ಅರ್ಥಾಂಕುರದಲ್ಲಿ ನರೇಂದ್ರಕುಮಾರ್‍ರಿಗೆ ಅಭಿಮಾನದ ಸಮ್ಮಾನ
ಕೋಟ: ವ್ಯಕ್ತಿ ಸಮಾಜಮುಖಿಯಾಗಿ ಬೆಳೆಯಬೇಕು. ಪ್ರತಿಭೆ ನಿಂತ ನೀರಾಗಬಾರದು. ಅವಕಾಶ ಪಡೆದು ಇತರರಿಗೆ ಅವಕಾಶ ನೀಡುವ ಸಲುವಾಗಿ ಸದಾ ಚಿಂತಿಸುವ ನರೇಂದ್ರ ಕುಮಾರ್ ಹತ್ತು ಹಲವು ಕಾರ್ಯಕ್ರಮವನ್ನು ಸಂಯೋಜಿಸಿ ಸೈ ಎನಿಸಿಕೊಂಡವರು. ಜೇಸಿ ತರಬೇತುದಾರರಾಗಿ, ನಿರೂಪಕರಾಗಿ, ಸಂಘಟಕರಾಗಿ, ಬರಹಗಾರರಾಗಿ, ಕನ್ನಡ ಸಾಹಿತ್ಯ ಪರಿಷತ್ತಿನ ಪರಿಚಾರಕರಾಗಿ ಗುರುತಿಸಿಕೊಂಡು ಆದರ್ಶ ಶಿಕ್ಷಕರಾಗಿ ವಿದ್ಯಾರ್ಥಿಗಳನ್ನು ರೂಪಿಸಿ ಇದೀಗ ಕರ್ನಾಟಕ ರಾಜ್ಯ ಶಿಕ್ಷಕ ಪ್ರಶಸ್ತಿಗೆ ಭಾಜನರಾದದ್ದು ಸಂಸ್ಥೆಯ ನಿಕಟವರ್ತಿಗಳಾಗಿ ಸಂಸ್ಥೆಗೆ ಹೆಮ್ಮೆ ತಂದ ವಿಶಯ. ಇವರನ್ನು ಸಮ್ಮಾನಿಸಿ ಧನ್ಯತೆಯನ್ನು ಹೊಂದಿದೆ ಎಂದು ಯಕ್ಷಗುರುಗಳಾದ ಸೀತಾರಾಮ ಶೆಟ್ಟಿ ಕೊೈಕೂರು ಅಭಿನಂದನಾ ಮಾತುಗಳನ್ನಾಡಿದರು.
ತೆಕ್ಕಟ್ಟೆ ಹಯಗ್ರೀವದಲ್ಲಿ ಅ.1ರಂದು ಯಶಸ್ವೀ ಕಲಾವೃಂದ ಕೊಮೆ ತಕ್ಕಟ್ಟೆ ಹಾಗೂ ರೋಟರಿ ಕ್ಲಬ್ ತೆಕ್ಕಟ್ಟೆ ಆಯೋಜಿಸಿದ “ಅರ್ಥಾಂಕುರ-3” ಕಾರ್ಯಕ್ರಮದಲ್ಲಿ ನರೇಂದ್ರ ಕುಮಾರ್ ಕೋಟ ಇವರನ್ನು ಸಮ್ಮಾನಿಸಿ ಸೀತಾರಾಮ ಶೆಟ್ಟಿ ಮಾತನ್ನಾಡಿದರು.
ಅವಕಾಶ ಹಾಗೂ ಸ್ವಾತಂತ್ರ್ಯ ಸಿಕ್ಕಿದರೆ ಸಾಧಿಸುವುದಕ್ಕೆ ಸಾಧ್ಯ. ಹೊಸ ಪರಿಕಲ್ಪನೆಗಳು ಇತರರಿಗೂ ಪ್ರೇರಣೆ ಆಗುತ್ತದೆ. ಹೊಸ ಪ್ರತಿಭೆಗಳಿಗೆ ಅವಕಾಶ ಕಲ್ಪಿಸುವ ಕಾಯಕ ಬಹಳ ದೊಡ್ಡದು. ಸಂಸ್ಥೆ ತಾನು ಬೆಳೆಯುತ್ತಾ ಇತರರನ್ನು ಬೆಳೆಸುವ, ಗುರುತಿಸುವ ದೊಡ್ಡ ಜವಾಬ್ಧಾರಿಯನ್ನು ಹೊತ್ತು ಕರಾವಳಿ ಭಾಗದಲ್ಲಿ ಉತ್ತುಂಗದಲ್ಲಿದೆ. ಬೆಳೆಸಿದ ಮಕ್ಕಳನ್ನು ಬಳಸಿ, ತೊಡಗಿಸಿಕೊಂಡರೆ ಅದ್ಭುತ ಪ್ರತಿಭೆ ಅನಾವರಣಗೊಳ್ಳುತ್ತದೆ. ಸಂಸ್ಥೆಯ ಕಾರ್ಯ ಶ್ಲಾಘನೀಯ ಎಂದು ಅಭಿನಂದನೆಯನ್ನು ಸ್ವೀಕರಿಸಿ, ನರೇಂದ್ರ ಕುಮಾರ್ ಕೋಟ ಮಾತನ್ನಾಡಿದರು.
ಮುಖ್ಯ ಅತಿಥಿಗಳಾಗಿ ಹಿರಿಯ ಅರ್ಥಧಾರಿ ಕುಮಾರ್ ಮಾಸ್ಟರ್ ಕೋಟೇಶ್ವರ ಮಾತನ್ನಾಡಿ, ಬಡಗಿನ ಸಂಘಟಕರು ಬಡಗಿನ ಕಲಾವಿದರಿಗೆ ಅವಕಾಶ ನೀಡಿ ಬೆಳೆಸುವ ಕೆಲಸವನ್ನೇ ಮರೆತಿದ್ದಾರೆ. ಸಮರ್ಥ ಅರ್ಥದಾರಿಗಳು ಇದ್ದೂ ತೆಂಕಿನ ವ್ಯಾಮೋಹದಿಂದ ಬಡಗಿನ ಕಲಾವಿದರನ್ನು ನಿರ್ಲಕ್ಷಿಸಿ, ಅವಕಾಶ ವಂಚಿತರನ್ನಾಗಿ ಮಾಡಿರುವುದು ನಿಜಕ್ಕೂ ವಿಷಾದದ ಸಂಗತಿ. ಯಶಸ್ವೀ ಕಲಾವೃಂದದ ಅರ್ಥಾಂಕುರ ನಿಜಕ್ಕೂ ಅರ್ಥಪೂರ್ಣ ಎಂದು ವ್ಯಕ್ತಪಡಿಸಿದರು.
ತೆಕ್ಕಟ್ಟೆ ರೋಟರಿ ಕ್ಲಬ್ ಅಧ್ಯಕ್ಷ ಸುಧಾಕರ ಶೆಟ್ಟಿ, ಗುರುಗಳಾದ ಲಂಬೋದರ ಹೆಗಡೆ ಉಪಸ್ಥಿತರಿದ್ದರು. ಗೌರವಾಧ್ಯಕ್ಷ ಗೋಪಾಲ ಪೂಜಾರಿ ಸ್ವಾಗತಿಸಿದರು. ರೊ. ಡಾ. ಗಣೇಶ್ ಧನ್ಯವಾದಗೈದರು. ಕೈಲಾಸ ಕಲಾಕ್ಷೇತ್ರದ ಅಧ್ಯಕ್ಷ ಹೆರಿಯ ಮಾಸ್ಟರ್ ಕಾರ್ಯಕ್ರಮ ನಿರೂಪಿಸಿದರು. ಬಳಿಕ ಹೊಸ ತಲೆಮಾರಿನ ಅರ್ಥಧಾರಿಗಳ ಪರಿಶೋಧ ಕಾರ್ಯಕ್ರಮದಡಿಯಲ್ಲಿ ಕೃಷ್ಣಾರ್ಜುನ ಕಾಳಗ ತಾಳಮದ್ದಲೆ ರಂಗದಲ್ಲಿ ಪ್ರಸ್ತುತಿಗೊಂಡಿತು.