದೊರಕದೇ ಇದ್ದರೆ ಪ್ರತಿಭಟನೆಗೆ ಮುಂದಾಗುವುದು ಅನಿವಾರ್ಯವಾಗುತ್ತದೆ ಎಂದು ಭಾರತೀಯ ಮಜ್ದೂರ್ ಸಂಘದ ಸ್ಥಾಪಕಧ್ಯಕ್ಷ ಶಂಕರ ಅಂಕದಕಟ್ಟೆ ಹೇಳಿದರು.
ಅವರು ಕುಂದಾಪುರ ಪ್ರೆಸ್‍ಕ್ಲಬ್‍ನಲ್ಲಿ ಸುದ್ಧಿಗೋಷ್ಠಿಯಲ್ಲಿ ಮಾತನಾಡಿದರು. ಉಡುಪಿ ಜಿಲ್ಲೆಯ ಬೇರೆ ಬೇರೆ ಕಡೆಗಳಲ್ಲಿ ನಿರ್ದಿಷ್ಟ ರಿಕ್ಷಾ ನಿಲ್ದಾಣವನ್ನು ಅಲ್ಲಿನ ಸ್ಥಳೀಯಾಡಳಿತ ನೀಡಿದೆ. ವಿಶೇಷವೆಂದರೆ ಕುಂದಾಪುರ ಪುರಸಭಾ ವ್ಯಾಪ್ತಿಯಲ್ಲಿ ಸೂಕ್ತ ನಿಲ್ದಾಣಕ್ಕೆ ಸ್ಥಳ ಗುರುತಿಸುವ ಕೆಲಸವಾಗಿಲ್ಲ. ಈ ಹಿಂದೆ ಪ್ರತಿಭಟನೆ ನಡೆಸಿ ಮನವಿ ಕೊಟ್ಟರೂ ಪ್ರಯೋಜನವಾಗಿಲ್ಲ ಎಂದರು.
ಅಟೋರಿಕ್ಷಾ ಟ್ಯಾಕ್ಸಿ ಮೆಟಾಡೋರ್ ಡ್ರೈವರ್ಸ್ ಎಸೋಸಿಯೇಶನ್ ಇಂಟೆಕ್ ಕುಂದಾಪುರ ತಾಲೂಕು ಅಧ್ಯಕ್ಷ ಲಕ್ಷ್ಮಣ ಶೆಟ್ಟಿ ಮಾತನಾಡಿ, ಎಲ್ಲ ರಿಕ್ಷಾ ನಿಲ್ದಾಣಗಳು ಖಾಸಗಿ ಸ್ಥಳದ ಎದುರುಗಡೆಗೆ ಇದೆ. ಎಲ್ಲರೂ ಹೈಕೋರ್ಟ್ ಆದೇಶದ ಮೂಲಕ ತೆರವಿಗೆ ಮುಂದಾದರೆ ರಿಕ್ಷಾದವರ ಬದುಕು ಏನಾಗಬೇಕು. ಖಾಯಂ ಆಗಿ ರಿಕ್ಷಾದವರಿಗೆ ಒಂದು ನೆಲೆ ಕೊಡುವ ಕೆಲಸ ಸ್ಥಳೀಯಾಡಳಿತಕ್ಕೆ ಆಗಿಲ್ಲ. ರಿಕ್ಷಾ, ಟ್ಯಾಕ್ಷಿ, ಗೂಡ್ಸ್ ವಾಹನದವರ ಬಗ್ಗೆ ಈ ರೀತಿಯ ನಿರ್ಲಕ್ಷ್ಯ ಏಕೆ? ವಿನಾಯಕ ನಿಲ್ದಾಣವನ್ನು ತೆರವು ಮಾಡಿದರು. ಬದಲಿ ಸ್ಥಳವನ್ನು ನೀಡಿರುವುದು ಕೂಡಾ ತೀರಾ ಅವೈಜ್ಞಾನಿಕವಾಗಿದೆ. 22 ರಿಕ್ಷಾಗಳು ಇಲ್ಲಿವೆ. ಈಗ ಗ್ರಂಥಾಲಯದ ಎದುರು ರಿಕ್ಷ ನಿಲ್ದಾಣ ಎಂದು ಭೋರ್ಡ್ ಹಾಕಿದ್ದಾರೆ. ಇದರಿಂದ ರಿಕ್ಷದವರಿಗೂ ಅನುಕೂಲವಿಲ್ಲ, ಸಾರ್ವಜನಿಕರಿಗೂ ಪ್ರಯೋಜನವಿಲ್ಲ ಎಂದರು.
ಕುಂದಾಪುರ ತಾಲೂಕು ಅಟೋರಿಕ್ಷಾ ಮತ್ತು ವಾಹನ ಚಾಲಕರ ಸಂಘ ಸಿಐಟಿಯು ಅಧ್ಯಕ್ಷ ರಮೇಶ ಮಾತನಾಡಿ, ವಿನಾಯಕ ನಿಲ್ದಾಣದಿಂದ ಈಗ ನೀಡಿರುವ ಸ್ಥಳಕ್ಕೆ ಒಂದು ಕಿ.ಮೀ ಆಗುತ್ತದೆ. ಯಾವುದೇ ಪ್ರಯೋಜನವಿಲ್ಲ. ವಿನಾಯಕದಿಂದ ಕೋಡಿಗೆ ಹೋಗಲು ಜನರಿಗೆ ರಿಕ್ಷಾದ ಅವಶ್ಯಕತೆ ಇರುತ್ತದೆ. ಈಗ ಅಲ್ಲಿ ರಿಕ್ಷಾ ನಿಲುಗಡೆಗೆ ಅವಕಾಶ ಇಲ್ಲದಿರುವುದರಿಂದ ಕೋಡಿ ಭಾಗಕ್ಕೆ ಹೋಗುವ ಜನರಿಗೆ ಸಮಸ್ಯೆಯಾಗುತ್ತದೆ. ಬಸ್ ನಿಲ್ದಾಣದ ಹತ್ತಿರವೇ ರಿಕ್ಷಾ ನಿಲ್ದಾಣ ಇರುವುದು ಸ್ವಾಭಾವಿಕ. ಆದರೆ ಪುರಸಭೆ ಗ್ರಂಥಾಲಯದ ಹತ್ತಿರಕ್ಕೆ ಸ್ಥಳಾಂತರ ಮಾಡಿರುವುದು ತೀರಾ ಅವೈಜ್ಞಾನಿಕವಾದ ಕ್ರಮವಾಗಿದೆ. ಕೂಡಲೇ ಸೂಕ್ತ ಕ್ರಮವಹಿಸಿ ವಿನಾಯಕ ಬಸ್ ನಿಲ್ದಾಣದ ಸಮೀಪದಲ್ಲಿ ಸರ್ಕಾರಿ ಸ್ಥಳದಲ್ಲಿ ರಿಕ್ಷಾ ನಿಲುಗಡೆಗೆ ಅವಕಾಶ ಕಲ್ಪಿಸಬೇಕು ಎಂದರು.
ಸುದ್ಧಿಗೋಷ್ಠಿಯಲ್ಲಿ ಬಿಎಂಎಸ್ ರಿಕ್ಷಾ ಯೂನಿಯನ್ ಅಧ್ಯಕ್ಷ ಮಂಜುನಾಥ ಹಾಗೂ ವಿವಿಧ ರಿಕ್ಷಾ ಸಂಘಟನೆಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.